ಹಾಸನ: ಒಮ್ಮೊಮ್ಮೆ ಹಠಕ್ಕೆ ಬಿದ್ದರೆ ತಮ್ಮದು ಒಂದು ಕಣ್ಣು ಹೋದರೂ ಪರವಾಗಿಲ್ಲ, ಎದುರಾಳಿಯ ಎರಡೂ ಕಣ್ಣು ಹೋಗಬೇಕು ಎಂಬುದಾಗಿ ಪಟ್ಟು ಹಿಡಿಯುವ ಜಾಯಮಾನ ಕೆಲವರದ್ದಾಗಿರುತ್ತದೆ. ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ವಿಚಾರದಲ್ಲಿ ಉಂಟಾಗಿರುವ ಬಿಕ್ಕಟ್ಟು ದಿನೇದಿನೆ ಜಟಿಲವಾಗುತ್ತಿರುವುದನ್ನು ನೋಡಿದರೆ ಮೇಲಿನ ಮಾತು ನೆನಪಾಗುತ್ತದೆ.
ಹೊಳೆನರಸೀಪುರ ಶಾಸಕ ಎಚ್.ಡಿ. ರೇವಣ್ಣ ಅವರ ಪತ್ನಿ ಜಿಪಂ ಮಾಜಿ ಸದಸ್ಯೆ ಭವಾನಿ ಅವರು ಹಾಸನ ಕ್ಷೇತ್ರದ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಆಗಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಹಾಸನ ಕ್ಷೇತ್ರದಿಂದ ದಿವಂಗತ ಶಾಸಕ ಎಚ್.ಎಸ್. ಪ್ರಕಾಶ್ ಅವರ ಪುತ್ರ ಜಿಪಂ ಮಾಜಿ ಉಪಾಧ್ಯಕ್ಷ ಎಚ್.ಪಿ. ಸ್ವರೂಪ್ ಅವರನ್ನು ಕಣಕ್ಕಿಳಿಸಲು ಮನಸ್ಸು ಮಾಡಿರುವುರಿಂದ ಬಿಕ್ಕಟ್ಟು ಉದ್ಭವಿಸಿದೆ.
ಇತ್ತೀಚೆಗೆ ಹಾಸನ ತಾಲೂಕು ಹಳ್ಳಿಯೊಂದರ ಸಮಾರಂಭದಲ್ಲಿ ಹಾಸನ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ತಾವೇ ಎಂಬುದಾಗಿ ಭವಾನಿ ರೇವಣ್ಣ ಸ್ವಯಂ ಘೋಷಿಸಿಕೊಂಡಿದ್ದು, ಅದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಎಚ್.ಡಿ. ಕುಮಾರಸ್ವಾಮಿ, ‘ಹಾಸನದಲ್ಲಿ ಭವಾನಿ ಅವರು ಸ್ಪರ್ಧಿಸುವ ಅಗತ್ಯವಿಲ್ಲ, ಅಲ್ಲಿ ಪಕ್ಷಕ್ಕೆ ಸಮರ್ಥ ಅಭ್ಯರ್ಥಿ ಇದ್ದಾರೆ’ ಎಂಬುದಾಗಿ ಹೇಳಿಕೆ ನೀಡಿದ ನಂತರ ಜೆಡಿಎಸ್ ಪಕ್ಷದಲ್ಲಿ ಮತ್ತು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬದಲ್ಲಿ ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತಿವೆ.
ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ನಂತರ ಎಚ್.ಡಿ. ರೇವಣ್ಣ ಅವರ ಪುತ್ರ, ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ತಮ್ಮ ಚಿಕ್ಕಪ್ಪನ ವಿರುದ್ಧವೇ ಪರೋಕ್ಷೆ ಹೇಳಿಕೆ ನೀಡಿದ್ದು, ನಂತರ ಎಚ್.ಡಿ. ರೇವಣ್ಣ ಸುದ್ದಿಗೋಷ್ಠಿ ನಡೆಸಿ, ‘ಇನ್ನು ಮುಂದೆ ನಮ್ಮ ಕುಟುಂಬದಲ್ಲಿ ಯಾರು ಟಿಕೆಟ್ ವಿಷಯ ಮಾತನಾಡುವುದಿಲ್ಲ, ಪಕ್ಷದ ಹೈಕಮಾಂಡ್ ತೀರ್ಮಾನವೇ ಅಂತಿಮ’ ಎಂಬುದಾಗಿ ಬಿಕ್ಕಟ್ಟು ಶಮನಕ್ಕೆ ಯತ್ನಿಸಿದ್ದು ಆಗಿದೆ. ಆದರೆ ಟಿಕೆಟ್ ಕದನ ಒಳಗಿಂದೊಳಗೇ ಬಿರುಸು ಪಡೆದುಕೊಳ್ಳುತ್ತಿದೆ.
ಚಿಕ್ಕಪ್ಪ ಅನುಸರಿಸಿದ್ದ ತಂತ್ರವನ್ನೇ ಮುಂದಿಟ್ಟ ರೇವಣ್ಣ ಪುತ್ರರು:
ತಮ್ಮ ತಾಯಿ ಭವಾನಿ ರೇವಣ್ಣ ಅವರನ್ನು ಈ ಬಾರಿ ವಿಧಾನಸಭೆ ಚುನಾವಣೆ ಕಣಕ್ಕಿಳಿಸಲೇಬೇಕೆಂದು ನಿರ್ಧರಿಸುವಂತೆ ಕಾಣುತ್ತಿರುವ ಸಂಸದ ಪ್ರಜ್ವಲ್ ಮತ್ತು ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ಅವರು ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಚಿಕ್ಕಪ್ಪ ಎಚ್.ಡಿ. ಕುಮಾರಸ್ವಾಮಿ ಅನುಸರಿಸಿದ್ದ ತಂತ್ರವನ್ನೇ ಅವರ ಮುಂದಿಟ್ಟಿದ್ದಾರೆ ಎನ್ನಲಾಗಿದೆ.
ಕಳೆದ ವಿಧಾನಭಾ ಚುನಾವಣೆಯಲ್ಲಿ ಸಹ ಭವಾನಿ ರೇವಣ್ಣ ಅವರು ಬೇಲೂರು ಕ್ಷೇತ್ರದಿಂದ ಕಣಕ್ಕಿಳಿಯಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದರು. ರಾಮನಗರ ಕ್ಷೇತ್ರದಿಂದ ಪತ್ನಿ ಅನಿತಾ ಅವರನ್ನು ಕಣಕ್ಕಿಳಿಸಲು ಎಚ್.ಡಿ. ಕುಮಾರಸ್ವಾಮಿಗೆ ಇಷ್ಟವಿದ್ದರೂ, ಹಾಗೆ ಮಾಡಿದರೆ ಭವಾನಿ ಅವರಿಗೂ ಬೇಲೂರು ಟಿಕೆಟ್ ಕೊಡಬೇಕಾಗುತ್ತದೆ ಎಂದು ಬಗೆದು ರಾಮನಗರ ಮತ್ತು ಚನ್ನಪಟ್ಟಣ ಎರಡೂ ಕ್ಷೇತ್ರಗಳಲ್ಲಿ ಕುಮಾರಸ್ವಾಮಿ ಅವರೇ ಸ್ಪರ್ಧಿಸುವ ಮೂಲಕ ಭವಾನಿ ಅವರಿಗೆ ಟಿಕೆಟ್ ತಪ್ಪಿಸಿದ್ದರು.
ಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಜಯಗಳಿಸಿದ ಎಚ್.ಡಿ. ಕುಮಾರಸ್ವಾಮಿ ನಂತರ ಚನ್ನಪಟ್ಟಣ ಕ್ಷೇತ್ರ ಉಳಿಸಿಕೊಂಡು ರಾಮನಗರ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ನಂತರ ನಡೆದ ಉಪ ಚುನಾವಣೆಯಲ್ಲಿ ತಮ್ಮ ಪತ್ನಿ ಅನಿತಾ ಅವರನ್ನು ನಿಲ್ಲಿಸಿ, ಗೆಲ್ಲಿಸಿ ಶಾಸಕಿ ಮಾಡಿದರು.
ಈ ಬಾರಿ ರಾಮನಗರ ಕ್ಷೇತ್ರದಿಂದ ಅನಿತಾ ಬದಲಿಗೆ ಪುತ್ರ ನಿಖಿಲ್ ಜೆಡಿಎಸ್ ಅಭ್ಯರ್ಥಿ ಆಗುವುದಾಗಿ ಈಗಾಗಲೇ ಘೋಷಿಸಲಾಗಿದೆ. ತಮ್ಮ ಕುಟುಂಬದಿಂದ ಮಹಿಳೆಯರಿಗೆ ಈ ಬಾರಿ ಟಿಕೆಟ್ ನೀಡುವುದಿಲ್ಲ ಎಂಬುದಾಗಿ ಕಳೆದ ಬಾರಿಯಂತೆ ಈ ಬಾರಿಯೂ ಎಚ್.ಡಿ. ಕುಮಾರಸ್ವಾಮಿ ಘೋಷಿಸಿದ್ದಾರೆ. ಆದರೆ ತಮ್ಮ ಚಿಕ್ಕಪ್ಪನ ಘೋಷಣೆಗೆ ಸೊಪ್ಪು ಹಾಕದ ರೇವಣ್ಣ ಪುತ್ರರು, ‘ಮಹಿಳೆಯರಿಗೆ ಟಿಕೆಟ್ ಕೊಡದಿದ್ದರೆ, ಹಾಸನ ಮತ್ತು ಹೊಳೆನರಸೀಪುರ ಎರಡೂ ಕ್ಷೇತ್ರಗಳಲ್ಲಿ ತಮ್ಮ ತಂದೆ ಎಚ್.ಡಿ. ರೇವಣ್ಣ ಅವರಿಗೇ ಟಿಕೆಟ್ ಕೊಡಿ’ ಎಂಬುದಾಗಿ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.
ಹಾಸನ ಮತ್ತು ಹೊಳೆನರಸೀಪುರ ಎರಡೂ ಕ್ಷೇತ್ರಗಳನ್ನು ಗೆದ್ದುಕೊಂಡು, ಚುನಾವಣೆ ನಂತರ ಜೆಡಿಎಸ್‌ಗೆ ಸುರಕ್ಷಿತ ಕ್ಷೇತ್ರವಾದ ಹೊಳೆನರಸೀಪುರ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿಸಿ, ಅಲ್ಲಿ ಭವಾನಿ ಅವರನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಳ್ಳಬಹುದು. ಅಲ್ಲದೆ, ತಮ್ಮ ವಿರುದ್ಧ ಸ್ಪರ್ಧೆ ಮಾಡುವಂತೆ ಎಚ್.ಡಿ. ರೇವಣ್ಣನವರಿಗೆ ಹಾಸನ ಶಾಸಕ ಪ್ರೀತಮ್ ಗೌಡ ಹಾಕಿರುವ ಸವಾಲನ್ನೂ ಸ್ವೀಕರಿಸಿದಂತಾಗುತ್ತದೆ ಎಂಬುದು ಸೂರಜ್ ಮತ್ತು ಪ್ವಜ್ವಲ್ ಲೆಕ್ಕಾಚಾರವಾಗಿದೆ. ಜೊತೆಗೆ ತಮ್ಮ ಕುಟುಂಬದ ವಿರುದ್ಧ ತಿರುಗಿ ಬಿದ್ದಿರುವ ಜಿಪಂ ಮಾಜಿ ಉಪಾಧ್ಯಕ್ಷ ಎಚ್.ಪಿ. ಸ್ವರೂಪ್‌ಗೆ ಯಾವುದೇ ಕಾರಣಕ್ಕೂ ಟಿಕೆಟ್ ಸಿಗಲು ಬಿಡಬಾರದು ಎಂಬುದು ಈ ಲೆಕ್ಕಾಚಾರದ ಹಿಂದಿನ ದುರುದ್ದೇಶವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಸಂಚಾರ ಚುರುಕುಗೊಳಿಸಿರುವ ಸ್ವರೂಪ್:
ಈ ಎಲ್ಲ ಬೆಳವಣಿಗೆಗಳ ನಡುವೆಯೂ ಹಾಸನ ಕ್ಷೇತ್ರದ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಆಗಿರುವ ಜಿಪಂ ಮಾಜಿ ಉಪಾಧ್ಯಕ್ಷ ಎಚ್.ಪಿ. ಸ್ವರೂಪ್ ಅವರು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಭರವಸೆಯ ಮೇಲೆ ಕ್ಷೇತ್ರ ಸಂಚಾರ ಚುರುಕುಗೊಳಿಸಿದ್ದಾರೆ. ಹಗಲು ರಾತ್ರಿ ಎನ್ನದೆ ತಮ್ಮ ಬೆಂಬಲಿಗರೊಂದಿಗೆ ಹಳ್ಳಿ ಹಳ್ಳಿ ಸುತ್ತುತ್ತಿದ್ದು, ಜನ ಬೆಂಬಲ ಪಡೆಯುವ ಪ್ರಯತ್ನ ನಡೆಸುತ್ತಿದ್ದಾರೆ.
ಫೆ.12 ರಂದು ಪಂಚರತ್ನ ಯಾತ್ರೆ:
ಫೆ.12 ರಂದು ಹಾಸನ ಜಿಲ್ಲೆಯಲ್ಲಿ ಪಂಚರತ್ನ ಯಾತ್ರೆ ನಡೆಯಲಿದೆ. ಆದರೆ ಹೊಳೆರನಸೀಪುರ ಮತ್ತು ಅರಸೀಕೆರೆ ಕ್ಷೇತ್ರಗಳನ್ನು ಮಾತ್ರ ಯಾತ್ರೆಗೆ ಆಯ್ದುಕೊಳ್ಳಲಾಗಿದೆ. ಟಿಕೆಟ್ ಬಿಕ್ಕಟ್ಟು ಬಿಗಡಾಯಿಸಿರುವ ಹಾಸನ ಸೇರಿದಂತೆ ಉಳಿದ ಕ್ಷೇತ್ರಗಳನ್ನು ಕೈ ಬಿಡಲಾಗಿದೆ. ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಲು ಬಯಸಿರುವ ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡರಿಗೆ ತಮ್ಮ ನಿರ್ಧಾರ ತಿಳಿಸಲು ಫೆ. 12 ರವರೆಗೆ ಗಡುವು ನೀಡಲಾಗಿದ್ದು, ಅಂದು ಅವರ ಮುಂದಿನ ರಾಜಕೀಯ ನಡೆ ನಿರ್ಧಾರವಾಗುವ ಸಾಧ್ಯತೆ ಇದೆ.