ಹಾಸನ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರದಿಂದ ಅಗ್ನಿಪಥ ಯೋಜನೆ ಅಡಿ ಭಾರತೀಯ ಸೇನೆಗೆ ಅಗ್ನಿವೀರರ ನೇಮಕಾತಿ ರ‍್ಯಾಲಿ ಆರಂಭವಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳ ಸುಮಾರು 27000 ಸಾವಿರ ಕ್ಕೂ ಹೆಚ್ಚು ಯುವಕರು ಈ ರ‌್ಯಾಲಿಯಲ್ಲಿ ಭಾಗವಹಿಸಲು ಹೆಸರು ನೋಂದಾಯಿಸಿಕೊಂಡಿದ್ದಾರೆ.
ಆಗಸ್ಟ್ 19 ರವರೆಗೆ ನೇಮಕಾತಿ ರ‍್ಯಾಲಿ ನಡೆಯಲಿದ್ದು, ಅಲ್ಲಿಯವರೆಗೆ ಜಿಲ್ಲಾ ಕ್ರೀಡಾಂಗಣಕ್ಕೆ ಮತ್ತು ಹಾಸನಾಂಬ ಒಳಾಂಗಣ ಕ್ರೀಡಾಂಗಣಕ್ಕೆ ಕ್ರೀಡಾಪುಟಗಳು ಸೇರಿದಂತೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ. ಕ್ರೀಡಾಂಗಣದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಬುಧವಾರ ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ, ಬಳ್ಳಾರಿ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ 2000 ಕ್ಕೂ ಹೆಚ್ಚು ಯುವಕರು ಆಯ್ಕೆ ಬಯಸಿ ಸಂದರ್ಶನಕ್ಕೆ ಹಾಜರಾಗಿದ್ದರು. ಆ.11 ರಂದು ಚಾಮರಾಜನಗರ, ಚಿತ್ರದುರ್ಗ ಮತ್ತು ಕೊಡಗು ಜಿಲ್ಲೆಗಳ ಯುವಕರು ಹಾಗೂ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಯುವಕರಿಗೆ ಸಂದರ್ಶನ ರ‍್ಯಾಲಿ ನಡೆಯಲಿದೆ.
ಆ.12 ರಂದು ಹಾಸನ ಜಿಲ್ಲೆಯ ಆಲೂರು, ಅರಕಲಗೂಡು, ಅರಸೀಕೆರೆ, ಚನ್ನರಾಯಪಟ್ಟಣ, ಹೊಳೆನರಸೀಪುರ ಮತ್ತು ಬೇಲೂರು ತಾಲೂಕಿನ ಯುವಕರು ರ‌್ಯಾಲಿಯಲ್ಲಿ ಭಾಗವಹಿಸಿ, ಸೇನೆ ಸೇರುವ ತಮ್ಮ ಕನಸು ನನಸು ಮಾಡಿಕೊಳ್ಳುವ ಪ್ರಯತ್ನ ಮಾಡಲಿದ್ದಾರೆ.
ಆ.13 ರಂದು ಹಾಸನ ತಾಲೂಕು ಹಾಗೂ ಮೈಸೂರು ಜಿಲ್ಲೆಯ ಹುಣಸೂರು ತಾಲೂಕು, ರಾಮನಗರ ಜಿಲ್ಲೆ ಮತ್ತು ವಿಜಯನಗರ ಜಿಲ್ಲೆಯ ಹಡಗಲಿ ತಾಲೂಕಿನ ಯುವಕರಿಗೆ ಸಂದರ್ಶನ ನಿಗದಿಯಾಗಿದೆ.
ಆ.14 ಮತ್ತು 15 ರಂದು ನೇಮಕಾತಿ ನಡೆಯುವುದಿಲ್ಲ. ಆ.16 ರಂದು ಮೈಸೂರು ಜಿಲ್ಲೆ ಯುವಕರು, ಆ.17 ರಂದು , ತುಮಕೂರು ಮತ್ತು ವಿಜಯನಗರ ಜಿಲ್ಲೆಗಳ ಯುವಕರು, ಆ.18 ರಂದು ಕೋಲಾರ, ಮಂಡ್ಯ ಮತ್ತು ಹಾಸನ ಜಿಲ್ಲೆಗಳ ಯುವಕರು ಸಂದರ್ಶನದಲ್ಲಿ ಭಾಗವಹಿಸಲಿದ್ದಾರೆ. ಆ.19 ರಂದು ಎಲ್ಲಾ ಜಿಲ್ಲೆಗಳ ಯುವಕರಿಗೆ ಸಂದರ್ಶನ ಇರಲಿದೆ.
ಹಾಸನ ಜಿಲ್ಲೆಯ ಯುವಕರು ಹೆಚ್ಚು:
ಅಗ್ನಿವೀರರಾಗಿ ನೇಮಕಗೊಳ್ಳಲು ಬಯಸಿ ಹೆಸರು ನೋಂದಾಯಿಸಿಕೊಂಡಿರುವವರಲ್ಲಿ ಹಾಸನ ಜಿಲ್ಲೆಯ ಯುವಕರ ಸಂಖ್ಯೆ ಹೆಚ್ಚಿದೆ. ನೇಮಕಾತಿ ರ‌್ಯಾಲಿಯು ಹಾಸನದಲ್ಲಿ ನಡೆಯುತ್ತಿರುವುದು ಇದಕ್ಕೆ ಕಾರಣ ಇರಬಹುದು. ಜಿಲ್ಲೆಯ 4912 ಯುವಕರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಜಿಲ್ಲೆಯ ಹಾಸನ ತಾಲೂಕಿನಲ್ಲಿ 1160, ಅರಕಲಗೂಡು 965, ಹೊಳೆನರಸೀಪುರ 803, ಚನ್ನರಾಯಪಟ್ಟಣ 532, ಅರಸೀಕೆರೆ 447, ಆಲೂರು 348 ಮತ್ತು ಸಕಲೇಶಪುರ ತಾಲೂಕಿನ 269 ಯುವಕರು ಹೆಸರು ನೋಂದಾಯಿಸಿಕೊಂಡಿದ್ದಾರೆ.
ಉಳಿದಂತೆ ಮೈಸೂರು ಜಿಲ್ಲೆಯ 4527, ಬೆಂಗಳೂರು ನಗರ ಜಿಲ್ಲೆಯ 1669, ಬೆಂಗಳೂರು ಗ್ರಾಮೀಣ 351, ಬಳ್ಳಾರಿ 1111, ಚಿಕ್ಕಬಳ್ಳಾಪುರ 337, ಚಾಮರಾಜನಗರ 461, ಚಿತ್ರದುರ್ಗ 1170, ಕೊಡಗು 1654, ರಾಮನಗರ 340, ವಿಜಯನಗರ 2230, ತುಮಕೂರು 1410, ಕೋಲಾರ 156 ಮತ್ತು ಮಂಡ್ಯ ಜಿಲ್ಲೆಯ 1326 ಯುವಜನರು ಸೇನೆ ಸೇರಲು ಬಯಸಿ ಹೆಸರು ನೋಂದಾಯಿಸಿಕೊಂಡಿದ್ದಾರೆ.
ವಸತಿ ವ್ಯವಸ್ಥೆ:
ಸೇನಾ ನೇಮಕಾತಿ ರ‌್ಯಾಲಿಗೆ ಆಗಮಿಸಿರುವ ಯುವಕರಿಗೆ ವಸತಿ ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ ಜಿಲ್ಲಾಡಳಿತವು ನಗರದ ವಿವಿಧ ಕಲ್ಯಾಣ ಮಂಟಪಗಳು ಮತ್ತು ಸಮುದಾಯ ಭವನಗಳಲ್ಲಿ ವಸತಿ ವ್ಯವಸ್ಥೆ ಮಾಡಿದೆ. ವಿವಿಧ ಹಂತಗಳಲ್ಲಿ ದೈಹಿಕ ಸಾಮರ್ಥ್ಯ ಪರೀಕ್ಷೆಗಳು ನಡೆಯುವುದರಿಂದ ಆಯ್ಕೆ ಆಗುವವರಿಗೆ ಊಟ ಮತ್ತು ವಸತಿ ವ್ಯವಸ್ಥೆ ಮಾಡಲಾಗಿದೆ.
ನಿರಾಸೆಯ ನಡುವೆಯೂ ಮರು ಪ್ರಯತ್ನದ ವಿಶ್ವಾಸ:
ಎತ್ತರ, ಎದೆಯ ಸುತ್ತಳತೆ ಮತ್ತಿತರ ಮೊದಲ ಹಂತದ ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲೇ ಅನರ್ಹಗೊಂಡ ಹೊರಬಂದ ಯುವಕರ ಮುಖದಲ್ಲಿ ನಿರಾಸೆ ಎದ್ದುಕಾಣತ್ತಿದ್ದರೂ, ಮುಂದಿನ ವರ್ಷ ಮತ್ತೆ ಪ್ರಯತ್ನ ನಡೆಸುವ ವಿಶ್ವಾಸದ ಮಾತುಗಳನ್ನು ಆಡುತ್ತಿದ್ದುದು ವಿಶೇಷವಾಗಿತ್ತು.
ಮಳೆಯ ನಡುವೆಯೂ ಬತ್ತದ ಉತ್ಸಾಹ:
ನಗರದಲ್ಲಿ ಬುಧವಾರ ಬೆಳಗ್ಗೆ ಜಿಟಿಜಿಟಿ ಸೋನೆ ಮಳೆ ಸುರಿಯುತ್ತಿದ್ದರೂ ಸೇನಾ ನೇಮಕಾತಿ ರ‌್ಯಾಲಿಗೆ ಆಗಮಿಸಿದ್ದ ಸಾವಿರಾರು ಯುವಕರು ಅಂಜದೆ ಸಾಲಾಗಿ ನಿಂತು ಜಿಲ್ಲಾ ಕ್ರೀಡಾಂಗಣ ಪ್ರವೇಶಿಸುತ್ತಿದ್ದ ದೃಶ್ಯ ಕಂಡುಬಂದಿತು. ಯುವಕರಿಗೆ ತೊಂದರೆ ಆಗದಂತೆ ಪೊಲೀಸರು ಕಾವಲಿದ್ದು, ಸಾರ್ವಜನಿಕರು ಕ್ರೀಡಾಂಗಣ ಪ್ರವೇಸಿಸದಂತೆ ತಡೆದು ನೇಮಕಾತಿ ರ‍್ಯಾಲಿ ಸುಸೂತ್ರವಾಗಿ ನಡೆಯಲು ಸಹಕರಿಸಿದರು.