ಜಿಲ್ಲೆ

ಹಾಸನದಲ್ಲಿ ಪ್ರತ್ಯೇಕ ಅಪಘಾತ: ಇಬ್ಬರ ಸಾವು

ಹಾಸನ: ಜಿಲ್ಲೆಯಲ್ಲಿ ನಡೆದ ಎರಡು ಪ್ರತ್ಯೇಕ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿರುವ ಘಟನೆ ಗುರುವಾರ ನಡೆದಿದೆ.

ತಾಲೂಕಿನ ಕೈಗಾರಿಕಾ ಪ್ರದೇಶದ ನಿವಾಸಿಯಾಗಿರುವ ಅಣ್ಣಪ್ಪ (65) ಎಂಬುವರು ಗುರುವಾರ ಕೂಲಿ ಕೆಲಸಕ್ಕೆ ಎಂದು ತಮ್ಮ ಬೈಕಿನಲ್ಲಿ ಹೊಳೆನರಸೀಪುರ ರಸ್ತೆಯ ಕಿತ್ತನೆ ಗಡಿ ಹತ್ತಿರದ ಇಂಡಿಯನ್ ಪೆಟ್ರೋಲ್ ಬಂಕ್ ಮುಂಭಾಗ ಹೋಗುತ್ತಿದ್ದಾಗ ಹಿಂಬದಿಯಿಂದ ವೇಗವಾಗಿ ಚಾಲನೆ ಮಾಡಿಕೊಂಡ ಬಂದ ಬೈಕ್ ಚಾಲಕ ಡಿಕ್ಕಿ ಹೊಡೆದಿದ್ದಾನೆ. ಅಪಘಾತದ ರಭಸಕ್ಕೆ ಅಣ್ಣಪ್ಪ ಬೈಕಿನಿಂದ ನೆಲಕ್ಕೆ ಬಿದ್ದ ಪರಿಣಾಮ ತಲೆ ಮತ್ತು ಇತರೆ ಭಾಗಗಳಿಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತ ಮಾಡಿದ ಬೈಕ್ ಚಾಲಕ ಮತ್ತು ಹಿಂಬದಿ ಕುಳಿತಿದ್ದ ಇಬ್ಬರಿಗೂ ಕೂಡ ತೀವ್ರತರವಾದ ಗಾಯಗಳಾಗಿದ್ದು ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಗೊರೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ಅರಕಲಗೂಡು ತಾಲೂಕು, ರಾಮನಾಥಪುರ ಹೋಬಳಿಯ ಕೇರಳಾಪುರ ಗ್ರಾಮದ ಪುಟ್ಟಸ್ವಾಮೀಗೌಡ (74) ಎಂಬುವರು ಜಮೀನಿನ ಕೆಲಸ ಮುಗಿಸಿಕೊಂಡು ಗುರುವಾರ ಸಂಜೆ ಮನೆಗೆ ಬರುತ್ತಿರುವ ಸಂದರ್ಭದಲ್ಲಿ ಕೇರಳಾಪುರ ಕಡೆಯಿಂದ ಬಂದ ಬೈಕ್ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿದ್ದಾನೆ.

ಅಪಘಾತದ ರಭಸಕ್ಕೆ ತಲೆಗೆ ಗಂಭೀರ ಪೆಟ್ಟು ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದಾರೆ. ಕೂಡಲೇ ಅವರನ್ನು ಚಿಕಿತ್ಸೆಗಾಗಿ ಕೊಣನೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗುವ ಮಾರ್ಗಮಧ್ಯೆದಲ್ಲಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಈ ಸಂಬಂಧ ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.