ಅಕ್ಕಿಆಲೂರ: ಪಟ್ಟಣದಿಂದ ಶಿರಸಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹಾಳಾಗಿರುವುದರಿಂದ ವಾಹನ ಸವಾರರು ರೋಸಿ ಹೋಗಿದ್ದು, ಅಧಿಕಾರಿ, ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅಕ್ಕಿಆಲೂರಿನಿಂದ ಶಿರಸಿಗೆ ಸಂಚರಿಸುವ ಶಿರಸಿ- ಹಾವೇರಿ ರಾಜ್ಯ ಹೆದ್ದಾರಿ ಅಕ್ಕಿಆಲೂರಿನ ನಂತರ ಬರುವ ನಾಲ್ಕನೇ ಕ್ರಾಸ್ನಿಂದ ಶಿರಸಿವರೆಗೂ ಗುಂಡಿಗಳು ಬಿದ್ದು ರಸ್ತೆ ಹದಗೆಟ್ಟಿದೆ. ಸಮೀಪದ ಹನುಮನಕೊಪ್ಪ ಬಳಿ ರಸ್ತೆಗಳಲ್ಲಿ ದೊಡ್ಡ ದೊಡ್ಡ ಕಂದಕಗಳು ಬಿದ್ದಿವೆ. ಹಾನಗಲ್ಲ ತಾಲೂಕು ಗಡಿ ಮುಕ್ತಾಯದ ನಂತರದ ದಾಸನಕೊಪ್ಪದಿಂದ ಶಿರಸಿವರೆಗೂ ರಸ್ತೆಯ ದುಸ್ಥಿತಿ ಹೇಳತೀರದು.
ಕತ್ರಿಕೊಪ್ಪ, ಸಮ್ಮಸಗಿ ಗ್ರಾಮಗಳ ಬಳಿ ಒಂದು ವಾಹನ ತೆರಳಿದ ನಂತರ ಎದುರಿನ ವಾಹನಗಳು ಸಂಚರಿಸಬೇಕಾದ ಸ್ಥಿತಿಯಲ್ಲಿ ರಸ್ತೆಯಲ್ಲಿದೆ. ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಶಿರಸಿ ಮೂಲಕ ಸಂಪರ್ಕ ಕಲ್ಪಿಸಲು ಈ ರಸ್ತೆ ಪ್ರಮುಖವಾಗಿದೆ. ಇದರಿಂದ ವಾಹನಗಳ ಸಂಖ್ಯೆ ಅಧಿಕವಾಗಿರುವ ಹಿನ್ನೆಲೆಯಲ್ಲಿ ವಾಹನ ಸವಾರರಿಂದ ರಸ್ತೆ ದುರಸ್ತಿ ಮಾಡಬೇಕೆಂಬ ಒತ್ತಾಯ ಕೇಳಿಬರುತ್ತಿದೆ.
ನಿರ್ಲಕ್ಷ್ಯಕ್ಕೊಳಗಾದ ರಸ್ತೆ: ಅಕ್ಕಿಆಲೂರಿನಿಂದ ಶಿರಸಿಗೆ ಸಂಪರ್ಕ ಕಲ್ಪಿಸಿಕೊಡುವ ಈ ರಸ್ತೆ ನಾಲ್ಕನೇ ಕ್ರಾಸ್ವರೆಗೂ ಉತ್ತಮವಾಗಿದೆ. ನಂತರ ಬರುವ ಅರಣ್ಯ ಪ್ರದೇಶದಲ್ಲಿ ಹೆಚ್ಚು ಹಾನಿಯಾಗಿದೆ. ಶಿರಸಿ ಮತ್ತು ಹಾನಗಲ್ಲ ಬೇರೆ ಬೇರೆ ಜಿಲ್ಲೆಯ ವ್ಯಾಪ್ತಿ ಹೊಂದಿರುವುದರಿಂದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಎದುದು ಕಾಣುತ್ತಿದೆ. ಇದರಿಂದ ಅಭಿವೃದ್ಧಿ ಕಾಣದೆ ರಸ್ತೆ ಸಾಕಷ್ಟು ಹದಗೆಟ್ಟಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಕಾಂಕ್ರೀಟ್ ರಸ್ತೆಯೇ ಪರಿಹಾರ: ಈ ಭಾಗದಲ್ಲಿ ಅಧಿಕ ಮಳೆ ಮತ್ತು ಹೆಚ್ಚು ವಾಹನಗಳ ಸಂಚಾರದ ಕಾರಣ ಪ್ರತಿವರ್ಷ ರಸ್ತೆಯಲ್ಲಿನ ಗುಂಡಿಗಳನ್ನು ತಾತ್ಕಾಲಿಕವಾಗಿ ಮುಚ್ಚುವ ಕೆಲಸವಾಗುತ್ತದೆ. ಆದರೂ, ರಸ್ತೆ ಪದೇಪದೆ ಹಾಳಾಗಿ ಸವಾರರು ತೊಂದರೆ ಅನುಭವಿಸುವಂತಾಗಿದೆ. ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿದರೆ ರಸ್ತೆಯ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ ಎಂಬುದು ಸವಾರರ ಅಭಿಪ್ರಾಯ.
ಎರಡು ವರ್ಷದ ಮುಂಚೆ ಅಕ್ಕಿಆಲೂರ- ಶಿರಸಿ ರಸ್ತೆಯ ಉತ್ತಮವಾಗಿತ್ತು. 45 ನಿಮಿಷದೊಳಗೆ ಅಕ್ಕಿಆಲೂರಿನಿಂದ ಶಿರಸಿಗೆ ತೆರಳುತ್ತಿದ್ದೇವು. ಈಗ 1.30 ಗಂಟೆ ಕಾಲಾವಕಾಶ ತೆಗೆದುಕೊಳ್ಳುವಂತಾಗಿದೆ. ಕೂಡಲೆ ರಸ್ತೆ ದುರಸ್ತಿ ಮಾಡಬೇಕು. | ನಾಗರಾಜ ಚನ್ನಾಪುರಮಠ, ವಾಹನ ಸವಾರ ಶಿರಸಿ-ಹಾವೇರಿ ರಾಜ್ಯ ಹೆದ್ದಾರಿ ನಾಲ್ಕನೇ ಕ್ರಾಸ್ನಿಂದ ಹಾಳಾಗಿರುವುದು ತಿಳಿದುಬಂದಿದೆ. ಸರ್ಕಾರದ ಸ್ವಾಧೀನದಲ್ಲಿರುವ ರಾಜ್ಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದಿಂದ ರಸ್ತೆ ನಿರ್ಮಾಣ ಮಾಡಲು ಅವಕಾಶವಿದೆ. ಆದರೆ, ತಾಲೂಕಿನ ಲೋಕೋಪಯೋಗಿ ಇಲಾಖೆಯಿಂದ ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡಲು ಮಾತ್ರ ಅವಕಾಶವಿದೆ. ಅದಕ್ಕಾಗಿ ವರದಿ ನೀಡಲಾಗಿದೆ. ಎಕ್ಕೂಂಬಿ ಮೊಳಕಾಲ್ಮೂರು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಿ ಎರಡು ವರ್ಷವಾಗಿದೆ. ಕೇಂದ್ರ ಸರ್ಕಾರದಿಂದ ಕಾಮಗಾರಿ ಆರಂಭವಾಗಬೇಕಿದೆ. | ಪ್ರಕಾಶ ಶೆಟ್ಟಿಕೆರಿ, ಲೋಕೋಪಯೋಗಿ ಇಲಾಖೆ ಎಇಇ, ಹಾನಗಲ್ಲ