ಜಿಲ್ಲೆ

ಹಾಸನಾಂಬ ಜಾತ್ರಾ ಮಹೋತ್ಸವ ಯಶಸ್ಸಿಗೆ ಕಾರಣೀಕರ್ತರಿಗೆ ಜಿಲ್ಲಾಡಳಿತ ವತಿಯಿಂದ ಅಭಿನಂದನೆ

ಹಾಸನ : ಹಾಸನದ ಅಧಿದೇವತೆ ಹಾಸನಾಂಬ ಜಾತ್ರಾ ಮಹೋತ್ಸವ ಯಶಸ್ಸಿಗೆ ಕಾರಣೀಕರ್ತರಾದ ಎಲ್ಲರಿಗೂ ಜಿಲ್ಲಾಡಳಿತ ವತಿಯಿಂದ ಬುಧವಾರ ನಗರದ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು.
ನ. 2 ರಿಂದ 16ರ ವರೆಗೆ ಹಾಸನಾಂಬ ಜಾತ್ರೆಗೆ ರಾಜ್ಯದ ವಿವಿಧ ಮೂಲೆಗಳಿಂದ ಲಕ್ಷಾಂತರ ಜನರು ಬಂದಿದ್ದರು. ದೇವಿ ದರ್ಶನಕ್ಕೆ ಯಾವುದೇ ಸಮಸ್ಯೆಯಾಗದಂತೆ ದಿನದ 24 ಗಂಟೆ ಕರ್ತವ್ಯ ನಿರ್ವಹಿಸಿದ ಸ್ಕೌಟ್ಸ್ ಅಂಡ್ ಗೈಡ್ಸ್‌ನ ಸಾವಿರಾರು ಕಾರ್ಯಕರ್ತರು, ಪೊಲೀಸ್ ಹಾಗು ಕಂದಾಯ ಇಲಾಖೆ ನೌಕರರು, ಮಾಧ್ಯಮ ಮಿತ್ರರಿಗೆ ಜಿಲ್ಲಾಡಳಿತ ಕೃತಜ್ಞತೆಯನ್ನು ಸಲ್ಲಿಸಿತು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಮಾತನಾಡಿ, ಹಾಸನಾಂಬ ಉತ್ಸವದಲ್ಲಿ ನಾವೆಲ್ಲ ಒಂದು ಕುಟುಂಬವೆಂಬಂತೆ ಸೇವೆ ಸಲ್ಲಿಸಿ ಯಶಸ್ವಿಗೊಳಿಸಿದ್ದೇವೆ. ಇದಕ್ಕೆ ಕಾರಣರಾದ ಪ್ರತಿಯೊಬ್ಬರಿಗೆ ಹೃದಯಾಂತರಾಳದಿಂದ ಧನ್ಯವಾದ ತಿಳಿಸುತ್ತೇನೆ ಎಂದರು.
ಉತ್ಸವದ ಸಿದ್ಧತೆ ಆರಂಭಿಸಿದ ಮೊದಲ ಕೆಲಸವಾಗಿ ಸಾಕಷ್ಟು ಶ್ರಮವಹಿಸಿ ದೇವಸ್ಥಾನದ ಪಕ್ಕದಲ್ಲಿದ್ದ ಅರ್ಚಕರ ಮನೆ ಖರೀದಿ, ಕಟ್ಟಡ ದುರಸ್ತಿ ಕಾರ್ಯ, ಕಳಸ ಬದಲಾಯಿಸುವ ಪ್ರಕ್ರಿಯೆ, ಭಕ್ತರಿಗೆ ಸೌಕರ್ಯ ಕಲ್ಪಿಸುವ ವ್ಯವಸ್ಥೆ ಎಲ್ಲವೂ ಅಚ್ಚುಕಟ್ಟಾಗಿ ನೆರವೇರಿತು. ದಿನದ 24 ಗಂಟೆಗಳ ಭಕ್ತರಿಗೆ ದೇವಿಯ ದರ್ಶನದ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಅರ್ಚಕರ ಸಲಹೆ ಪಡೆದು ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದೆವು. ಪೂರ್ವ ಸಿದ್ಧತೆ ವೇಳೆ ಹಲವರು ನೀಡಿದ ಮಾರ್ಗದರ್ಶನ ಅನುಕೂಲವಾಯಿತು. ಈ ಬಾರಿ ವಾರ್ ರೂಂ, ಸಿಸಿಟಿವಿ ಕ್ಯಾಮರಾ ಅಳವಡಿಕೆ, ವಾಕಿಟಾಕಿ ಬಳಕೆ ಮಾಡಿಕೊಂಡಿದ್ದರಿಂದ ಹೆಚ್ಚಿನ ನೆರವಾಯಿತು ಎಂದು ಹೇಳಿದರು.
ಹಾಸನಾಂಬ ದರ್ಶನಕ್ಕೆ ಬಂದಿದ್ದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೆಚ್ಚುಗೆ ವ್ಯಕ್ತಪಡಿದ್ದಾರೆ. ಲಕ್ಷಾಂತರ ಭಕ್ತರು, ಸಚಿವರು, ಶಾಸಕರು, ಹಲವು ಗಣ್ಯರು ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ಆಶೀರ್ವಾದ ಪಡೆದುಕೊಂಡಿದ್ದಾರೆ. ಉತ್ಸದ ವೇಳೆ ಹಾಸನದಲ್ಲಿ ದೀಪಾಲಂಕಾರದಿಂದ ಕನಸಿನ ಲೋಕವೇ ಸೃಷ್ಟಿಯಾದಂತಿತ್ತು. ದೇವಾಲಯದ ಆವರಣದಲ್ಲಿ ಗುಣಾತ್ಮಾಕ ವಾತಾವರಣ ನಿರ್ಮಾಣವಾಗಿತ್ತು ಎಂದು ಭಕ್ತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೆಲ್ಲವೂ ದೇವಿಯ ದಯೆಯಿಂದಲೇ ನಡೆದಿದೆ ಎಂದರು.
ಉತ್ಸವ ನಮ್ಮ ಪಾಲಿಗೆ ಒಂದು ರೀತಿಯಲ್ಲಿ ಚದುರಂಗದ ಆಟವಾಗಿದ್ದು, ನಾನು ಕ್ಯಾಪ್ಟನ್ ರೀತಿಯಲ್ಲಿದ್ದರೆ, ಉಪವಿಭಾಗಾಧಿಕಾರಿ ಮಾರುತಿ ಅವರು, ಮಂತ್ರಿಯ ರೀತಿ ಕೆಲಸ ಮಾಡಿದರು. ಜವಾಬ್ದಾರಿ ಹಂಚಿಕೆ ವಿಚಾರದಲ್ಲೂ ಉತ್ತಮವಾಗಿ ನಿರ್ವಹಿಸಿದರು. ಈ ವೇಳೆ ಅಧಿಕಾರಿಗಳು, ಪೊಲೀಸರು, ಸೌಟ್ಸ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳು, ಎನ್‌ಎಸ್‌ಎಸ್, ಎನ್‌ಸಿಸಿ, ಸೇವಾದಳ, ಸ್ವಯಂ ಸೇವಕ ನಿಸ್ವಾರ್ಥ ಸೇವೆ ಸ್ಮರಣೀಯ ಎಂದರು.
ಮಾಜಿ ಸಚಿವ ಜಿ.ಪಿ.ಆರ್.ಸಿಂಧ್ಯಾ ಮಾತನಾಡಿ, ಹಾಸನಾಂಬ ದೇವಿ ಮತ್ತು ಸಿದ್ದೇಶ್ವರ ಸ್ವಾಮಿಯ ಕೃಪೆ ಪ್ರತಿವರ್ಷ ಹೀಗೆ ಇರಲಿ. ಈ ಬಾರಿ ದರ್ಶನಕ್ಕೆ ಆಗಮಿಸಿದ್ದ ಭಕ್ತರ ಸಂಖ್ಯೆ ಮತ್ತು ಆದಾಯ ಗಳಿಕೆಯೂ ಹೆಚ್ಚಾಗಿದ್ದು, ಈ ಕ್ಷೇತ್ರದ ಪ್ರಸಿದ್ಧಿ ಎತ್ತರಕ್ಕೆ ಬೆಳೆಯುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಅವರ ಸಹಕಾರ, ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರ ನೇತೃತ್ವ, ಅಧಿಕಾರಿಗಳ ತಾಳ್ಮೆ, ಪೊಲೀಸ್, ಸ್ಕೌಟ್ಸ್, ಅಂಡ್ ಗೈಡ್ಸ್, ಎನ್‌ಸಿಸಿ ವಿದ್ಯಾರ್ಥಿಗಳು ಹಾಗು ಸೇವಾದಳದವರ ಸೇವೆಯಿಂದ ಆಗಮಿಸಿದ್ದ ಪ್ರತಿಯೊಬ್ಬ ಭಕ್ತರಿಗೂ ಉತ್ತಮ ರೀತಿಯಲ್ಲಿ ದರ್ಶನ ಭಾಗ್ಯ ಸಿಕ್ಕಿದೆ ಎಂದು ಹೇಳಿದರು.
ಹಾಸನಾಂಬ ದೇವಿಗೆ ವಿಶೇಷ ಶಕ್ತಿ ಇದ್ದು, ಆದ್ದರಿಂದಲೇ ಬಾರಿ ಅತ್ಯಂತ ಯಶಸ್ವಿಯಾಗಿ ಉತ್ಸವ ನೆರವೇರಿದೆ. ಬೇಲೂರು, ಹಳೇಬೀಡು, ಶ್ರವಣಬೆಳಗೊಳ ಮಾದರಿಯಲ್ಲೇ ಹಾಸನಾಂಬ ಕ್ಷೇತ್ರವೂ ಪ್ರಸಿದ್ಧವಾಗಬೇಕು. ನಿಮ್ಮೆಲ್ಲ ಸಹಕಾರದಿಂದ ಉತ್ಸವ ಯಶಸ್ವಿಯಾಗಿ ನಡೆದಿದ್ದು, ಇದರಿಂದ ಕರ್ನಾಟಕ ಸರ್ಕಾರಕ್ಕೂ ಗೌರವ ಸಂದಿದೆ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ, ಉಪವಿಭಾಗಾಧಿಕಾರಿಗಳಾದ ಮಾರುತಿ, ಶ್ರುತಿ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ, ಎಎಸ್‌ಪಿ ತಮ್ಮಯ್ಯ, ಡಿಡಿಎಲ್‌ಆರ್ ಸಂಶುದ್ದೀನ್, ಎಡಿಎಲ್‌ಆರ್ ಸುಜಯ್ ಇತರರಿದ್ದರು.