ಜಿಲ್ಲೆ

ಹಾಸನಂಬ ಜಾತ್ರಾ ಮಹೋತ್ಸವದಲ್ಲಿ ಸಣ್ಣ ಲೋಪವಾಗದಂತೆ ನಿಗಾ ವಹಿಸಿ:ಸಚಿವರು

Hassan - Mohan Kanthur

ಹಾಸನ: ಹಾಸನಂಬ ಜಾತ್ರಾ ಮಹೋತ್ಸವಕ್ಕೆ ಈ ಬಾರಿ 20 ಲಕ್ಷಕ್ಕೂ ಹೆಚ್ಚು ಜನರು ಭಕ್ತರು ಆಗಮಿಸುವ ಸಾಧ್ಯತೆಗಳಿದ್ದು, ಈ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಸಣ್ಣ ಲೋಪವಾಗದಂತೆ ನಿಗಾ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಅಧಿಕಾರಿಗಳಿಗೆ ಸೂಚನೆ ನೀಡಿದರು
ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಸೋಮವಾರ ಹಾಸನಂಬ ಜಾತ್ರಾ ಮಹೋತ್ಸವದ ಆ್ಯಪ್, ಪೋಸ್ಟರ್ ಬಿಡುಗಡೆ ಮತ್ತು ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಬಾರಿ ದಾಖಲೆಯ 16 ಲಕ್ಷ ಭಕ್ತರು ಆಗಮಿಸುವ ಜತೆಗೆ ಆದಾಯವೂ ಕೂಡ ಹೆಚ್ಚಾಗಿತ್ತು. ಕಳೆದ ಬಾರಿ ಸಣ್ಣ ಪುಟ್ಟ ಲೋಪಗಳಾಗಿದ್ದು, ಈ ಬಾರಿ ಅದು ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದು ಹೇಳಿದರು.
ಅ.24 ರಿಂದ ನ. 3ರವರೆಗೆ ದೇವಸ್ಥಾನದ ಬಾಗಿಲು ತೆರೆಯಲಿದ್ದು, ಮೊದಲನೇ ದಿನ ಬಾಗಿಲು ತೆರೆಯುವ ಸಂದರ್ಭದಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿ ಮತ್ತು ಸಿದ್ದಗಂಗಾ ಮಠದ ಸ್ವಾಮೀಜಿಯವರನ್ನು ಆಹ್ವಾನಿಸಲಾಗುವುದು. ಇನ್ನುಳಿದಂತೆ ಜಿಲೆಯ ಜನಪ್ರತಿನಿಧಿಗಳು ಮತ್ತು ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಸೇರಿದಂತೆ ಸಚಿವರು ಮತ್ತು ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗುವುದೆಂದು ಎಂದರು.
ಕಳೆದ ಬಾರಿಗಿಂತ ಈ ಬಾರಿ ದೇವಸ್ಥಾನದ ಒಳಗೆ ಮತ್ತು ಹೊರಭಾಗದಲ್ಲಿ ಹೂ ಅಲಂಕಾರಕ್ಕೆ ಈಗಾಗಲೇ ಟೆಂಡರ್ ಕರೆಯಲಾಗಿದ್ದು, ನಗರದಾದ್ಯಂತ ದೀಪಾಲಂಕಾರವನ್ನು ದಸರಾ ಮಾದರಿಯಲ್ಲಿ ತಂತ್ರಜ್ಞಾನ ಬಳಸಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಇನ್ನುಳಿದಂತೆ ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ಹಾಗೂ ಬಂದಂತಹ ಭಕ್ತರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಎಲ್ಲ ಇಲಾಖೆಗಳಲ್ಲೂ ಕಾರ್ಯಗಳು ಬರದಿಂದ ಸಾಗಿದೆ ಎಂದು ಹೇಳಿದರು.
ಬಂದಂತಹ ಭಕ್ತಾದಿಗಳಿಗೆ ಯಾವುದೇ ರೀತಿ ತೊಂದರೆ ಆಗದಂತೆ ಬ್ಯಾರಿಕೆಟ್ ಅಳವಡಿಸಲಾಗುವುದು. ಕಳೆದ ಬಾರಿಯಂತೆ ವಿವಿಐಪಿ, ವಿಐಪಿ ಪಾಸ್ ಮತ್ತು 1000, 300 ರೂಪಾಯಿ ಪಾಸ್‌ಗಳಿಗೆ ಲಾಡು ವಿತರಿಸಲಾಗುವುದು. ಈ ಲಾಡು ತಯಾರಿಕೆಗೆ ಇಸ್ಕಾನ್ ಅವರಿಗೆ ನೀಡಲಾಗಿದೆ. ಈ ಬಾರಿ ಫಲ ಪುಷ್ಪ ಪ್ರದರ್ಶನ ಹೆಲಿಟೂರಿಸಂ, ಹಾಸನದ ಪ್ರವಾಸಿ ತಾಣಗಳ ದರ್ಶನ ಮತ್ತು ಪ್ಯಾರಾ ಮೋಟರಿಂಗ್, ಪ್ಯಾರಾ ಸೈಕಲಿಂಗ್ ಸೇರಿದಂತೆ ಆಗಸದಲ್ಲಿ ಹಾಸನ ಕಾರ್ಯಕ್ರಮಗಳನ್ನು ಕೂಡ ಈ ಬಾರಿಯೂ ಹಮ್ಮಿಕೊಳ್ಳಲಾಗುವುದೆಂದು ಹೇಳಿದರು.
ಕಳೆದ ಬಾರಿ ವಿದ್ಯುತ್ ಅವಘಡ ಮತ್ತು ಕೆಲ ಸಣ್ಣಪುಟ್ಟ ಗೊಂದಲಗಳು ಉಂಟಾಗಿತ್ತು. ಈ ಬಾರಿ ಅದು ಮತ್ತೆ ಮರುಕಳಿಸಬಾರದು. ದೇವಸ್ಥಾನದ ಪಕ್ಕ ಇರುವಂತಹ ಜನರಿಗೆ ಪಾಸ್ ವ್ಯವಸ್ಥೆ ಮತ್ತು ಅವರು ಸಂಚರಿಸಲು ಅನುಕೂಲ ಮಾಡಿಕೊಡಬೇಕು. ಕಳೆದ ಬಾರಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಶೇಕಡ 90ರಷ್ಟು ಅಧಿಕಾರಿಗಳು ಈ ವರ್ಷವೂ ಕೂಡ ಇರುವುದರಿಂದ ಯಾವುದೇ ರೀತಿ ತೊಂದರೆಯಾಗುವುದಿಲ್ಲ. ದೇವಸ್ಥಾನದ ಆಡಳಿತ ಅಧಿಕಾರಿ ಮಾರುತಿ ಹಾಗೂ ಜಿಲ್ಲಾಡಳಿತದ ನೇತೃತ್ವದಲ್ಲಿ ಸಕಲ ಸಿದ್ಧತೆಗಳನ್ನ ಕೈಗೊಂಡಿದೆ ಎಂದು ಹೇಳಿದರು.
ಪೂಜೆಯ ಸಂದರ್ಭದಲ್ಲಿ ಹೆಚ್ಚು ಸಮಯ ಬಾಗಿಲು ಹಾಕಿಕೊಳ್ಳದಂತೆ ಅರ್ಚಕರಿಗೆ ಸೂಚನೆ ನೀಡಬೇಕು. ಹಿಂದುಳಿದಂತೆ ನಗರಸಭೆ ಸ್ವಚ್ಛತೆ ಮತ್ತು ಬಂದಂತಹ ಭಕ್ತಾದಿಗಳಿಗೆ ಕುಡಿಯುವ ನೀರು, ಟಾಯ್ಲೆಟ್ ರೂಮ್. ಮಜ್ಜಿಗೆ ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಸ್ಥಳದಲ್ಲಿ ತುರ್ತು ವೈದ್ಯರ ಸೇವೆ ಲಭಿಸುವ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದಕ್ಕೆ ಉತ್ತರಿಸಿದ ಡಿಎಚ್‌ಓ. ಶಿವಸ್ವಾಮಿ, ಕಳೆದ ಬಾರಿಯಂತೆ ವೈದ್ಯರು ಮತ್ತು ನರ್ಸ್‌ಗಳನ್ನ ನಿಯೋಜನೆ ಮಾಡಲಾಗುವುದು. ಅಲ್ಲದೆ ದೇವಸ್ಥಾನದದಲ್ಲಿ ಎರಡು ತುರ್ತು ಕ್ಲಿನಿಕ್‌ಗಳನ್ನು ತೆರೆಯಲಾಗುವುದು ಎಂದರು.
ಶಾಸಕ ಎಚ್.ಪಿ. ಸ್ವರೂಪ್ ಮಾತನಾಡಿ, ಡೈರಿಯಿಂದ ರೇಷ್ಮೆ ಇಲಾಖೆಯವರೆಗೂ ಸರ್ಕಾರಿ ಕಚೇರಿಗಳಿದ್ದು, ಅವುಗಳಿಗೆ ಕಾಂಪೌಂಡ್‌ಗಳಿಗೆ ಸುಣ್ಣ ಬಣ್ಣ ಹೊಡೆಯುವ ಮೂಲಕ ನಗರದ ಸೌಂದರ್ಯವನ್ನು ಹೆಚ್ಚಿಸಬೇಕು ಮತ್ತು ದೇವಸ್ಥಾನದ ಪಕ್ಕ ಕೆಲವರು ಮನೆ ಕೊಡಲು ಒಪ್ಪಿಗೆ ಸೂಚಿಸಿದ್ದಾರೆ. ಇದನ್ನು ಜಿಲ್ಲಾಡಳಿತ ಮತ್ತು ಸಚಿವರು ಗಮನಹರಿಸಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಮಾತನಾಡಿ, ಚನ್ನಪಟ್ಟಣ ಕೆರೆಯಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಬೋಟಿಂಗ್ ಮಾಡಲು ಕ್ರಮ ಕೈಗೊಳ್ಳಲಾಗಿತ್ತು.ಆದರೆ, ಅಲ್ಲಿ ನಗರಸಭೆಯವರು ಮತ್ತು ಲೋಕೋಪಯೋಗಿ ಹಾಗೂ ಸಣ್ಣ ನೀರಾವರಿ ಇಲಾಖೆಗಳ ನಡುವೆ ಸಮನ್ವಯತೆ ಇಲ್ಲದೆ ಇರುವುದರಿಂದ ಇದು ಆಗಲಿಲ್ಲ ಎಂದು ಸಭೆಯ ಗಮನಕ್ಕೆ ತಂದರು. ಇದಲ್ಲದೆ ಬೂವನಹಳ್ಳಿಯಲ್ಲಿರುವ ವಿಮಾನ ನಿಲ್ದಾಣದಲ್ಲಿ ಪ್ಯಾರಾ ಸೈಕಲಿಂಗ್ ಮತ್ತು ಪ್ಯಾರಾ ಮೋಟರಿಂಗ್ ಮಾಡಲು ಅವಕಾಶ ನೀಡುತ್ತಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಬೇಕು ಎಂದು ಹೇಳಿದರು.
ಸಂಸದ ಶ್ರೇಯಸ್ ಪಟೇಲ್ ಮಾತನಾಡಿ, ಜಿಲ್ಲೆ ಮತ್ತು ಹೊರ ಜಿಲ್ಲೆಗಳಿಂದ ಸಹಸ್ರರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಅವರಿಗೆ ಯಾವುದೇ ರೀತಿ ಸಣ್ಣ ಲೋಪವಾಗದಂತೆ ಜಾಗರೂಕತೆಯಿಂದ ಕೆಲಸ ಮಾಡಬೇಕು. ಈ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸುವ ನಿಟ್ಟಿನಲ್ಲಿ ನಮ್ಮೆಲ್ಲರ ಸಹಕಾರ ಇರಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಶಿವಲಿಂಗೇಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜಿತಾ, ಜಿಲ್ಲಾ ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಬಿ.ಆರ್. ಪೂರ್ಣಿಮಾ, ಹಾಸನ ಉಪವಿಭಾಗಧಿಕಾರಿ ಮಾರುತಿ ಸೇರಿದಂತೆ ಇನ್ನಿತರರು ಹಾಜರಿದ್ದರು.
ಇದೇ ಸಂದರ್ಭದಲ್ಲಿ ಉತ್ತಮ ಕಂದಾಧಿಕಾರಿಗಳ ಪ್ರಶಸ್ತಿ ಪಡೆದಂತಹ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ, ಹಾಸನ ಉಪ ವಿಭಾಗಾಧಿಕಾರಿ ಜೆ.ಪಿ. ಮಾರುತಿ, ತಹಸೀಲ್ದಾರ್ ಶ್ವೇತಾ, ಕೃಷ್ಣಮೂರ್ತಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು

ಅಧಿಕಾರಿಗಳ ವಿರುದ್ಧ ಆಕ್ರೋಶ:
ಹಾಸನಂಬ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಗೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಗೈರು ಹಾಜರಾಗಿದ್ದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಜಿಲ್ಲಾ ಉಸ್ತುವಾರಿ ಸಚಿವರು, ಅಧಿಕಾರಿಗಳಿಗೆ ತೊಂದರೆ ಆಗಬಾರದು ಎಂದು ನಾನು ಜಿಲ್ಲೆಗೆ ಬಂದು ಸಭೆ ಮಾಡುತ್ತಿದ್ದೇನೆ. ನಿಮ್ಮನ್ನು ಬೆಂಗಳೂರಿಗೆ ಕರೆಸಿ ಸಭೆ ಮಾಡದೆ ವಾಪಸ್ ಕಳಿಸಬೇಕು ಆಗ ನಿಮಗೆ ಅರ್ಥವಾಗುತ್ತದೆ ಎಂದು ಕಿರಿಕಾರಿದರು.