ಜಿಲ್ಲೆ

ಹಾಸನದಲ್ಲಿ ಯುಗಾದಿ ಹಬ್ಬದ ವ್ಯಾಪಾರ ಜೋರು

ಹಿಂದು ಸಂಪ್ರದಾಯದ ವರ್ಷಾರಂಭ ಯುಗಾದಿ ಮುನ್ನಾ ದಿನವಾದ ಮಂಗಳವಾರ ನಗರದ ಹಲವೆಡೆ ಹಬ್ಬದ ವ್ಯಾಪಾರ ಬಲು ಜೋರಾಗಿತ್ತು.

ಹಬ್ಬಕ್ಕೆ ಅಗತ್ಯವಿರುವ ಹೂವು, ಹಣ್ಣು, ಪೂಜಾ ಸಾಮಗ್ರಿಗಳು, ಬೇವಿನ ಸೊಪ್ಪಿ, ಮಾವಿನೆಲೆ, ಬಾಳೆ ಎಲೆಯ ಬೆಲೆ ಸ್ವಲ್ಪ ದುಬಾರಿ ಎನಿಸಿದರೂ ಹೊಸ ಸಂವತ್ಸರ ಸಂಭ್ರಮದಲ್ಲಿರುವ ಜನರು ಮಾರುಕಟ್ಟೆಗಳಲ್ಲಿ ಬಹಳ ಉತ್ಸಾಹಕತೆಯಿಂದ ಖರೀದಿ ಮಾಡಿದರು. ನಗರದ ಕಟ್ಟಿನಕೆರೆ ಮಾರುಕಟ್ಟೆ, ದೇವರಾಜ ಅರಸು ಮಾರುಕಟ್ಟೆ, ಮಹಾವೀರ ವೃತ್ತ, ಕಸ್ತೂರಬಾ ರಸ್ತೆ, ಸಾಲಗಾಮೆ ರಸ್ತೆ, ಬಿಎಂ. ರಸ್ತೆ, ಸಂತೇಪೇಟೆ, ರಿಂಗ್ ರಸ್ತೆ ಸೇರಿ ಪ್ರಮುಖ ಕಡೆಗಳಲ್ಲಿ ಹಬ್ಬದ ವ್ಯಾಪಾರ ನಡೆದವು.

ಹಳದಿ ಸೇವಂತಿಗೆ ಮಾರಿಗೆ 100-120 ರೂ, ಕೆಂಪು ಸೇವಂತಿಗೆ 60-80 ರೂ, ಮಲ್ಲಿಗೆ, ಕನಕಾಂಬರ 100 ರೂ, ಕೆಜಿ ಪುಟ್ಟ ಬಾಳೆಗೆ 60-100, ಸೇಬು 160-200, ದಾಳಿಂಬೆ 180-220, ದ್ರಾಕ್ಷಿ ಮತ್ತು ಸಪೋಟ 50-80, ಬೇವು ಮತ್ತು ಮಾವಿನ ಸಪ್ಪು 20 ರೂಪಾಯಿಗೆ ಮಾರಾಟವಾದವು. ತರಕಾರಿಗಳ ಬೆಲೆ ಮಾಮೂಲಿನಂತಿತ್ತು. ದಿನಸಿ, ಆಭರಣದ ಅಂಗಡಿಗಳಲ್ಲಿಯೂ ಗ್ರಾಹಕರು ತುಂಬಿ ಹೋಗಿದ್ದರು.