ಹಾಸನ: ಡಿ.ವಿ.ಜಿ ಅವರ ’ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು’ ಎಂಬ ಮಾತಿನಂತೆ ಹೊಸದಾಗಿ ಸ್ಥಾಪನೆಯಾಗಿರುವ ಹಾಸನ ವಿಶ್ವವಿದ್ಯಾಲಯಕ್ಕೆ ಗಟ್ಟಿಯಾದ ಬೇರುಗಳು ಇರುವುದರಿಂದ ಮುಂದೆ ಚೆನ್ನಾಗಿ ಬೆಳೆಯುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಪ್ರೊ. ಎನ್.ಎಂ. ತಳವಾರ್ ಹೇಳಿದರು.
ನಗರದ ಹೊರವಲಯದಲ್ಲಿ ಇರುವ ಹೇಮಗಂಗೋತ್ರಿ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ, ಭಾರತೀಯ ಭಾಷಾ ಸಂಸ್ಥಾನದ ವತಿಯಿಂದ ಮಂಗಳವಾರ ಹಸ್ತಪ್ರತಿ ಅಧ್ಯಯನ ಪ್ರಾರಂಭಿಕ ಪ್ರಯತ್ನಗಳು ಎಂಬ ವಿಷಯ ಕುರಿತು ಪ್ರಚಾರೋಪನ್ಯಾಸವು ಮಾತನಾಡಿದ ಅವರು. ಶತಮಾನದ ಇತಿಹಾಸವನ್ನು ಕಂಡ ಮೈಸೂರು ವಿಶ್ವವಿದ್ಯಾನಿಲಯದ ಅಂಗವಾದ ಹೇಮಗಂಗೋತ್ರಿ, ಸ್ನಾತಕೋತ್ತರ ಕೇಂದ್ರವು ಸ್ವತಂತ್ರ ವಿಶ್ವವಿದ್ಯಾಲಯವಾಗಿ ಪ್ರಾರಂಭಗೊಂಡಿದ್ದು ಸಂತೋಷದ ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದರು.
ಹಸ್ತಪ್ರತಿ ಬಗೆಗೆ ವಿಚಾರ ಪ್ರಸ್ತಾಪಿಸಿದ ಅವರು ಈ ನಾಡಿಗೆ ತಳಹದಿ ಮತ್ತು ಭಾಷೆಯ ಬೇರುಗಳು ಹಸ್ತಪ್ರತಿಗಳು. ಈ ಹಸ್ತ ಪ್ರತಿಗಳು ನಮ್ಮ ಸಂಸ್ಕೃತಿಯ ಪ್ರತೀಕ. ಅವುಗಳನ್ನು ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದರು.
ಸಾವಿರಾರು ವರ್ಷಗಳ ಇತಿಹಾಸವಿರುವ ಈ ಭಾಷೆಯ ಪರಂಪರೆಯನ್ನು ಕಟ್ಟಲು ಮುಖ್ಯವಾದವುಗಳು ಹಸ್ತಪ್ರತಿಗಳೆಂದರು. ಜನಪದರ, ಕವಿಗಳ ಅಪಾರ ಸಾಂಸ್ಕೃತಿಕ ಕೊಡುಗೆಗಳು ಈ ಹಸ್ತಪ್ರತಿಗಳಲ್ಲಿ ಅಡಗಿದ್ದು, ಇವುಗಳನ್ನು ಹುಡುಕಿ ಹೊರತೆಗೆದು ಅವುಗಳ ಸಾರವನ್ನು ಎಲ್ಲಾ ಓದುಗರಿಗೆ ತಲುಪಿಸುವ ಕೆಲಸವನ್ನು ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರ ಮಾಡುತ್ತಾ ಬರುತ್ತಿದೆ. ನಮ್ಮ ವಿದ್ವಾಂಸರುಗಳಾದ ಕಲಬುರ್ಗಿ, ವೆಂಕಟಾಚಲ ಶಾಸ್ತ್ರಿ ಮುಂತಾದವರು ಸಾಕಷ್ಟು ಶ್ರಮವಹಿಸಿ ಕೆಲಸ ಮಾಡಿದ್ದಾರೆ. ಅವರ ಕೆಲಸದ ಸಾಧನೆಯನ್ನು ನಾವು ಉಪನ್ಯಾಸದ ಮೂಲಕ ಸಾರ್ಥಕ ಗೊಳಿಸುತ್ತಿದ್ದೇವೆ ಎಂದು ತಿಳಿಸಿದರು.
ಇದೇ ವೇಳೆ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥ ಡಾ.ಎಫ್.ಟಿ.ಹಳ್ಳಿಕೇರಿ ಅವರು ಮಾತನಾಡಿ, ಹಸ್ತಪ್ರತಿಗಳ ಹುಟ್ಟು ಮತ್ತು ಬೆಳವಣಿಗೆಯನ್ನು ಸ್ಥೂಲವಾಗಿ ಪರಿಚಯಿಸಿದರು. ಇವರ ವಿಭಾಗದ ವತಿಯಿಂದ 5000 ಕ್ಕೂ ಹೆಚ್ಚು ಹಸ್ತಪ್ರತಿಗಳನ್ನು ಸಂಗ್ರಹಿಸಲಾಗಿದೆ ಎಂದರು.
ಸಾವಿರಾರು ವರ್ಷಗಳ ಇತಿಹಾಸವಿರುವ ಹಸ್ತಪ್ರತಿಗಳ ಮಹತ್ವವನ್ನು ಹಳ್ಳಿ ಹಳ್ಳಿಗೂ ತಲುಪಿಸುವ ಕೆಲಸವನ್ನು ಪ್ರಚಾರೋಪನ್ಯಾಸದ ಮೂಲಕ ನಡೆಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಈ ಹಸ್ತಪ್ರತಿಗಳಿಂದ ರಾಜ ಮನೆತನಗಳ ಸಾಮಾಜಿಕ, ಆರ್ಥಿಕ, ಧಾರ್ಮಿಕ, ರಾಜಕೀಯ ಕೊಡುಗೆಗಳನ್ನು ತಿಳಿಯಲು ಸಾಧನವಾಗುತ್ತದೆ ಎಂದು ಹೇಳಿದರು.
ಹಾಸನ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಟಿ.ಸಿ. ತಾರಾನಾಥ್ ಅವರು ಮಾತನಾಡಿ, ಶಿಲಾಶಾಸನಗಳನ್ನು ಹಾಗೂ ಹಸ್ತಪ್ರತಿಗಳನ್ನು ಅಭ್ಯಾಸ ಮಾಡುವವರ ಸಂಖ್ಯೆ ಇಳಿಮುಖವಾಗಿರುವುದು ವಿಷಾದನೀಯ. ಇಂತಹ ಸಂದರ್ಭದಲ್ಲಿ ಈ ರೀತಿಯ ಉಪನ್ಯಾಸಗಳನ್ನು ಹಮ್ಮಿಕೊಳ್ಳುವುದರ ಮೂಲಕ ಅವುಗಳ ಮಹತ್ವವನ್ನು ಯುವ ತಲೆಮಾರಿಗೆ ತಲುಪಿಸುವುದು ಅಗತ್ಯವಿದೆ ಎಂದು ತಿಳಿಸಿದರು.
ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಪುಟ್ಟಸ್ವಾಮಿ ಅವರು ಹಸ್ತ ಪ್ರತಿಗಳು ಅಂದಿನ ತಲೆಮಾರಿನ ಸಂಸ್ಕೃತಿ, ಜನ ಜೀವನ ಪದ್ಧತಿಯನ್ನು ಇಂದಿನ ತಲೆಮಾರಿಗೆ ತಿಳಿಸಲು ಮಹತ್ವದ ದಾಖಲೆಗಳೆಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಕಲಾನಿಕಾಯದ ವಿದ್ಯಾರ್ಥಿಗಳು, ಸಂಶೋಧಕರು, ಅಧ್ಯಾಪಕರು ಪಾಲ್ಗೊಂಡಿದ್ದರು.