ಅಕ್ಕಿಆಲೂರ: ಸಮೀಪದ ಹಾವಣಗಿ ಗ್ರಾಮ ಪಂಚಾಯಿತಿ ಕಾರ್ಯಾಲಯದ ಬೀಗ ಗ್ರಾಪಂ ಅಧ್ಯಕ್ಷೆ ಶೃತಿ ಜವಳಿ ಪತಿ ಸುರೇಶನ ಸುಪರ್ದಿಯಲ್ಲಿದ್ದು, ಕಾರ್ಯನಿಮಿತ್ತ ಗ್ರಾಮಕ್ಕೆ ಭಾನುವಾರ ಭೇಟಿ ನೀಡಿದ್ದ ಪಿಡಿಒ ಶಮಂತಕಮಣಿ ಕಾಶಲ್ ಬೀಗ ಪಡೆಯಲು ಪೊಲೀಸರ ಮೊರೆ ಹೋಗಬೇಕಾದ ಘಟನೆ ನಡೆಯಿತು.
ಹಾವಣಗಿ ಗ್ರಾಪಂ ಪಿಡಿಒ ಶಮಂತಕಮಣಿ ಕಾಶಲ್ ಶನಿವಾರ ಗ್ರಾಮದ ಗ್ರಾಮದೇವಿ ಪಾದಗಟ್ಟೆ ಬಳಿ ಪೈಪ್ ಲೈನ್ ಒಡೆದು ನೀರು ವ್ಯಯವಾಗುತ್ತಿದ್ದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ವೇಳೆ ಸಿಪಾಯಿ ಬಳಿ ಗ್ರಾಪಂ ಬಾಗಿಲು ತೆರೆಯಲು ಹೇಳಿದಾಗ, ಗ್ರಾಪಂ ಅಧ್ಯಕ್ಷೆ ಶೃತಿ ಜವಳಿ ಪತಿ ಸುರೇಶ ಹತ್ತಿರ ನೀಡಿರುವುದಾಗಿ ತಿಳಿಸಿದ್ದಾನೆ. ಮತ್ತೊಂದು ಚಾವಿ ಗ್ರಾಪಂ ಕಂಪ್ಯೂಟರ್ ನಿರ್ವಾಹಕ ಸುನೀಲ ಬಳಿ ಇದ್ದರೂ ಚಾವಿ ನೀಡದೇ ಸತಾಯಿಸಿದ್ದಾರೆ. ಇದರಿಂದ ಪಿಡಿಒ ವಾಪಸ್ ಆಗಿದ್ದಾರೆ.
ಭಾನುವಾರ ಕಾರ್ಯ ನಿಮಿತ್ತ ಗ್ರಾಪಂಗೆ ತೆರಳಿದಾಗ ಕೆಲಸ ಸದಸ್ಯರು ಭಾನುವಾರ ಏಕೆ ಕೆಲಸಕ್ಕೆ ಬಂದಿದ್ದೀರಾ ? ಎಂದು ಪಿಡಿಒಗೆ ಧಮಕಿ ಹಾಕಿದ್ದಾರೆ. ಇದರಿಂದ ಭಯಗೊಂಡ ಪಿಡಿಒ ಕಾಶಲ್ ಆಡೂರ ಪಿಎಸ್ಐ ಆಂಜನೇಯ ಅವರಿಗೆ ವಿಷಯ ಮುಟ್ಟಿಸಿದರು. ನಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಗ್ರಾಪಂ ಚಾವಿಯನ್ನು ಸುರೇಶನಿಂದ ಸಿಪಾಯಿಗೆ ಹಸ್ತಾಂತರಿಸಿದರು. ಆದರೆ, ಕೆಲ ಸದಸ್ಯರು ಈಗ ಬೀಗ ತೆರೆದರೆ ಗ್ರಾಪಂ ದಾಖಲೆಗಳು ಕಳವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರಿಂದ ಸಿಪಾಯಿ ಬೀಗ ನೀಡಲು ನಿರಾಕರಿಸಿದ್ದಾನೆ.
ಬೀಗ ಕೊಡಿಸಿದ ಇಒ:ಘಟನೆ ಕುರಿತು ಹಾನಗಲ್ಲ ತಾಪಂ ಇಒ ಚನ್ನಪ್ಪ ರಾಯಣ್ಣನವರ ಅವರನ್ನು ‘ವಿಜಯವಾಣಿ’ ಸಂರ್ಪಸುತ್ತಿದ್ದಂತೆ, ಹಾವಣಗಿ ಗ್ರಾಪಂನ ಬೀಗವನ್ನು ಪಿಡಿಒಗೆ ಕೊಡಿಸಿದರು. ಅಲ್ಲದೆ, ಕಿರುಕುಳ ನೀಡಿದ ಕುರಿತು ಪಿಡಿಒ ಅಗತ್ಯ ದಾಖಲೆ ಕೊಟ್ಟರೆ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ಅಧ್ಯಕ್ಷೆ ಪತಿ ಸಹಕಾರಿ ಸಂಘದ ಕಾರ್ಯದರ್ಶಿ: ಗ್ರಾಪಂ ಅಧ್ಯಕ್ಷೆ ಶೃತಿ ಪತಿ ಸುರೇಶ ಜವಳಿ ಅದೇ ಗ್ರಾಮದ ಸರ್ಕಾರಿ ಸ್ವಾಧೀನದ ವಿಎಸ್ಎಸ್ ಸಹಕಾರಿ ಸಂಘದ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾನೆ. ಗ್ರಾಪಂನಲ್ಲಿಯ ಅಗತ್ಯ ದಾಖಲೆ ಕಳೆದು ಹೋದರೆ, ನನ್ನ ಪತ್ನಿ ಮೇಲೆ ಆರೋಪ ಬರುತ್ತದೆ. ಹೀಗಾಗಿ ಗ್ರಾಪಂ ಬೀಗ ಕೊಡಲು ಹಿಂದೇಟು ಹಾಕುತ್ತಿದ್ದಾನೆ ಎಂದು ಪಿಡಿಒ ಕಾಶಲ್ ಆರೋಪಿಸಿದ್ದಾರೆ.
ಹಳೇ ಬಿಲ್ಗಳಿಗೆ ಸಹಿ ಮಾಡಲು ಕಿರುಕುಳ: 2018ರಿಂದ ಹಲವರಿಗೆ ಹಾವಣಗಿ ಗ್ರಾಪಂನಿಂದ ಪೈಪ್ ಲೈನ್, ಪೈಪ್, ಮೋಟಾರ್, ಬೀದಿದೀಪ, ಸ್ಟೇಶನರಿ ಸೇರಿ ವಿವಿಧ ಸಾಮಗ್ರಿ ಖರೀದಿಯ ಬಿಲ್ನ ಬಾಕಿ ಹಣ ನೀಡಬೇಕಿದೆ. ಹಣ ಬಿಡುಗಡೆ ಮಾಡಿ ಬಿಲ್ಗೆ ಸಹಿ ಮಾಡುವಂತೆ ನಿತ್ಯ ಒತ್ತಡ ಹಾಕಲಾಗುತ್ತಿದೆ. ಆದರೆ, ಆ ಬಿಲ್ಗಳಿಗೆ ಸರಿಯಾದ ದಾಖಲೆಗಳಿಲ್ಲ ಎನ್ನಲಾಗಿದೆ. ಇದೇ ವಿಷಯಕ್ಕೆ 2018ರಿಂದ ಗ್ರಾಪಂಗೆ ನಾಲ್ಕು ಪಿಡಿಒಗಳು ಬದಲಾದರು. ಯಾವ ಕಾರಣಕ್ಕೆ ಬಿಲ್ಗಳು ಬಾಕಿ ಉಳಿದಿವೆ ಎಂಬುದು ಅನುಮಾನಕ್ಕೆ ಕಾರಣವಾಗಿದೆ.
ನಾನು ಕಚೇರಿಗೆ ಬಂದರೆ ಮೂವರ ಸದಸ್ಯರು ನಿತ್ಯ ಎದುರಿಗೆ ಕುಳಿತು ಎಲ್ಲ ರೀತಿ ದಾಖಲೆ ಕೇಳುತ್ತಾರೆ. ಹಳೇ ಬಿಲ್ಗಳಿಗೆ ಸಹಿ ಮಾಡಲು ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಅನಗತ್ಯವಾಗಿ ಅಧ್ಯಕ್ಷೆಯ ಪತಿ ಸುರೇಶ ಜವಳಿ ಗ್ರಾಪಂ ವಿಷಯದಲ್ಲಿ ಪಾಲ್ಗೊಳ್ಳುತ್ತಾರೆ. ನಿತ್ಯ ಕಿರಿಕಿರಿಯಾಗುತ್ತಿದೆ.| ಶಮತಕಮಣಿ ಕಾಶಲ್, ಪಿಡಿಒಗ್ರಾಪಂ ಪಿಡಿಒ ಬೇಜಬ್ದಾರಿಯಾಗಿದ್ದಾರೆ. ಈಗಾಗಲೇ 14ನೇ ಹಣಕಾಸಿನ ಯೋಜನೆಗೆ ಸಂಬಂಧಿಸಿದ 1 ಫೈಲ್ ಕಳೆದಿದೆ. ಹೀಗಾಗಿ ಬೀಗವನ್ನು ನಾನೇ ಇಟ್ಟುಕೊಂಡಿದ್ದೇನೆ. ನಾವು ಯಾವುದೇ ಕಿರುಕುಳ ಕೊಟ್ಟಿಲ್ಲ.| ಸುರೇಶ ಜವಳಿ, ಗ್ರಾಪಂ ಅಧ್ಯಕ್ಷೆಯ ಪತಿ