ಜಿಲ್ಲೆ

ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಗುರುವಾರ ನಾಲ್ವರು ಸಾವು

ಹಾಸನ: ಜಿಲ್ಲೆಯಲ್ಲಿ ಹೃದಯಾಘಾತದಿಂದ ಸರಣಿ ಸಾವು ಮುಂದುವರಿದಿದೆ. ಹದಿಹರೆಯದವರಿಂದ ಹಿಡಿದು ವೃದ್ಧರವರೆಗೂ ಒಬ್ಬರ ಹಿಂದೆ ಒಬ್ಬರಂತೆ ಹಾರ್ಟ್ ಅಟ್ಯಾಕ್‌ಗೆ ಬಲಿಯಾಗುತ್ತಲೇ ಇದ್ದಾರೆ. 20 ವರ್ಷದೊಳಗಿನ ನಾಲ್ವರು ಯುವಕ- ಯುವತಿಯರು, 20-50 ವರ್ಷಗಳ ನಡುವಿನ 14 ಜನ ಹಾಗೂ 50 ವರ್ಷ ಮೇಲ್ಪಟ್ಟ 12 ಮಂದಿ ಸೇರಿ ಜಿಲ್ಲೆಯಲ್ಲಿ ಕಳೆದ 43 ದಿನಗಳ ಅಂತರದಲ್ಲಿ ಒಟ್ಟು 30 ಮಂದಿ ಜೀವ ಕಳೆದುಕೊಂಡಿದ್ದಾರೆ.

ನಗರದ ಕರೀಗೌಡ ಕಾಲೊನಿಯ ಸಂಪತ್‌ಕುಮಾರ್ (50), ಆಲೂರು ತಾಲೂಕಿನ ಕಲ್ಲಾರೆ ಗ್ರಾಮದ ಕಾರಗೋಡು ಗ್ರಾಪಂ ಸದಸ್ಯ ಸಂತೋಷ್ (41), ಸಕಲೇಶಪುರ ತಾಲೂಕು, ಬೆಳಗೋಡು ಹೋಬಳಿ ಚಿಕ್ಕನಾಯಕನಹಳ್ಳಿ ಗ್ರಾಮದ ಸಿ.ಬಿ.ವಿರೂಪಾಕ್ಷ (70) ಹಾಗೂ ಹಾಸನ ತಾಲೂಕಿನ ಅರೆಕೆರೆ ಗ್ರಾಮದ ದೇವಮ್ಮ (72) ಮೃತರು.

ಸಂಪತ್‌ಕುಮಾರ್ ಅವರಿಗೆ ಬುಧವಾರ ರಾತ್ರಿ ಎದೆ ನೋವು ಮತ್ತಿತರ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದಂತೆಯೇ ಅವರನ್ನು ಕೂಡಲೇ ಕುಟುಂಬಸ್ಥರು ಹಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಚಿಕಿತ್ಸೆ ಪಡೆಯುವ ಮುನ್ನವೇ ಅವರು ಉಸಿರು ಚೆಲ್ಲುತ್ತಿದ್ದಾರೆ.

ಆಲೂರು ತಾಲೂಕಿನ ಕಲ್ಲಾರೆ ಗ್ರಾಮದ, ಕಾರಗೋಡು ಗ್ರಾ.ಪಂ. ಸದಸ್ಯ ಸಂತೋಷ್ ಬುಧವಾರ ರಾತ್ರಿ ಮಲಗಿದ್ದಲ್ಲಿಯೇ ಹೃದಯಾಘಾತವಾಗಿದೆ. ಬೆಳಿಗ್ಗೆ ಮೇಲೇಳದಿದ್ದಾಗ ಆತಂಕಗೊಂಡ ಕುಟುಂಬಸ್ಥರು, ಹಾಸನದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬರುವ ವೇಳೆಗೆ ಮೃತಪಟ್ಟಿದ್ದರು.

ಸಕಲೇಶಪುರ ತಾಲೂಕು ಬೆಳಗೋಡು ಹೋಬಳಿ ಚಿಕ್ಕನಾಯಕನಹಳ್ಳಿ ಗ್ರಾಮದ ಸಿ.ಬಿ.ವಿರೂಪಾಕ್ಷ ಎಂಬುವವರಿಗೆ ಬುಧವಾರ ಮಧ್ಯರಾತ್ರಿ 11.30 ರ ಸುಮಾರಿನಲ್ಲಿ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಸಕಲೇಶಪುರ ಕ್ರಾಫರ್ಡ್ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾರೆ.

ಹಾಸನ ತಾಲೂಕಿನ ಅರೆಕೆರೆ ಗ್ರಾಮದಲ್ಲಿ ದೇವಮ್ಮ ಎಂಬ ವೃದ್ಧೆ ಕಳೆದ ಹಲವು ದಿನಗಳಿಂದ ಹೃದಯ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದರು. ಬೆಂಗಳೂರಿನ ಜಯದೇವ ಆಸ್ಪತ್ರೆಗೆ ತೆರಳಿ ವೈದ್ಯರ ತಪಾಸಣೆಗೆ ಒಳಗಾಗಿ ಔಷಧ ಪಡೆದು ವಾಪಸ್ಸಾಗುತ್ತಿದ್ದರು. ಬುಧವಾರ ಸಹ ಆಸ್ಪತ್ರೆಗೆ ತೆರಳಿ ವೈದ್ಯರಿಗೆ ತೋರಿಸಿಕೊಂಡು ಬೆಂಗಳೂರಿನಿಂದ ಮನೆಗೆ ಬರುತ್ತಿರುವಾಗ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆ.