ಜಿಲ್ಲೆ

ಹಾಸನಾಂಬ ಉತ್ಸವದೊಳಗೆ ರೈಲ್ವೆ ಮೇಲ್ಸೇತುವೆ ಸಂಚಾರಕ್ಕೆ ಮುಕ್ತ

   ಹಾಸನ: ನಗರದ ರೈಲ್ವೆ ಮೇಲ್ಸೇತುವೆ ಎರಡು ಪಥದ ಕಾಮಗಾರಿಯನ್ನು ಶೀಘ್ರದಲ್ಲೇ ಪೂರ್ಣಗೊಳಿಸಿ, ಹಾಸನಾಂಬ ಜಾತ್ರಾ ಮಹೋತ್ಸವದೊಳಗೆ ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಸಂಸದ ಪ್ರಜ್ವಲ್ ರೇವಣ್ಣ ಭರವಸೆ ನೀಡಿದರು.

ನಗರದ ಜಿಲ್ಲಾ ನ್ಯಾಯಾಲಯದಿಂದ ಎನ್.ಆರ್.ವೃತ್ತದವರೆಗೆ ನಡೆಯುತ್ತಿರುವ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿಯನ್ನು ಬುಧವಾರ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನಾಂಬ ದೇವಿ ದರ್ಶನಕ್ಕೆ ನಾನಾ ಭಾಗಗಳಿಂದ ಭಕ್ತರು ನಗರಕ್ಕೆ ಆಗಮಿಸುವುದರಿಂದ ಅಷ್ಟರೊಳಗೆ ಸದ್ಯಕ್ಕೆ ಎರಡು ಪಥದ ಮೇಲ್ಸೇತುವೆ ರಸ್ತೆ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಚನೆ ನೀಡಿದ್ದೇನೆ. ನಾಲ್ಕು ಪಥದ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಇನ್ನು ಹೆಚ್ಚಿನ ಅನುದಾನ ಬೇಕಿರುವುದರಿಂದ ಬಜೆಟ್ ಪರಿಷ್ಕರಣೆಗಾಗಿ ಮನವಿ ಮಾಡಿದ್ದೇವೆ. ಹೀಗಾಗಿ ಪೂರ್ಣಪ್ರಮಾಣದ ಕಾಮಗಾರಿ ಮುಗಿಸಲು ಇನ್ನಷ್ಟು ಕಾಲಾವಕಾಶ ಬೇಕಿದೆ ಎಂದು ಹೇಳಿದರು.

ಮೇಲ್ಸೇತುವೆ ಯೋಜನೆ 40 ಕೋಟಿ ರೂ. ವೆಚ್ಚದ್ದಾಗಿದ್ದು, 25 ಕೋಟಿ ರೂ. ಕೇಂದ್ರ ಸರ್ಕಾರ, ಉಳಿದಿದ್ದನ್ನು ರಾಜ್ಯ ಸರ್ಕಾರ ಭರಿಸಬೇಕಾಗಿತ್ತು. ಆದರೆ, ದೊಡ್ಡಮಟ್ಟದಲ್ಲಿ ನಿರ್ಮಾಣ ಮಾಡುವ ಉದ್ದೇಶದಿಂದ ಚತುಷ್ಪಥ ರಸ್ತೆ ನಿರ್ಮಾಣಕ್ಕಾಗಿ ಎಚ್.ಡಿ.ದೇವೇಗೌಡರು, ಎಚ್.ಡಿ. ರೇವಣ್ಣ ಅವರ ಸಹಕಾರದಿಂದ ಕೇಂದ್ರದ ಮೇಲೆ ಒತ್ತಡ ತಂದು, ಅನುದಾನವನ್ನು ಹೆಚ್ಚಳ ಮಾಡಿಸಲಾಗಿದೆ. ಕೇಂದ್ರ ನೀಡಬೇಕಿದ್ದ 25 ಕೋಟಿ ರೂ.ಗೆ ಬದಲಾಗಿ 50-55 ಕೋಟಿ ರೂ. ಅನುದಾನವನ್ನು ನೀಡುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ 50:50 ಅನುದಾನದಲ್ಲಿ ಕಾಮಗಾರಿ ನಡೆಸಲಾಗುತ್ತಿದ್ದು, ರಾಜ್ಯ ಸರ್ಕಾರ ಇದುವರೆಗೂ 30 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಇನ್ನೂ 25 ಕೋಟಿ ರೂ. ನೀಡಬೇಕು ಎಂದು ಮನವಿ ಮಾಡಿದ್ದೇವೆ. ಈಗ ಬಿಡುಗಡೆಯಾಗಿರುವ ಅನುದಾನದಲ್ಲಿ ನವೆಂಬರ್ ಒಳಗೆ ದ್ವಿ ಪಥದ ಮೇಲ್ಸೇತುವೆ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ತಿಳಿಸಿದರು.

25 ಕೋಟಿ ರೂ. ಬೇಡಿಕೆಯ ಪಟ್ಟಿಯನ್ನು ಈಗಾಗಲೇ ಸಂಬಂಧಪಟ್ಟವರಿಗೆ ತಲುಪಿಸಲಾಗಿದೆ. ಕೂಡಲೇ ಅನುದಾನ ಬಿಡುಗಡೆ ಮಾಡಿದರೆ 6-8 ತಿಂಗಳ ಒಳಗೆ ಚತುಷ್ಪಥ ಮೇಲ್ಸೇತುವೆ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸುತ್ತೇವೆ. ಕಾಮಗಾರಿಗೆ ಈಗಾಗಲೇ 70-75 ಕೋಟಿ ರೂ. ಖರ್ಚು ಮಾಡಿದ್ದೇವೆ. ಹೆಚ್ಚುವರಿಯಾಗಿ 25 ಕೋಟಿ ರೂ. ಬೇಕಿದ್ದು, ರಾಜ್ಯ ಸರ್ಕಾರ ತನ್ನ ಪಾಲಿನ ಹಣ ನೀಡುವಂತೆ ಕೇಳುತ್ತಿದ್ದೇವೆ. ಆ 25 ಕೋಟಿ ರೂ. ಅನುದಾನದಲ್ಲಿ ಮತ್ತೆ ಎರಡು ಪಥದ ಬ್ರಿಡ್ಜ್, ರ‌್ಯಾಂಪ್ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

ಹಂಗರಹಳ್ಳಿ ಬಳಿ ಹೊಸ ಮೇಲ್ಸೇತುವೆ

ಹೊಳೆನರಸೀಪುರ ತಾಲೂಕಿನ ಹಂಗರಹಳ್ಳಿ ಮೇಲ್ಸೇತುವೆ ಕುಸಿದಿರುವುದನ್ನು ಪರಿಶೀಲನೆ ನಡೆಸಿದ್ದೇನೆ. ಈ ಹಿಂದೆಯೂ ಮೇಲ್ಸೇತುವೆ ಕುಸಿದಿದ್ದಾಗ ದುರಸ್ತಿಗೆ ಅವಕಾಶ ನೀಡುವುದಿಲ್ಲ. ಅದನ್ನು ತೆರವುಗೊಳಿಸಿ ಹೊಸದಾಗಿ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದ್ದೆ. ಇದು ಮೂರನೇ ಬಾರಿಗೆ ಕುಸಿಯುತ್ತಿದೆ. ಮೊದಲೆರಡು ಬಾರಿ ಗುತ್ತಿಗೆದಾರರು, ಇಂಜಿನಿಯರ್ ಸೇರಿಕೊಂಡು ದುರಸ್ತಿ ಕಾಮಗಾರಿ ನಡೆಸಿದ್ದರು. ಆದರೆ, ಈ ಬಾರಿ ದುರಸ್ತಿಗೆ ಅವಕಾಶ ನೀಡದೆ ಸಂಪೂರ್ಣವಾಗಿ ತೆರವುಗೊಳಿಸಿ ಹೊಸದಾಗಿ ಮೇಲ್ಸೇತುವೆ ನಿರ್ಮಾಣ ಮಾಡಲಾಗುವುದು. ಕಳಪೆ ಕಾಮಗಾರಿಗೆ ಕಾರಣವಾದ ಇಂಜಿನಿಯರ್‌ಗಳನ್ನು ಅಮಾನತುಗೊಳಿಸಲಾಗಿದೆ. ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ, ಅವರ ಠೇವಣಿ ಹಣವನ್ನು ವಶಪಡಿಸಿಕೊಳ್ಳುವ ಕೆಲಸ ಮಾಡಲಾಗುತ್ತಿದೆ. ರಿಪೇರಿ ಕಾರ್ಯಕ್ಕೆ ತಗಲುವ ವೆಚ್ಚ, ಹೊಸದಾಗಿ ನಿರ್ಮಾಣ ಮಾಡಲು ಬೇಕಾದ ವೆಚ್ಚ ಒಂದೇ ಆಗುವುದರಿಂದ ಹೊಸದಾಗಿಯೇ ನಿರ್ಮಾಣ ಮಾಡುತ್ತೇವೆ. ಜನರ ಸಂಚಾರಕ್ಕೆ ಅನುಕೂಲವಾಗುವಂತೆ ತಾತ್ಕಾಲಿಕವಾಗಿ ರಸ್ತೆ ನಿರ್ಮಾಣ ಮಾಡಿಕೊಡುವಂತೆ ಮನವಿ ಮಾಡಲಾಗಿದೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.

ಶಾಸಕ ಎಚ್.ಪಿ.ಸ್ವರೂಪ್ ಮಾತನಾಡಿ, ನಗರದಲ್ಲಿ ವಾಹನ ದಟ್ಟಣೆ ತಪ್ಪಿಸಲು ರೈಲ್ವೆ ಮೇಲ್ಸೇತುವೆ ನಾಲ್ಕು ಪಥ ನಿರ್ಮಾಣ ಮಾಡಬೇಕು ಎಂಬ ಮನವಿ ಮೇರೆಗೆ ಕಾಮಗಾರಿ ವಿಳಂಬವಾಗಿದೆ. ಹೊಸ ಬಸ್ ನಿಲ್ದಾಣಕ್ಕೆ ಇಳಿಯಲು ಬ್ರಿಡ್ಜ್ ಬೇಕು ಎಂದು ಕೇಳಿಕೊಂಡಿದ್ದಾರೆ. ಅದನ್ನೂ ನಿರ್ಮಾಣ ಮಾಡಲಾಗುವುದು. ಹಾಸನಾಂಬ ಜಾತ್ರೆ ವೇಳೆ ಅಂದರೆ ನವೆಂಬರ್ ತಿಂಗಳ ಒಳಗೆ ಸದ್ಯ ಎರಡು ಪಥದ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಗುತ್ತಿಗೆದಾರರನ್ನು ಒತ್ತಾಯ ಮಾಡಲಾಗಿದೆ. ಗುತ್ತಿಗೆದಾರರು ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ ಎಂದರು.