ಹಾಸನ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ದೂರು ನೀಡಲು ಬಂದ ಪತ್ನಿಯನ್ನು ಪೊಲೀಸ್ ಕಾನ್ ಸ್ಟೇಬಲ್ ಆಗಿರುವ ಪತಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ ಘಟನೆ ಸೋಮವಾರ ನಗರದ ಎಸ್‌ಪಿ ಕಚೇರಿಯ ಆವರಣದಲ್ಲಿ ನಡೆದಿದೆ.
ಮಮತಾ ಕೊಲೆಯಾದ ಮಹಿಳೆ, ಕೊಲೆ ಆರೋಪಿ ಲೋಕನಾಥ್ ಶಾಂತಿಗ್ರಾಮ ವೃತ್ತ ನಿರೀಕ್ಷಕರ ಕಚೇರಿಯ ಕಾನ್ಸ್‌ಟೇಬಲ್ ಕರ್ತವ್ಯ ನಿರ್ವಹಿಸುತ್ತಿದ್ದ, ಆತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದು. ಸಾರ್ವನಿಕರಿಗೆ ರಕ್ಷಣೆ ಒದಗಿಸಬೇಕಾದ ಪೊಲೀಸ್ ಈಗ ಕೋಲೆಗಾರನಾಗಿದ್ದಾನೆ.
17 ವರ್ಷಗಳ ಹಿಂದೆ ಚನ್ನಪಟ್ಟಣ ಬಡಾವಣೆಯ ಮಮತಾ ಹಾಗು ಕೆ.ಆರ್.ಪುರಂ ನಿವಾಸಿ ಲೋಕನಾಥ್ ಪರಸ್ಪರ ಪ್ರೀತಿಸಿ, ಮನೆಯವರ ವಿರೋಧದ ನಡುವೆಯೂ ಅಂತರ್ಜಾತಿ ವಿವಾಹ ಆಗಿದ್ದರು. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಇಬ್ಬರ ನಡುವೆ ವೈಯಕ್ತಿಕ ವಿಚಾರಗಳಿಗೆ ಮನಸ್ತಾಪ ಏರ್ಪಟ್ಟು ಕೌಟುಂಬಿಕ ಕಲಹಕ್ಕೂ ಕಾರಣವಾಗಿತ್ತು. ಕಳೆದ ಮೂರ್ನಾಲ್ಕು ದಿನಗಳಿಂದ ಪತಿ-ಪತ್ನಿ ನಡುವೆ ಜಗಳ ಜೋರಾಗಿದೆ.
ಪತಿ ಲೋಕನಾಥ್ ಕಿರುಕುಳದಿಂದ ಬೇಸತ್ತ ಮಮತಾ ಸೋಮವಾರ ಬೆಳಿಗ್ಗೆ, ಪೊಲೀಸರಿಗೆ ದೂರು ಕೊಡುವುದಾಗಿ ಪತಿಗೆ ಹೇಳಿ, ನಗರದ ಆರ್.ಸಿ.ರಸ್ತೆಯಲ್ಲಿರುವ ಜಿಲ್ಲಾ ಪೊಲೀಸ್ ಕಚೇರಿಗೆ ಬಂದಿದ್ದಾರೆ. ಆಕೆಯನ್ನು ಹಿಂಬಾಲಿಸಿಕೊಂಡು ಬಂದ ಲೋಕನಾಥ್, ಕೊಲೆ ಮಾಡುವ ಉದ್ದೆಶದಿಂದ ಮೊದಲೇ ಹರಿತವಾದ ಚಾಕುವನ್ನು ತನ್ನ ಜೊತೆಯಲ್ಲೇ ತಂದಿದ್ದ.
ಪತ್ನಿ ತನ್ನ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮದ್ ಸುಜಿತಾ ಅವರಿಗೆ ದೂರು ನೀಡುವುದು ದೃಢವಾಗುತ್ತಿದ್ದಂತೆ ಎಸ್.ಪಿ ಕಚೇರಿ ಆವರಣದಲ್ಲಿ ಎಲ್ಲರ ಎದುರೇ ಮಮತಾ ಅವರ ಎದೆ ಭಾಗಕ್ಕೆ ಬಲವಾಗಿ ಇರಿದಿದ್ದು, ಚಾಕು ಬೆನ್ನಿನಿಂದ ಹೊರಗೆ ಬಂದಿದೆ.
ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಮಮತಾ ಅವರನ್ನು ಸ್ಥಳದಲ್ಲೇ ಇದ್ದ ಪೊಲೀಸರು ಅಣತಿ ದೂರದಲ್ಲಿದ್ದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಕೆಲವೇ ನಿಮಿಷಗಳಲ್ಲಿ ಮೃತಪಟ್ಟಿದ್ದಾರೆ. ತಕ್ಷಣ ಆರೋಪಿ ಲೋಕನಾಥ್‌ನನ್ನು ನಗರ ಪೊಲೀಸ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೂಡಲೇ ಆಗಮಿಸಿದ ಎಸ್‌ಪಿ ಮೊಹಮದ್ ಸುಜಿತಾ ಅವರು ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡು ತನಿಖೆಗೆ ಆದೇಶಿದಿದ್ದಾರೆ.
ಪ್ರಕರಣ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮದ್ ಸುಜಿತಾ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕೌಟುಂಬಿಕ ಸಮಸ್ಯೆಯಿಂದ ಹತ್ಯೆಯಾಗಿದೆ ಎಂದು ಸಂಬಂಧಿಕರು ಮಾಹಿತಿ ನೀಡಿದ್ದಾರೆ. ಬೆಳಿಗ್ಗೆ ಇಬ್ಬರ ನಡುವೆ ಗಲಾಟೆಯಾಗಿದೆ. ಬಳಿಕ ಪೊಲೀಸರಿಗೆ ದೂರು ಕೊಡುವುದಾಗಿ ಹೇಳಿ ಪತ್ನಿ ಬಂದಿದ್ದರು. ಈ ವೇಳೆ ಪೊಲೀಸ್ ಕಾನ್ಸ್‌ಸ್ಟೇಬಲ್ ಲೋಕನಾಥ್ ಕೂಡ ಬಂದಿದ್ದು, ಇಬ್ಬರು ಕಚೇರಿ ಹೊರಗೆ ನಿಂತು ಮಾತನಾಡಿದ್ದಾರೆ. ಈ ವೇಳೆ ಲೋಕನಾಥ್ ಚಾಕುವಿನಿಂದ ದಾಳಿ ಮಾಡಿದಾಗ ಮಮತಾ ರಕ್ಷಣೆಗಾಗಿ ಕಚೇರಿಯತ್ತ ಓಡಿ ಬಂದಿದ್ದಾರೆ. ನಮ್ಮ ಕಚೇರಿ ಆವರಣದ ಒಳಗೆ ಓಡಿ ಬಂದ ವೇಳೆ, ಸ್ಥಳದಲ್ಲಿ ಇದ್ದ ನಮ್ಮ ಪೊಲೀಸರು ಮಮತಾರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲು ಮಾಡಿದ್ದರೂ ಬದುಕಿಸಲು ಆಗಲಿಲ್ಲ ಎಂದು ತಿಳಿಸಿದರು.
ವರದಕ್ಷಿಣೆ ಕಿರುಕುಳ ಆರೋಪ:
ವರದಕ್ಷಿಣೆ ಹಣ, ನಿವೇಶಕ್ಕಾಗಿ ಪೀಡಿಸಿ ಪತ್ನಿಗೆ ಕಿರುಕುಳ ನೀಡಿ ದೈಹಿಕವಾಗಿ ಹಲ್ಲೆ ಕೂಡ ನಡೆಸಿದ್ದ. ನನ್ನ ಮಗಳು ಎಲ್ಲವನ್ನೂ ಸಹಿಸಿಕೊಂಡಿದ್ದಳು. ಹಲವು ಬಾರಿ ಮಾತುಕತೆ ನಡೆಸಿ ಸಂಧಾನ ಮಾಡಿದ್ದರೂ ಲೋಕನಾಥ್ ತನ್ನ ವರ್ತನೆ ಬಸಲಿಸಿಕೊಂಡಿರಲಿಲ್ಲ. ಪತಿಯ ಕಿರುಕುಳದ ಪೊಲೀಸ್ ಠಾಣೆಗೆ ದೂರು ನೀಡುವಂತೆ ಹೇಳಿದರೂ, ಮರ್ಯಾದೆಗೆ ಅಂಜಿ ದೂರು ನೀಡಿರಲಿಲ್ಲ. ಮೂರ್ನಾಲ್ಕು ದಿನಗಳಿಂದ ದಂಪತಿ ನಡುವೆ ಏನು ನಡೆದಿದಿಯೋ ಗೊತ್ತಿಲ್ಲ. ಇಂದು ಮಮತಾಳನ್ನು ಕೊಲೆ ಮಾಡಿದ್ದಾನೆ. ಆತನಿಗೆ ಕಠಿಣವಾದ ಶಿಕ್ಷೆ ನೀಡಬೇಕೆಂದು ಮಮತಾ ಅವರ ತಂದೆ ಶಾಮಣ್ಣ ಒತ್ತಾಯಿಸಿದ್ದಾರೆ. ಈ ಬಗ್ಗೆ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಆಸ್ಪತ್ರೆಯಲ್ಲಿ ಆಕ್ರಂದನ:
ಸುದ್ದಿ ತಿಳಿದ ತಕ್ಷಣ ಮಮತಾ ಪೋಷಕರು ಮತ್ತು ಸಂಬಂಧಿಕರು, ಜಿಲ್ಲಾಸ್ಪತ್ರೆಗೆ ಆಗಮಿಸಿದರು ಈ ಸಂದರ್ಭದಲ್ಲಿ ಅವರು ಅವರು ಮೃತಪಟ್ಟಿದ್ದಾರೆ ಎಂದು ತಿಳಿದ ತಕ್ಷಣ ಅವರ ಆಕ್ರಂದನ ಮುಗಿಲು ಮುಟ್ಟಿತ್ತು. ಅಲ್ಲದೆ ತಪ್ಪಿಸಸ್ಥರ ವಿರುದ್ಧ ನಿರ್ಧಾಕ್ಷಣ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದರು.