ಜಿಲ್ಲೆ

ಹಾಸನ ಕೃಷಿ ಇಲಾಖೆ ತಾಂತ್ರಿಕ ವ್ಯವಸ್ಥಾಪಕ ಹುದ್ದೆ ನೇರ ನೇಮಕಾತಿಗೆ ಅರ್ಜಿ ಆಹ್ವಾನ

ಹಾಸನ: ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ ಆತ್ಮ ಯೋಜನೆಯಡಿ 2023-24ನೇ ಸಾಲಿನ ಆಲೂರು ಮತ್ತು ಅರಕಲಗೂಡು ತಾಲ್ಲೂಕುಗಳಲ್ಲಿ ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕರು ಹುದ್ದೆಗೆ (2 ಹುದ್ದೆ) ಮತ್ತು ಬೇಲೂರು ತಾಲ್ಲೂಕಿನ ಮಾದಿಹಳ್ಳಿ ರೈತ ಸಂಪರ್ಕ ಕೇಂದ್ರದಲ್ಲಿ ಸಹಾಯಕ ತಾಂತ್ರಿಕ ವ್ಯವಸ್ಥಾಪಕರ ಹುದ್ದೆಗೆ (1ಹುದ್ದೆ) ನೇರಗುತ್ತಿಗೆ ಆಧಾರದ ಮೇಲೆ ಸೀಮಿತ ಅವಧಿಗೆ ನೇಮಕಾತಿ ಮಾಡಿಕೊಳ್ಳಲು ಷರತ್ತಿಗೆ ಒಳಪಟ್ಟು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕರು ಹುದ್ದೆಗೆ ಅರ್ಹ ಅಭ್ಯರ್ಥಿಗಳು ಕೃಷಿ, ಕೃಷಿ ಸಂಬಂಧಿತ ವಿಶ್ವವಿದ್ಯಾನಿಲಯಗಳು ನೀಡುವ ಕೃಷಿ ಸ್ನಾತಕೋತ್ತರ ಪದವಿಯೊಂದಿಗೆ ಕಂಪ್ಯೂಟರ್ ಜ್ಞಾನ ಹೊಂದಿದ್ದು, ಕನಿಷ್ಠ 2 ವರ್ಷ ಕೃಷಿ, ಕೃಷಿ ಸಂಬಂಧಿತ ವಿಭಾಗಗಳಲ್ಲಿ ಕ್ಷೇತ್ರ ಮಟ್ಟದ ಅನುಭವ ಹೊಂದಿರಬೇಕು. ವೇತನ ತಿಂಗಳಿಗೆ 30,000 ರೂ. ಇರಲಿದೆ.

ಸಹಾಯಕ ತಾಂತ್ರಿಕ ವ್ಯವಸ್ಥಾಪಕರು ಹುದ್ದೆಗೆ ಅರ್ಹ ಅಭ್ಯರ್ಥಿಗಳು ಕೃಷಿ, ಕೃಷಿ ಸಂಬಂಧಿತ ವಿಶ್ವವಿದ್ಯಾನಿಲಯಗಳು ನೀಡುವ ಕೃಷಿ ಪದವಿಯೊಂದಿಗೆ ಕಂಪ್ಯೂಟರ್ ಜ್ಞಾನ ಹೊಂದಿದ್ದು, ಕನಿಷ್ಠ 1 ವರ್ಷ ಕೃಷಿ, ಕೃಷಿ ಸಂಬಂಧಿತ ವಿಭಾಗಗಳಲ್ಲಿ ಕ್ಷೇತ್ರ ಮಟ್ಟದ ಅನುಭವ ಹೊಂದಿರಬೇಕು. ವೇತನ 25.000 ರೂ. ಇದೆ.

ಆಸಕ್ತ ಅಭ್ಯರ್ಥಿಯು ಆತ್ಮ ವಿಭಾಗ, ಜಂಟಿ ಕೃಷಿ ನಿರ್ದೇಶಕರ ಕಚೇರಿ, ಹಾಸನ ಇಲ್ಲಿ ಅರ್ಜಿಯನ್ನು ಪಡೆದು, ಅರ್ಜಿ ನಮೂನೆಯಲ್ಲಿ ಪೂರ್ಣ ಮಾಹಿತಿಯೊಂದಿಗೆ ಭರ್ತಿ ಮಾಡಿ ಆ.31ರ ಸಂಜೆ 5ರೊಳಗೆ ಜಂಟಿ ಕೃಷಿ ನಿರ್ದೇಶಕರು, ಹಾಸನ ಇವರ ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಆತ್ಮ ವಿಭಾಗ, ಜಂಟಿ ಕೃಷಿ ನಿರ್ದೇಶಕರ ಕಚೇರಿ, ಹಾಸನ ಸಂಪರ್ಕಿಸಬಹುದಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.