ಜಿಲ್ಲೆ

ಹಾಸನ ನಗರಸಭೆಯಲ್ಲಿ ಸಿಡಿ ವಿಷಯಕ್ಕೆ ಸದಸ್ಯರು- ಆಯುಕ್ತರ ನಡುವೆ ಮಾತಿನ ಜಟಾಪಟಿ

ಹಾಸನ ನಗರಸಭೆಯ ಸಾಮಾನ್ಯ ಸಭೆ ಮತ್ತು 2023-24ನೇ ಸಾಲಿನ ಆಯವ್ಯಯ ಬಜೆಟ್ ಮಂಡನೆಯ ಸಭೆ ಅಧಿಕಾರಿಗಳು ಮತ್ತು ಸದಸ್ಯರ ನಡುವಿನ ತಿಕ್ಕಾಟ, ಆರೋಪ -ಪ್ರತ್ಯಾರೋಪದಲ್ಲಿ ಕಾಲಹರಣಗೊಂಡು ಕೇವಲ ಒಂದು ನಿಮಿಷದಲ್ಲಿ ನಗರಸಭೆಯ ಅಧ್ಯಕ್ಷ ಆರ್.ಮೋಹನ್ ಬಜೆಟ್ ಮಂಡಿಸಿದರು.

ನಗರಸಭೆಯ ಕುವೆಂಪು ಸಭಾಂಗಣದಲ್ಲಿ ಶುಕ್ರವಾರ ಬೆಳಗ್ಗೆ ಸಭೆ ಆರಂಭವಾಗುತ್ತಿದ್ದಂತೆ ಜೆಡಿಎಸ್ ನಗರಸಭೆ ಸದಸ್ಯ ಗಿರೀಶ್ ಚನ್ನವೀರಪ್ಪ ಅವರು, ಇಂದಿನ ಸಭೆಗಳ ನಡಾವಳಿ ಪುಸ್ತಕ ಹಾಗೂ ವಿಡಿಯೋ ಚಿತ್ರೀಕರಣದ ಸಿಡಿಗಳನ್ನು ನೀಡುವಂತೆ ಆಯುಕ್ತರಿಗೆ ಮನವಿ ಮಾಡಿದರೂ ಕೂಡ ಇದುವರೆಗೂ ನೀಡಿಲ್ಲ. ಮೊದಲು ಅದನ್ನು ನೀಡಿ ಆಮೇಲೆ ಸಭೆ ಆರಂಭಿಸಿ ಎಂದು ಪಟ್ಟು ಹಿಡಿದರು.

ಕಳೆದ ಎರಡು ತಿಂಗಳಿನಿಂದ ಮಾಹಿತಿ ನೀಡುವಂತೆ ಮನವಿ ಮಾಡಿದರು ಇದುವರೆಗೂ ನೀಡಿಲ್ಲ. ಶಾಸಕರ ಸಭೆಯಲ್ಲಿ ಒಂದು ವಾರದಲ್ಲಿ ಮಾಹಿತಿ ನೀಡುವುದಾಗಿ ಹೇಳಿದ್ದರು. ಆದರೆ ಒಂದು ತಿಂಗಳಾದರೂ ಕೂಡ ಮಾಹಿತಿ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಗರಸಭೆ ಆಯುಕ್ತ ಪರಮೇಶ್ವರಪ್ಪ ಮಾತನಾಡಿ, ಮುಂದಿನ ದಿನಗಳಲ್ಲಿ ಮಾಹಿತಿ ಕೊಡುವುದಾಗಿ ಹೇಳಿದರು. ಇದರಿಂದ ಆಕ್ರೋಶಗೂಂಡ ಜೆಡಿಎಸ್‌ನ ಸದಸ್ಯರು, ಈ ಹಿಂದಿನ ಸಭೆಯಲ್ಲಿ ಇಂಜಿನಿಯರ್ ಪ್ರವೀಣ್ ಆಸ್ಪತ್ರೆಯಲ್ಲಿ ಇದ್ದಾರೆ. ಅವರು ಬಂದ ಕೂಡಲೇ ಕೊಡಿಸುವುದಾಗಿ ಹೇಳಿದ್ದಿರಿ. ಈಗ ಪ್ರವೀಣ್ ಇಲ್ಲೇ ಇದ್ದಾರೆ. ಈಗಲೇ ನಮಗೆ ಮಾಹಿತಿ ಕೊಡಿಸಿ ಎಂದು ಹಠ ಹಿಡಿದರು. ಆಗ ಆಯುಕ್ತರು, ನಾನು ಪ್ರವೀಣ್ ಹೆಸರು ಹೇಳಿಲ್ಲ. ನವೀನ್ ಹೆಸರು ಹೇಳಿದ್ದೆ ಎಂದರು. ಅದಕ್ಕೆ ನವೀನ್ ಯಾರು? ಎಂದು ಸದಸ್ಯರು ಪ್ರಶ್ನಿಸಿದಾಗ, ನವೀನ್ ಅಲ್ಲ ಚೇತನ್ ಎಂದು ಆಯುಕ್ತರು ಹೇಳಿ ನಗೆಪಾಟಲಿಗೆ ಗುರಿಯಾದರು.

ಆಯುಕ್ತರು ಇನ್ನು ಕೇವಲ ಒಂದು ತಿಂಗಳ ನಂತರ ನಿವೃತ್ತಿಯಾಗಲಿದ್ದಾರೆ. ಉಳಿದ ಸಮಯದಲ್ಲಿ ಹಣ ಹೊಡೆಯಲು ಈ ರೀತಿ ಹುನ್ನಾರ ಮಾಡುತ್ತಿದ್ದಾರೆ. ಇಲ್ಲವಾದರೆ ಮಾಹಿತಿ ನೀಡಲು ಏಕೆ ಇಷ್ಟು ತಡವಡಿಸುತ್ತಿದ್ದಾರೆ ಎಂದು ಹೇಳಿದಾಗ ಆಯುಕ್ತರು ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಂಗಸ್ವಾಮಿಗೆ ಪತ್ರ ಬರೆದಿದ್ದೇನೆ ಎಂದರು. ಈ ವೇಳೆ ಜೆಡಿಎಸ್ ಎಲ್ಲ ಸದಸ್ಯರು ರಂಗಸ್ವಾಮಿ ಮೇಲೆ ಆಕ್ರೋಶ ವ್ಯಕ್ತಪಡಿಸಿದರು. ಕೋಪಗೊಂಡ ಇಂಜಿನಿಯರ್ ರಂಗಸ್ವಾಮಿ, ವೈಯಕ್ತಿಕವಾಗಿ ನನ್ನ ಮೇಲೆ ಆರೋಪ ಮಾಡಬೇಡಿ. ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳುತ್ತಿದ್ದಂತೆ ಎಲ್ಲಾ ಸದಸ್ಯರು ಅಧಿಕಾರಿಯ ವಿರುದ್ಧ ಮುಗಿಬಿದ್ದರು. ನಾವು ವೈಯಕ್ತಿಕ ಆರೋಪ ಮಾಡುತ್ತಿಲ್ಲ ನಮಗೆ ಸರಿಯಾದ ಮಾಹಿತಿ ನೀಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾವು ರಾಜಕಾಣಿಗಳ ಸಿಡಿ ಕೇಳುತ್ತಿಲ್ಲ. ಸಭೆ ನಡೆದಿರುವ ಬಗ್ಗೆ ಸಿಡಿ ಕೇಳುತ್ತಿದ್ದೇವೆ. ಅದನ್ನು ಕೊಡಿ ಎಂದು ಸದಸ್ಯರು ಲೇವಡಿ ಮಾಡಿದರು. ನಂತರ ನಗರಸಭೆ ಅಧ್ಯಕ್ಷ ಆರ್. ಮೋಹನ್ ಕುಮಾರ್ ಮಧ್ಯಪ್ರವೇಶ ಮಾಡಿ ಸೋಮವಾರ ನಿಮಗೆ ಎಲ್ಲ ಮಾಹಿತಿ ಕೊಡುವುದಾಗಿ ಭರವಸೆ ನೀಡಿದರು.

ಇಂದಿನ ಸಭೆಯ ನಡಾವಳಿಯ ದಿನಾಂಕ ಅದಲು-ಬದಲು ಆಗಿರುವ ಬಗ್ಗೆ ಸಾಕಷ್ಟು ಗೊಂದಲಗಳು ಉಂಟಾಯಿತು. ಈ ಸಂದರ್ಭದಲ್ಲಿ ಜೆಡಿಎಸ್ ಸದಸ್ಯರು ಇದನ್ನು ಅಧಿಕಾರಿಗಳ ಗಮನಕ್ಕೆ ತಂದರು ಕೂಡ ಅವರು ಎಲ್ಲವೂ ಸರಿಯಾಗಿದೆ ಎನ್ನುತ್ತಾ ಹೆಚ್ಚು ಕಾಲಹರಣ ಮಾಡಿದರು.

ಸಭೆ ಆರಂಭಕ್ಕೂ ಮೊದಲು ಇತ್ತೀಚೆಗೆ ನಿಧನರಾದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಮಾಜಿ ಸಂಸದ ಆರ್.ಧ್ರುವನಾರಾಯಣ್ ಹಾಗೂ ಮಾಜಿ ಸಚಿವ ಅಂಜನ್‌ಮೂರ್ತಿ ಅವರಿಗೆ ಒಂದು ನಿಮಿಷ ಮೌನ ಆಚರಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಮಂಗಳಾ ಪ್ರದೀಪ್, ಆಯುಕ್ತ ಪರಮೇಶ್ವರಪ್ಪ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಂಗಸ್ವಾಮಿ ಸೇರಿದಂತೆ ಎಲ್ಲ ಸದಸ್ಯರು ಇದ್ದರು.