ಶಿಕಾರಿಪುರ: ಚರ್ಮಗಂಟು ರೋಗದ ಬಗ್ಗೆ ರೈತರು ಆತಂಕ ಪಡುವ ಅಗತ್ಯವಿಲ್ಲ. ರೋಗ ನಿರೋಧಕ ಲಸಿಕೆಗಳು ಲಭ್ಯವಿದ್ದು ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯ ಪಶು ವೈದ್ಯಾಧಿಕಾರಿ(ಆಡಳಿತ) ಡಾ. ಎಂ.ಬಿ.ರವಿಕುಮಾರ್ ಹೇಳಿದರು.
ಮಾಸೂರು ರಸ್ತೆಯಲ್ಲಿ ಜಾನುವಾರುಗಳಿಗೆ ರೋಗ ನಿರೋಧಕ ಲಸಿಕೆ ನೀಡಿ ಮಾತನಾಡಿ, ತಾಲೂಕಿನಲ್ಲಿ ಅಂದಾಜು 70,000 ಜಾನುವಾರುಗಳಿವೆ. ಅವುಗಳಲ್ಲಿ 10,000 ಎಮ್ಮೆಗಳಿದ್ದು ಅವುಗಳಿಗೆ ಲಸಿಕೆ ಹಾಕುವುದಿಲ್ಲ. ಕಳೆದ 2 ವರ್ಷದಿಂದ ತಾಲೂಕಿನ ಕೆಲ ಭಾಗಗಳಲ್ಲಿ ಚರ್ಮಗಂಟು ರೋಗ ಕಂಡು ಬರುತ್ತಿದೆ. ಹಾವೇರಿ ಜಿಲ್ಲೆಯಲ್ಲಿ ಚರ್ಮಗಂಟು ರೋಗದ ಪ್ರಮಾಣ ಹೆಚ್ಚಾಗಿದೆ. ಆ ಭಾಗದಿಂದ ಜಾನುವಾರುಗಳನ್ನು ತರುತ್ತಿರುವ ಕಾರಣ ರೋಗ ಉಲ್ಬಣಗೊಂಡಿದೆ. ಯಾವುದೇ ಕಾರಣಕ್ಕೂ ಹೊರಗಡೆಯಿಂದ ಜಾನುವಾರುಗಳನ್ನು ತರಬೇಡಿ ಎಂದರು.
ಸೊಳ್ಳೆ, ನೊಣ ಮತ್ತು ಉಣ್ಣೆಗಳಿಂದ ಚರ್ಮಗಂಟು ರೋಗ ಬರುತ್ತದೆ. ಇದಕ್ಕೆ ನಿಖರವಾದ ಮದ್ದಿಲ್ಲ. ಜಾನುವಾರುಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಜೌಷಧಿ ಹಾಗೂ ಲಸಿಕೆ ನೀಡಲಾಗುವುದು. ರೈತರು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ದನದ ಸಂತೆಗಳನ್ನು ನಿಷೇಧಿಸಲಾಗಿದೆ ಎಂದರು. ಚರ್ಮಗಂಟಿನಿಂದ ಸಾವನ್ನಪ್ಪಿದ 21 ಜಾನುವಾರುಗಳಿಗೆ ಪರಿಹಾರ ಹಣ ಮಂಜೂರಾಗಿದೆ. ಅದನ್ನು ಆ ರೈತರ ಖಾತೆಗೆ ವರ್ಗಾವಣೆ ಮಾಡಲಾಗುವುದು ಎಂದರು.
ನಮಗೆ ಒಟ್ಟು 60,000 ಲಸಿಕೆಯ ಅಗತ್ಯವಿದೆ. ಇದೀಗ 25,000 ಲಸಿಕೆ ಲಭ್ಯವಾಗಿದೆ. ಮೊದಲ ಕಂತಿನ 14,000 ಲಸಿಕೆಗಳನ್ನು ಅತಿ ಹೆಚ್ಚು ಚರ್ಮಗಂಟು ರೋಗ ಕಂಡು ಬಂದ ಕಡೇನಂದಿಹಳ್ಳಿ ಮುಂತಾದ ಭಾಗಗಳ ಪಶುಚಿಕಿತ್ಸಾ ಕೇಂದ್ರಗಳಿಗೆ ಕಳುಹಿಸಲಾಗಿದೆ. ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.