ಹಾಸನ: ಹಾಸನದ ಅಧಿದೇವತೆ ಹಾಸನಾಂಬೆ ದೇವಿ ದರ್ಶನದ ಐದನೇ ದಿನದಂದು ಸೋಮವಾರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾ ಉಸ್ತುವಾರಿ ಸಚಿವರ ಜತೆ ಆಗಮಿಸಿ ದೇವಿ ದರ್ಶನ ಪಡೆದರು. ನಂತರ ಹಾಸನ ನಗರ ಪಾಲಿಕೆ ಆಗಿದೆ ಎಂದು ಹೇಳುವ ಮೂಲಕ ಸಂತೋಷದ ವಿಷಯ ಹಂಚಿಕೊಂಡರು.
ಮೊದಲು ಹಾಸನಾಂಬ ದೇವಿ ದರ್ಶನ ಮಾಡಿ ನಂತರ ದರ್ಭಾರ್ ಗಣಪತಿ ದೇವಸ್ಥಾನ್ಕಕೆ ತೆರಳಿದರು. ನಂತರ ಶ್ರಿ ಸಿದ್ದೇಶ್ವರ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಇದಾದ ಬಳಿಕ ಜಿಲ್ಲಾಡಳಿತದಿಂದ ಗೌರವ ಸ್ವೀಕರಿಸಿದರು. ಬಳಿಕ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಹಾಸನ ನಗರಸಭೆಯನ್ನು ಮೇಲ್ದರ್ಜೆಗೆರಿಸಿ ನಗರ ಪಾಲಿಕೆಯನ್ನಾಗಿ ಮಾಡಬೇಕೆಂದು ನನಗೆ ಹೇಳಿದ್ದರು. ನಾನು ಹಾಸನಾಂಬೆ ಜಾತ್ರೆಗೆ ಬರುವ ಮುಂಚಿತವಾಗಿ ಕ್ಯಾಬಿನೆಟ್ ಸಭೆ ಇತ್ತು. ಸಭೆಯಲ್ಲಿ ಈ ವಿಷಯ ಪ್ರಸ್ತಾಪ ಮಾಡಿ ನಗರಪಾಲಿಕೆಯನ್ನಾಗಿ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ಈಗ ಹಾಸನ ನಗರ ಪಾಲಿಕೆ ಆಗಿದೆ ಎಂದು ಮಾಹಿತಿ ನೀಡಿದರು.
ಹಾಸನಾಂಬೆ ದೇವಿ ದರ್ಶನ ಮಾಡಿ ಗಣಪತಿಯ ದರ್ಶನ ಪಡೆದಿದ್ದೇನೆ. ಎಲ್ಲ ದೇವರಲ್ಲಿ ಪ್ರಾರ್ಥನೆ ಮಾಡಿದಂತೆ 2024-28ನೇ ವರ್ಷಗಳಲ್ಲಿ ಒಳ್ಳೆಯ ಮಳೆ, ಬೆಳೆ ಆಗಲಿ. ರೈತರು ಸುಭೀಕ್ಷೆಯಿಂದ ಇರಲಿ. ಈ ವರ್ಷ ಅಂದುಕೊಂಡಂತೆ ಒಳ್ಳೆಯ ಮಳೆ ಆಗಿದೆ. ಎಲ್ಲ ಜಲಾಶಯಗಳು ಕೂಡ ತುಂಬಿವೆ. ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಜನರಲ್ಲಿರುವ ಅಸಮಾನತೆ ಹೋಗಲಾಡಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ನೂರು ಕೋಟಿ ಜನರಿಗೆ ಒಳ್ಳೆಯದಾದರೆ ನಮಗೂ ಒಳ್ಳೆಯದಾಗುತ್ತದೆ. ನಾವೆಲ್ಲ ಸಮಾನ ಸಮಾಜದಲ್ಲಿ ಇರುವವರು. ನಾವುಗಳೆಲ್ಲಾ ಪರಸ್ಪರ ಪ್ರೀತಿಸಬೇಕೆ ಹೊರತು ಯಾವ ಕಾರಣಕ್ಕೂ ಪರಸ್ಪರ ದ್ವೇಶಿಸಬಾರದು. ದ್ವೇಷವನ್ನು ಹತ್ತಿಕ್ಕುವ ಕೆಲಸ ಮಾಡಬೇಕು. ಯಾವುದೇ ಪಟ್ಟಭದ್ರ ಹಿತಾಸಕ್ತಿಗಳು ದ್ವೇಷವನ್ನು ಬೆಳೆಸುವ ಕೆಲಸ ಮಾಡಿದರೆ ಅವರಿಗೆ ತಕ್ಕ ಶಾಸ್ತಿ ಮಾಡಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿರುವುದಾಗಿ ಹೇಳಿದರು.
ಇದೆ ವೇಳೆ ಸಚಿವರಾದ ರಾಮಲಿಂಗರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ, ಶಾಸಕ ಕೆ.ಎಂ. ಶಿವಲಿಂಗೇಗೌಡ, ಸಂಸದ ಶ್ರೇಯಸ್ ಎಂ. ಪಟೇಲ್ ಇತರರು ಉಪಸ್ಥಿತರಿದ್ದರು.