ಜಿಲ್ಲೆ

ಹಾಸನಂಬ ದೇವಿಯ ದರ್ಶನದ 6ನೇ ದಿನ:ಲಕ್ಷಾಂತರ ಭಕ್ತರ ಆಗಮನ

ಹಾಸನ: ಹಾಸನಂಬ ದೇವಿಯ ದರ್ಶನದ 6ನೇ ದಿನವಾದ ಮಂಗಳವಾರ ಲಕ್ಷಾಂತರ ಭಕ್ತರು ಆಗಮಿಸಿದ್ದರಿಂದ ನೂಕು ನಗ್ಗಲು ಮತ್ತೊಂದೆಡೆ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರೆ ಇನ್ನು ಕೆಲವರು ದೇವಸ್ಥಾನದ ಹೊರಭಾಗದಲ್ಲಿ ಕೈಮುಗಿದು ವಾಪಸ್ ಆಗುತ್ತಿದ್ದರು.

ಮುಂಜಾನೆಯಿಂದಲೇ ದೇವಾಲಯ ಆವರಣದಲ್ಲಿ ಕಾಲಿಡಲು ಜಾಗ ಇಲ್ಲದ ರೀತಿಯಲ್ಲಿ ನೂಕು- ನುಗ್ಗಲು, ಸರತಿ ಸಾಲು ಕಂಡು ಬಂತು.ಎಂದಿನಂತೆ ಮಂಗಳವಾರ ಮುಂಜಾನೆಯಿಂದಲೇ ದೇವಿಯ ದರ್ಶನ ಆರಂಭವಾಯಿತು. ಬೆಳಗಾಗುವುದರೊಳಗೆ ಸಾಮಾನ್ಯ ಭಕ್ತರ ಸರದಿ ಸಾಲು, ವಿಐಪಿ, ವಿವಿಐಪಿ ಸಾಲು ತುಂಬಿ ತುಳುಕುತ್ತಿದ್ದವು. ಮಾತ್ರವಲ್ಲ 300 ರೂ. ಮತ್ತು 1000 ರೂ. ಟಿಕೆಟ್ ಪಡೆದು ಶೀಘ್ರ ದರ್ಶನ ಪಡೆಯುವ ಸಾಲುಗಳೂ ಸಹ ಭರಪೂರ ಭರ್ತಿಯಾಗಿದ್ದವು. ಹೀಗಾಗಿ ಎಲ್ಲರನ್ನು ನಿಯಂತ್ರಿಸುವುದು ಪೊಲೀಸ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಹರಸಾಹಸಪಟ್ಟರು ಸಾಧ್ಯವಾಗಲಿಲ್ಲ.

ಜನರನ್ನು ನಿಯಂತ್ರಿಸಲಾಗದೆ ಅಧಿಕಾರಿಗಳು, ಪೊಲೀಸರು ಅಸಹಾಯಕರಾಗಿ ಹೋಗಿದ್ದಾರೆ. ಭಕ್ತರ ದಟ್ಟಣೆ ಹೆಚ್ಚಾಗುತ್ತಿದ್ದಂತೆ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಅವರೇ ಗರ್ಭಗುಡಿ ಮುಂದೆ ನಿಂತು ಬೇಗ ಬೇಗ ದರ್ಶನ ಮಾಡಿಸಿ ಹೊರ ಕಳುಹಿಸುತ್ತಿದ್ದಾರೆ. ಜನರನ್ನು ನಿಯಂತ್ರಿಸಲಾಗದೆ ಜಿಲ್ಲಾ ಪೊಲೀಸ್‌ರು ಅಸಹಾಯಕತೆ ವ್ಯಕ್ತಪಡಿಸಿದ್ದರು.

1,000 ರೂ. ಟಿಕೆಟ್ ಪಡೆದರೂ 3 ಗಂಟೆಗಳ ಕಾಲ ಸರದಿ ಸಾಲಿನಲ್ಲಿ ನಿಲ್ಲಬೇಕಾಗಿತ್ತು. 300 ರೂ. ಟಿಕೆಟ್ ಪಡೆದವರು 5 ಗಂಟೆಗಳ ಕಾಲ ಸರದಿ ಸಾಲಿನಲ್ಲಿ ಕಾಲ ಕಳೆಯಬೇಕಾಯಿತು. ಅತಿಗಣ್ಯರ ಪಾಸ್‌ಗೆ ಮಾನ್ಯತೆಯೇ ಇಲ್ಲದಂತಾಗಿದ್ದು, ಪಾಸ್ ಇದ್ದರೂ ದರ್ಶನ ಪಡೆಯಲು 5 ರಿಂದ 6 ಗಂಟೆಗಳು ಕಾಯಬೇಕಿದೆ. ಇನ್ನು ಧರ್ಮ ದರ್ಶನ ಸಾಲಿನಲ್ಲಿ ಬರುವ ಭಕ್ತರ ಪಾಡು ಹೇಳತೀರದಾಗಿದೆ. 10 ಗಂಟೆಗೂ ಹೆಚ್ಚು ಕಾಲ ಸರದಿ ಸಾಲಿನಲ್ಲಿ ನಿಂತು ಬಂದರೂ ಸರಿಯಾಗಿ ದೇವಿಯನ್ನು ನೋಡಿ ಕೈಮುಗಿಯುಷ್ಟರಲ್ಲಿ ಅಧಿಕಾರಿಗಳು, ಪೊಲೀಸರು ಎಳೆ ಎಳೆದು ಹೊರ ದಬ್ಬುತ್ತಿದ್ದರು.

ಎಲ್ಲಾ ರೀತಿಯ ಸರತಿ ಸಾಲುಗಳಲ್ಲಿ ಕಿಲೋ ಮೀಟರ್‌ಗಟ್ಟಲೆ ಭಕ್ತರು ನಿಂತಿರುವುದು ಕಂಡು ಬಂತು. ಇಲ್ಲಿ ಹಲವು ಗಂಟೆಗಳ ಭಕ್ತರು ನಿಂತು ನಿಂತು ಅಕ್ಷರಶಃ ಬಸವಳಿದರು. ಭಕ್ತರ ಸಾಲು, ವಾಹನಗಳ ಓಡಾಟದಿಂದಲೇ ನಗರಸಭೆ ಎದುರಿಗಿರುವ ಬಿ.ಎಂ.ರಸ್ತೆಯಲ್ಲಿ ಸಂಪೂರ್ಣ ಟ್ರಾಫಿಕ್ ಜಾಂ ಉಂಟಾಗಿತ್ತು. ಇದರಿಂದ ನಗರದಿಂದ ತಣ್ಣೀರುಹಳ್ಳ, ಅರಕಲಗೂಡು ಬೈಪಾಸ್ ಕಡೆಗೆ, ಆ ಕಡೆಯಿಂದ ನಗರದೊಳಕ್ಕೆ ಬರಲು ಕಾದು ನಿಲ್ಲಬೇಕಾಯಿತು. ಭಕ್ತರ ಸಂಖ್ಯೆ ಹೆಚ್ಚಾಗಿದ್ದರಿಂದ ದೇವಿನ ದರ್ಶನವೂ ವಿಳಂಬ ಆಗುತ್ತಿದೆ.

ನ.3 ಭಾನುವಾರ ಮಧ್ಯಾಹ್ನ ದೇವಿಯ ಗರ್ಭಗುಡಿ ಬಾಗಿಲು ಮುಚ್ಚಲಿದ್ದು, ಮುಂದಿನ ನಾಲ್ಕು ದಿನ ಮಾತ್ರ ಸಾರ್ವಜನಿಕ ದರ್ಶನ ಇರುವುದರಿಂದ ಭಕ್ತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ದೀಪಾವಳಿ ರಜೆ ಇರುವುದರಿಂದ ಭಕ್ತರು ಹಾಗೂ ಗಣ್ಯರು ಅಧಿಕ ಸಂಖ್ಯೆಯಲ್ಲಿ ಬರುವ ನಿರೀಕ್ಷೆ ಇದೆ.

ಗಣ್ಯರ ಆಗಮನ: ಇಂದು ಬೆಳಗ್ಗೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಮಾಜಿ ಸಚಿವ ಕೆ.ಗೋಪಾಲಯ್ಯ ದಂಪತಿ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವ ಹಾಗೂ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ, ಚಿತ್ರನಟ ಟೆನ್ನಿಸ್ ಕೃಷ್ಣ, ನಟಿಯರಾದ ಸಪ್ತಮಿಗೌಡ, ಗಾಯಕರಾದ ವೈ.ಕೆ.ಮುದ್ದುಕೃಷ್ಣ, ಸುನೀತಾ ಹಾಗೂ ಕಿರುತೆರೆ ಕಲಾವಿದರು, ಬಿಗ್‌ಬಾಸ್ ಮಾಜಿ ಸ್ಪರ್ಧಿಗಳು ಆಗಮಿಸಿ, ದೇವಿಯ ದರ್ಶನ ಪಡೆದು ಸಂತಸ, ಸಂತೃಪ್ತ ಭಾವನೆ ವ್ಯಕ್ತಪಡಿಸಿದರು.

ಮಧ್ಯಾಹ್ನ ನಂತರ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಪುತ್ರ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮೊದಲಾದವರು ಆಗಮಿಸಿ ಹಾಸನಾಂಬೆಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಬುದ್ಧಿ ಕಲಿಯದ ಜನ:

ಪ್ರತಿವರ್ಷ ಗಣ್ಯರು, ಸಚಿವರು ಇಲ್ಲವೇ ಹಿರಿಯ ರಾಜಕಾರಣಗಳು ದೇವಿಯ ದರ್ಶನಕ್ಕೆ ಬಂದಾಗ ಅವರ ಕುಟುಂಬದ ಸದಸ್ಯರೂ ಬರುವುದು ವಾಡಿಕೆ. ಆದರೆ ಅವರು ಬರುವುದನ್ನೇ ಕಾಯುವ ಆಯಾಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಒಮ್ಮೆಗೇ 50-100 ಮಂದಿ ಒಮ್ಮೆಗೇ ದೇವಾಲಯದತ್ತ ನುಗ್ಗುವುದು ಸಾಮಾನ್ಯವಾಗಿತ್ತು.

ಇದರಿಂದ ಸಾಕಷ್ಟು ಗೊಂದಲ, ಕಿರಿಕಿರಿ ಉಂಟಾಗುವುದು ಸಾಮಾನ್ಯವಾಗಿತ್ತು. ಇದನ್ನು ಕಂಡ ಸಾಮಾನ್ಯ ಭಕ್ತರು ಸಹಜವಾಗಿಯೇ ತಮ್ಮ ಅಸಮಾಧಾನ ಹೊರ ಹಾಕಿದರು. ಏಕೆಂದರೆ ಕೆಲವರು ಕಳೆದ ರಾತ್ರಿ ಬಂದು ಸಾಲಿನಲ್ಲಿ ನಿಂತಿದ್ದರೂ, ಇನ್ನೂ ದರ್ಶನ ಆಗಿಲ್ಲ ಎಂದು ಅಳಲು ತೋಡಿಕೊಂಡರು.

ಮಳೆಯಿಂದ ಕೈಚೆಲ್ಲಿದ ಅಧಿಕಾರಿಗಳು:

ಸಂಜೆ ಮಳೆ ಆರಂಭವಾಗಿದ್ದರಿಂದ್ದ ಹಾಸನಾಂಬೆ ದೇವಿ ದರ್ಶನ ಪಡೆಯಲು ಭಕ್ತರ ಪರದಾಟ ನಡೆಸುವಂತಾಯಿತು. ಮಳೆ ಹೆಚ್ಚಾಗುತ್ತಿದ್ದಂತೆ ಸಾವಿರಾರು ಭಕ್ತರು ಬ್ಯಾರಿಕೆಡ್ ಮೇಲೆ ಹತ್ತಿ ದೇವಾಲಯಕ್ಕೆ ನುಗ್ಗಿದರು. ಎಷ್ಟೇ ಪ್ರಯತ್ನ ಪಟ್ಟರೂ ಭಕ್ತರನ್ನು ನಿಯಂತ್ರಸಿಲು ಸಾಧ್ಯವಾಗದೆ ಪೊಲೀಸರು ಹಾಗು ಕಂದಾಯ ಇಲಾಖೆ ಅಧಿಕಾರಿಗಳು ಕೈಚೆಲ್ಲಿ ನಿಂತುರು. ಇದರಿಂದ ದೇಗುಲದ ಆವರಣದಲ್ಲಿ ಜನಜಂಗುಳಿ ಏರ್ಪಟ್ಟಿತು.

ಸರದಿ ಸಾಲಿನಲ್ಲಿ ನಿಂತಿದ್ದ ಭಕ್ತರು ಕುರ್ಚಿಗಳನ್ನೇ ಛತ್ರಿ ಮಾಡಿಕೊಂಡು ಮಳೆಯಿಂದ ಆಶ್ರಯಪಡೆದುಕೊಂಡರು. ರಸ್ತೆ ಬದಿಯಲ್ಲಿ ನಿಂತಿದ್ದ ಜನರು ಮಳೆಯಲ್ಲಿ ನೆನೆಯಬೇಕಾಯಿತು.