ಹಾಸನ: ಹಾಸನಾಂಬ ಜಾತ್ರಾ ಮಹೋತ್ಸವದ ಅಂಗವಾಗಿ ಜಿಲ್ಲಾ ಕ್ರೀಡಾಂಗಣದ ಯುವಕರ ಸಂಘದ ವತಿಯಿಂದ ಗುರುವಾರ ಶಾಂತಿಗ್ರಾಮದ ಬೆಂಗಳೂರು- ಮಂಗಳೂರು ರಸ್ತೆಯಲ್ಲಿರುವ ಟೋಲ್ ಬಳಿಯಿಂದ ನಗರದ ಹಾಸನಾಂಬ ದೇವಸ್ಥಾನದವರೆಗೂ ರಸ್ತೆ ಓಟ ನಡೆಸಲಾಯಿತು.
ರಸ್ತೆ ಓಟಕ್ಕೆ ಚಾಲನೆ ನೀಡಿದ ಟೈಮ್ಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಬಿ.ಕೆ. ಗಂಗಾಧರ್ ಮಾತನಾಡಿ, ಜಿಲ್ಲಾ ಕ್ರೀಡಾಂಗಣದಲ್ಲಿ ದಿನ ನಿತ್ಯ ಹಾಜರಿರುವ ಯುವಕರೆಲ್ಲರೂ ಸೇರಿ ಈ ರಸ್ತೆ ಓಟ ನಡೆಸಿರುವುದು ಸಂತಸದ ಸಂಗತಿ. ಹಾಸನಾಂಬ ಹಾಗೂ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಜನ ಸಾಮಾನ್ಯರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಈ ಓಟವನ್ನು ಆಯೋಜನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಇಂತಹದೊಂದು ಆರೋಗ್ಯದ ಬಗ್ಗೆ ಕಾಳಜಿ ಮೂಡಿಸುವ ಓಟದ ಸ್ಪರ್ಧೆ ನಮ್ಮ ನಗರದಲ್ಲಿ ನಡೆಯಬೇಕು ಎಂದು ಹೇಳಿದರು.
ಸುಮಾರು 50ಕ್ಕೂ ಅಧಿಕ ಯುವಕರು ಇಂದು ಈ ರಸ್ತೆ ಓಟದಲ್ಲಿ ಭಾಗಿಯಾಗಿದ್ದು, ಶಾಂತಿಗ್ರಾಮ ಟೋಲ್ ಬಳಿಯಿಂದ ಹಾಸನಾಂಬ ದೇವಾಲಯದವರೆಗೆ ಅತ್ಯಂತ ಸುರಕ್ಷಿತವಾಗಿ ರಸ್ತೆ ಓಟ ನಡೆಸಲಾಗಿದೆ. ಪ್ರತಿಯೊಬ್ಬರಿಗೂ ಇಂದು ಆರೋಗ್ಯ ಬಹಳ ಮುಖ್ಯವಾಗಿದ್ದು, ದಿನ ಬೆಳಿಗ್ಗೆ ವಾಕ್ ಹಾಗೂ ಓಟ (ಜಾಗ್) ಮಾಡುವುದನ್ನು ರೂಢಿಸಿಕೊಳ್ಳಬೇಕು. ಬದಲಾದ ನಮ್ಮ ಆಹಾರ ಪದ್ಧತಿಯಿಂದಾಗಿ ಇಂದು ಅನೇಕ ಕಾಯಿಲೆಗಳು ನಮ್ಮನ್ನು ಆವರಿಸಿಕೊಳ್ಳುತ್ತಿದ್ದು, ಆರೋಗ್ಯದ ಬಗ್ಗೆ ಎಲ್ಲರೂ ಕಾಳಜಿ ಹೊಂದಬೇಕಾದ ಅವಶ್ಯಕವಾಗಿದೆ ಎಂದರು.