ಜಿಲ್ಲೆ

ಹಾಸನಾಂಬ ಜಾತ್ರಾ ಮಹೋತ್ಸವಕ್ಕೆ ಯೋಜನೆ ತಯಾರಿಗೆ ಸೂಚನೆ

Hassan - Ramesh H R

ಹಾಸನ: ಹಾಸನಾಂಬ ದೇವಿ ಕೀರ್ತಿ ಪ್ರಪಂಚದಾದ್ಯಂತ ಪಸರಿಸಿದ್ದು, 2025ರಲ್ಲಿ ಹಾಸನಾಂಬ ದೇವಿ ಜಾತ್ರಾ ಮಹೋತ್ಸವವನ್ನು ಅಚ್ಚುಕಟ್ಟಾಗಿ ಆಯೋಜನೆ ಮಾಡುವ ನಿಟ್ಟಿನಲ್ಲಿ ಮುಂಚಿತವಾಗಿ ಯೋಜನೆ ತಯಾರಿಸಬೇಕಿದೆ ಎಂದು ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೇವಿ ದರ್ಶನಕ್ಕೆ ಈ ಬಾರಿ ಹತ್ತು ದೇಶಗಳಿಂದ ಆನ್‌ಲೈನ್‌ನಲ್ಲಿ ಬುಕ್ಕಿಂಗ್ ಮಾಡಿದ್ದರು. ಮುಂದಿನ ಬಾರಿ ಇದು ಇನ್ನು ಹೆಚ್ಚಾಗಲಿದೆ. ದೇವಿ ದರ್ಶನಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಸೂಕ್ತ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಅತ್ಯಂತ ಅಗತ್ಯವಿದೆ. ಜಾತ್ರಾ ಮಹೋತ್ಸವವನ್ನು ಯಶಸ್ವಿಯಾಗಿಸಲು ಈಗಿನಿಂದಲೇ ತಯಾರಿ ಅಗತ್ಯವಿದೆ ಎಂದು ತಿಳಿಸಿದರು.

ದೇವಾಲಯದ ಎಡಭಾಗದಲ್ಲಿರುವ ಹಳೇ ಮನೆಗಳನ್ನು ನೇರ ಖರೀದಿಗೆ ಒಪ್ಪಿಕೊಡುವುದಾದರೆ ಜ.15 ರೊಳಗೆ ಖರೀದಿಗೆ ಕ್ರಮ ವಹಿಸುವಂತೆ ದೇವಾಲಯದ ಆಡಳಿತಾಧಿಕಾರಿಗೆ ಸೂಚಿಸಿದರು. ಈ ಬಾರಿ ಪ್ರಸಾದ ವಿತರಣೆಗೆ ವ್ಯವಸ್ಥೆ ಮಾಡಲಾಗಿದ್ದ ಜಾಗವನ್ನು ಸಹ ಖರೀದಿಗೆ ಕ್ರಮ ವಹಿಸುವಂತೆ ತಿಳಿಸಿದರು. ಅಗತ್ಯಬಿದ್ದರೆ ಭೂಸ್ವಾಧೀನಕ್ಕೆ ಕ್ರಮವಹಿಸಲು ನಿರ್ದೇಶನ ನೀಡಿದರು.

ದೇವಾಲಯದ ದುರಸ್ತಿ, ದೇವಾಲಯಕ್ಕೆ ಬಣ್ಣ, ಬ್ಯಾರಿಕೇಡ್, ಪ್ರತಿಯೊಂದನ್ನು ಜವಾಬ್ದಾರಿಯಿಂದ ನಿರ್ವಹಿಸಲು ಸಮಿತಿ ರಚಿಸಲು ಆಡಳಿತಾಧಿಕಾರಿಗೆ ಸೂಚನೆ ನೀಡಿದರಲ್ಲದೆ, ಪಾಸ್ ರದ್ದು ಮಾಡಲು ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲು ತಿಳಿಸಿದರು. ಹಾಸನಾಂಬ ಜಾತ್ರಾ ಮಹೋತ್ಸವದಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದವರಿಗೆ ಪ್ರಶಂಸೆ ಪತ್ರ ನೀಡುವಂತೆ ಸೂಚಿಸಿದರು. ಇಸ್ಕಾನ್ ದೇವಾಲಯದವರು ದೊನ್ನೆ ಪ್ರಸಾದ ಹಾಗೂ ಲಡ್ಡು ಪ್ರಸಾದವನ್ನು ಉತ್ತಮ ಗುಣಮಟ್ಟದಲ್ಲಿ ಭಕ್ತಾಧಿಗಳಿಗೆ ನೀಡಿದ್ದಾರೆ. ಅವರ ಸೇವೆ ಬಹಳ ಅಚ್ಚುಕಟ್ಟು ಹಾಗೂ ಉತ್ತಮವಾಗಿತ್ತು ಎಂದು ಸ್ಮರಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ಅವರು ಮಾತನಾಡಿ, ಹಾಸನಾಂಬ ದೇವಿ ದರ್ಶನಕ್ಕೆ ನಿರೀಕ್ಷೆಗೂ ಮೀರಿ ಜನ ಆಗಮಿಸುತ್ತಾರೆ. ಜನ ಸಂದಣಿ ನಿಯಂತ್ರಣಕ್ಕೆ ಹೆಚ್ಚಿನ ಸಂಖ್ಯೆಯ ಬ್ಯಾರಿಕೇಡ್ ಅಗತ್ಯವಿದೆ ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ, ಭೂ ದಾಖಲೆಗಳ ಇಲಾಖೆ ಉಪ ನಿರ್ದೇಶಕರಾದ ಸುಜಯ್, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರರಾದ ಗಿರೀಶ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.