ಹಾಸನ: ವಿಧಾನಸಭಾ ಕ್ಷೇತ್ರದ ಮೇಲೆ ವಿಶೇಷ ಗೌರವ ಇಟ್ಟುಕೊಂಡಿದ್ದೇನೆ. ಇದನ್ಮು ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳಿ. ದಿವಂಗತ ಶಾಸಕ ಎಚ್.ಎಸ್. ಪ್ರಕಾಶ್ ಅವರು ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದಿದ್ದರು. ನಮ ಕಾರ್ಯಕರ್ತರನ್ನು ಬಿಟ್ಟು ಕೊಡುವುದಿಲ್ಲ ಎಂದು ಹೇಳುವ ಮೂಲಕ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಪರೋಕ್ಷವಾಗಿ ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಪ್ರಕಾಶ್ ಪುತ್ರ ಸ್ವರೂಪ್ ಗೆ ಎಂಬ ಸುಳಿವು ನೀಡಿದ್ದಾರೆ.
ಭಾನುವಾರ ರಾತ್ರಿ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ತೆರಳುವ ಮಾರ್ಗ ಮಧ್ಯೆ ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಜಿಲ್ಲೆಯ ಅಭಿವೃದ್ಧಿಗೆ ಕಣ್ಮುಚ್ಚಿ ಸಹಿ ಹಾಕಿದ್ದೇನೆ. ಇವತ್ತಿನ ನನ್ನ ನೋವು ಏನು ಅಂತ ನೀವೆಲ್ಲಾ ಅರ್ಥ ಮಾಡ್ಕೋಬೇಕು ಎಂದು ಮಾರ್ಮಿಕವಾಗಿ ನುಡಿದರು.
ಈ ಚುನಾವಣೆಯಲ್ಲಿ ನನ್ನ ಶ್ರಮ ವ್ಯರ್ಥವಾಗಬಾರದು. ನನಗೆ ಕುಟುಂಬದ ವ್ಯಾಮೋಹ ಇಲ್ಲ. ಆರುವರೆ ಕೋಟಿ ಜನತೆಯೇ ನನ್ನ ಕುಟುಂಬ. ಪ್ರಧಾನಮಂತ್ರಿ ಕೊಟ್ಟ ಜಿಲ್ಲೆಯ ಜನತೆಯ ಭಾವನೆಗಳನ್ನು ಅರ್ಥ ಮಾಡಿಕೊಂಡಿದ್ದೇನೆ ಎಂದರು.
ದೇವೇಗೌಡರ ಜೀವ ಕಾಪಾಡಲು ನಮ್ಮ ಕುಟುಂಬದಲ್ಲಿರುವ ಡಾಕ್ಟರ್ ಗಳಾದ ನಮ್ಮ ಬಾವ, ಅವರ ಮಕ್ಕಳು ಹೋರಾಟ ಮಾಡುತ್ತಿದ್ದಾರೆ. ಅತ್ಯಂತ ಕಠಿಣ ನಿರ್ಧಾರ ಮಾಡುತ್ತಿದ್ದೇನೆ. ನಮ್ಮ ಕಾರ್ಯಕರ್ತರನ್ನು ಬಿಟ್ಟು ಕೊಡುವುದಿಲ್ಲ ಎಂದು ಪುನರುಚ್ಚರಿಸಿದರು.
ಮೂರ್ನಾಲ್ಕು ದಿನಗಳ ಕಾಲ ತಾಳ್ಮೆಯಿಂದ ವರ್ತನೆ ಮಾಡಿ ಎಂದು ಸ್ಥಳದಲ್ಲಿ ಸೇರಿದ್ದ ನೂರಾರು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ದೇವೇಗೌಡರ ಆರೋಗ್ಯ ಹೇಗಿದೆ ಎಂಬುದನ್ನು ಸಾರ್ವಜನಿಕವಾಗಿ ಚರ್ಚೆ ಮಾಡಲು ಆಗಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.