ಹಾಸನ: ಹಾಸನ ಜಿಲ್ಲೆಯ ಸಂಸದ ಶ್ರೇಯಸ್ ಎಂ.ಪಟೇಲ್ ಅವರು ಬುಧವಾರ ನವದೆಹಲಿಯಲ್ಲಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಪಿಯೂಷ್ ಗೋಯಲ್ ಅವರನ್ನು ಭೇಟಿಯಾಗಿ, ಹಾಸನ ಜಿಲ್ಲೆಯ ತಂಬಾಕು ಬೆಳೆಗಾರರ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಮತ್ತು ಸವಾಲುಗಳ ಕುರಿತು ಚರ್ಚಿಸಿ ಮನವಿ ಸಲ್ಲಿಸಿದರು.
ಕೆಲ ದಿನಗಳ ಹಿಂದೆ ನಿರಂತರವಾಗಿ ಸುರಿದ ಅಕಾಲಿಕ ಮಳೆಯ ಪರಿಣಾಮವಾಗಿ ಹಾಸನ ಜಿಲ್ಲೆಯ ಅರಕಲಗೂಡು, ಹೊಳೆನರಸೀಪುರ, ಹಳ್ಳಿ ಮೈಸೂರು ಸೇರಿದಂತೆ ವಿವಿಧೆಡೆ ತಂಬಾಕು ಬೆಳೆಗಾರರು ಭಾರೀ ನಷ್ಟ ಅನುಭವಿಸಿದ್ದಾರೆ ಎಂಬುದನ್ನು ಸಂಸದರು ಸಚಿವರ ಗಮನಕ್ಕೆ ತಂದರು.
ಈ ನಿಟ್ಟಿನಲ್ಲಿ, ತಂಬಾಕು ಬೆಳೆಗೆ ಎಫ್‌ಆರ್‌ಪಿ ಮತ್ತು ಎಫ್ಸಿವಿ ಒದಗಿಸುವಂತೆ, ಪಾರದರ್ಶಕ ಗ್ರೇಡಿಂಗ್ ವ್ಯವಸ್ಥೆ ಜಾರಿಗೆ ತರುವಂತೆ, ಉತ್ತಮ ಎಕ್ಸ್ ಗ್ರೇಷಿಯಾ ಪಾವತಿ ವ್ಯವಸ್ಥೆ ಜಾರಿಗೊಳಿಸುವಂತೆ ಮತ್ತು ಬದಲಿ ಬೆಳೆಗಳನ್ನು ಬೆಳೆಯಲು ರೈತರನ್ನು ಉತ್ತೇಜಿಸುವಂತೆ ಸಚಿವರಲ್ಲಿ ಮನವಿ ಮಾಡಿದರು.
ಬಳಿಕ ಶ್ರೇಯಸ್ ಪಟೇಲ್ ಮಾತನಾಡಿ, ಕಳೆದ 15 ದಿನಗಳ ಹಿಂದೆ ರೈತರು ತಮಗೆ ಎದುರಾಗಿರುವ ಸಮಸ್ಯೆ ಬಗರಿಸುವಂತೆ ಒತ್ತಾಯಿಸಿ ಅರಕಲಗೂಡು ತಾಲೂಕು ರಾಮನಾಥಪುರದಲ್ಲಿರುವ ತಂಬಾಕು ಮಂಡಳಿ ಎದುರು ರೈತರು ಪ್ರತಿಭಟನೆ ಹಮ್ಮಿಕೊಂಡಿದ್ದರು. ಅಲ್ಲಿಗೆ ಭೇಟಿ ನೀಡಿ ರೈತರು ಹಾಗೂ ತಂಬಾಕು ಬೆಳೆಗಾರರ ಸಮಸ್ಯೆ ಆಲಿಸಿದ್ದೆ. ಶೀಘ್ರವೇ ಸಂಸತ್ ಚಳಿಗಾಲದ ಅಧಿವೇಶನ ನಡೆಯಲಿದೆ. ಆ ವೇಳೆ ಸಂಬಂಧಪಟ್ಟ ಸಚಿವರನ್ನು ಭೇಟಿ ಮಾಡಿ ಗಮನ ಸೆಳೆಯುವುದಾಗಿ ಭರವಸೆ ನೀಡಿದ್ದೆ. ಅಂದು ರೈತರ ಕೂಗಿಗೆ ಸ್ಪಂದಿಸಿ ಇಂದು ಕೇಂದ್ರ ಸಚಿವರನ್ನು ಭೇಟಿ ನಮ್ಮ ರೈತರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಎಂದು ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.