ಜಿಲ್ಲೆ

ಹಾಸನಾಂಬ ಜಾತ್ರಾ ಮಹೋತ್ಸವ: ವಿವಿಧ ಅರ್ಚಕರೊಂದಿಗೆ ಸಭೆ

ಹಾಸನ: ಹಾಸನಾಂಬ ಜಾತ್ರಾ ಮಹೋತ್ಸವದ ಹಿನ್ನಲೆಯಲ್ಲಿ ಅರ್ಚಕರು ದೇವರಿಗೆ ವಿಶೇಷ ಅಲಂಕಾರ ಮಾಡಿ ಉತ್ತಮ ಸೇವೆ ಕಲ್ಪಿಸುವ ಮೂಲಕ ಭಕ್ತಾದಿಗಳಿಗೆ ದೇವರ ಮೇಲಿರುವ ಭಕ್ತಿಯನ್ನು ಉದ್ದೀಪನಗೊಳಿಸುವಂತೆ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ದೇವಾಲಯಗಳ ಅರ್ಚಕರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಹಾಸನಾಂಬ ದೇವಾಲಯದ ಬಾಗಿಲು ತೆರೆದು ದಿನದಿಂದ ಮುಚ್ಚುವ ದಿನದ ವರೆಗೂ ಪ್ರತಿದಿನ ಜಿಲ್ಲೆಯ ಎಲ್ಲಾ ದೇವಸ್ಥಾನಗಳಲ್ಲೂ ಅಂದಿನ ಪೂಜೆ ಮತ್ತು ಅಲಂಕಾರಕ್ಕೆ ಸಂಬಂದಿಸಿದಂತೆ ಬ್ಯಾನರ್ ಗಳಲ್ಲಿ ವಿವರಣೆ ಹಾಕುವಂತೆ ಸೂಚನೆ ನೀಡಿದರು.
ಹಾಸನಾಂಬ ಜಾತ್ರಾ ಮಹೋತ್ಸವ ಅ.24 ರಿಂದ ನ.3 ವರೆಗೆ ನಡೆಯಲಿದೆ. ಅ.24 ಮತ್ತು ನ.3 ಹೊರತು ಪಡಿಸಿ ಉಳಿದ ದಿನಗಳಲ್ಲಿ ಸಾರ್ವಜನಿಕರಿಗೆ ದೇವಿ ದರ್ಶನಕ್ಕೆ ಅವಕಾಶ ಇರುತ್ತದೆ.ದೇವಾಲಯದ ಒಳ ಮತ್ತು ಹೊರ ಆವರಣದ ಸ್ವಚ್ಚತೆಗೆ ಸ್ಥಳೀಯರ ಸಹಕಾರದಿಂದ ಶ್ರಮದಾನ ಆಯೋಜನೆ ಮಾಡುವಂತೆ ಅರ್ಚಕರಿಗೆ ತಿಳಿಸಿದರಲ್ಲದೆ, ದೇವಾಲಯಕ್ಕೆ ವಿದ್ಯುತ್ ದೀಪಾಲಂಕಾರಕ್ಕೆ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಕ್ರಮಕೈಗೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ 2455 ದೇವಾಲಯಗಳಿವೆ. ಇವುಗಳನ್ನು ಸರ್ವೇ ಮಾಡಿ ದಾಖಲೆ ಮಾಡಲಾಗುತ್ತಿದೆ ತಿಳಿಸಿದರು.
ಭಕ್ತಾದಿಗಳು ಹಾಸನಾಂಬೆ ದೇವಿ ದರ್ಶನ ಪಡೆದ ನಂತರ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳು ಹಾಗೂ ದೇವಸ್ಥಾನಗಳಿಗೆ ಭೇಟಿ ನೀಡಲು ಸಹಕಾರಿಯಾಗುವಂತೆ ಪ್ಯಾಕೆಜ್ ಟೂರ್ ಆಯೋಜನೆ ಮಾಡಲಾಗಿದೆ. ಕೆ.ಎಸ್.ಆರ್.ಟಿ.ಸಿ ಪ್ಯಾಕೆಜ್ ಟೂರ್‌ನಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳ ಜೊತೆಗೆ ಅದೇ ಮಾರ್ಗದಲ್ಲಿ ಬರುವ ಕೆಲವು ದೇವಸ್ಥಾನಗಳಿಗೂ ಭಕ್ತಾದಿಗಳು ಭೇಟಿ ನೀಡುವರು ಎಂದು ಹೇಳಿದರು.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ನಾಯ್ಡು, ಉಪವಿಭಾಗಾಧಿಕಾರಿ ಹಾಗೂ ಹಾಸನಾಂಬ ದೇವಾಲಯದ ಆಡಳಿತಾಧಿಕಾರಿ ಮಾರುತಿ, ಮುಜರಾಯಿ ತಹಸೀಲ್ದಾರ್ ಲತಾ ಹಾಗೂ ಮತ್ತಿತತರು ಉಪಸ್ಥಿತರಿದ್ದರು.