ಹೊಳೆನರಸೀಪುರದ ಪುರಸಭೆ ಕಚೇರಿಯಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಶಾಸಕ ಎಚ್.ಡಿ.ರೇವಣ್ಣ ಮಾತನಾಡಿದರು. 
ಜಿಲ್ಲೆ

ಹಾಲು ದರ ಹೆಚ್ಚಳದಿಂದ ಹಾಮುಲ್‌ಗೆ ತಿಂಗಳಿಗೆ 9 ಕೋಟಿ ರೂ. ನಷ್ಟ: ಎಚ್.ಡಿ.ರೇವಣ್ಣ ಆತಂಕ

ಹಾಸನ: ರಾಜ್ಯ ಸರ್ಕಾರದ ಆದೇಶದಂತೆ ಏಪ್ರಿಲ್ 1ರಿಂದ ಉತ್ಪಾದಕರಿಂದ ಹಾಲು ಖರೀದಿ ದರವನ್ನು ಪ್ರತಿ ಲೀಟರ್‌ಗೆ 4 ರೂಪಾಯಿ ಹೆಚ್ಚಿಸಲಾಗಿದೆ. ಆದರೆ ಈ ನಿರ್ಧಾರದಿಂದ ಹಾಮೂಲ್, ಮಾರಾಟವಾಗದ ಹಾಲಿಗೂ ನೀಡುವ ಹಣದಿಂದ ತಿಂಗಳಿಗೆ 9 ಕೋಟಿ ರೂಪಾಯಿ ನಷ್ಟವಾಗುವ ಆತಂಕ ಎದುರಾಗಿದೆ ಎಂದು ಮಾಜಿ ಸಚಿವ ಹಾಗೂ ಹಾಮೂಲ್ ಅಧ್ಯಕ್ಷ ಎಚ್.ಡಿ.ರೇವಣ್ಣ ಹೇಳಿದರು.

ನಗರದ ಡೈರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಬಗ್ಗೆ ಮುಖ್ಯಮಂತ್ರಿ, ಸರ್ಕಾರದ ಕಾರ್ಯದರ್ಶಿ ಹಾಗೂ ಕೆಎಂಎಫ್‌ಗೆ ಎರಡು ಬಾರಿ ಪತ್ರ ಬರೆದು ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದೇನೆ ಎಂದು ತಿಳಿಸಿದರು.

ಹಾಸನ ಹಾಲು ಒಕ್ಕೂಟಕ್ಕೆ ಪ್ರತಿದಿನ 12.58 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಇದರಲ್ಲಿ 1.98 ಲಕ್ಷ ಲೀಟರ್ ಹಾಲು ಹಾಗೂ 1.20 ಲಕ್ಷ ಲೀಟರ್ ಮೊಸರನ್ನು ಮಾರಾಟ ಮಾಡಲಾಗುತ್ತಿದೆ. ಒಟ್ಟಾರೆ 3.18 ಲಕ್ಷ ಲೀಟರ್ ಉತ್ಪನ್ನಗಳು ಹಾಸನ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಮಾರಾಟವಾಗುತ್ತಿವೆ. ಆದರೆ ಉಳಿದ 9.40 ಲಕ್ಷ ಲೀಟರ್ ಉತ್ಪಾದಕರಿಂದ ಹಾಲು ಖರೀದಿ ದರವನ್ನು ಪ್ರತಿ ಲೀಟರ್‌ಗೆ 4 ರೂಪಾಯಿ ಹೆಚ್ಚಳ ಮಾಡಿರುವುದರಿಂದ ಮಾರಾಟವಾಗದ ಹಾಲಿನ ಉತ್ಪಾದಕರಿಗೆ ನೀಡಬೇಕಾಗಿರುವುದರಿಂದ ಹಾಮೂಲ್ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಲಿದೆ. ಅಷ್ಟೇ ಅಲ್ಲದೇ, ಇನ್ನೊಂದು ತಿಂಗಳಲ್ಲಿ 2.5 ಲಕ್ಷ ಲೀಟರ್ ಹಾಲು ಹೆಚ್ಚಾಗುವ ಸಾಧ್ಯತೆ ಇದೆ ಎಂದು ರೇವಣ್ಣ ತಿಳಿಸಿದರು.

ಮಾರಾಟವಾಗದ ಹಾಲಿಗೂ ಪ್ರತಿ ಲೀಟರ್‌ಗೆ 4 ರೂಪಾಯಿ ದರ ಹೆಚ್ಚಳ ಮಾಡಿ ಹಾಲು ಉತ್ಪಾದಕರಿಗೆ ನೀಡುವುದರಿಂದ ಹಾಸನ ಹಾಲು ಒಕ್ಕೂಟಕ್ಕೆ ದಿನಕ್ಕೆ 36 ಲಕ್ಷ ರೂಪಾಯಿ ಮತ್ತು ತಿಂಗಳಿಗೆ 9 ಕೋಟಿ ರೂಪಾಯಿ ನಷ್ಟವಾಗುತ್ತದೆ. ಇದು ಒಕ್ಕೂಟದ ಆರ್ಥಿಕ ಸ್ಥಿತಿಗೆ ದೊಡ್ಡ ಹೊಡೆತವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಒಂದು ಸಂಸ್ಥೆಯನ್ನು ಕಟ್ಟುವುದು ಸುಲಭವಲ್ಲ, ಕಟ್ಟಿರುವುದನ್ನು ಉಳಿಸಿಕೊಳ್ಳಬೇಕು. ಈ ಆತಂಕವನ್ನು ಮುಖ್ಯಮಂತ್ರಿಗಳಿಗೆ ತಿಳಿಸಿದ್ದೇನೆ. ಮುಖ್ಯಮಂತ್ರಿಗಳ ಆದೇಶಕ್ಕೆ ಗೌರವ ನೀಡಿ ಏಪ್ರಿಲ್ 1 ರಿಂದ ಹಾಲು ಖರೀದಿ ದರ ಹೆಚ್ಚಳ ಮಾಡಲಾಗಿದೆ. ಪ್ರಸ್ತುತ ಒಕ್ಕೂಟದ ಬಳಿ 5.5 ರಿಂದ 6 ಕೋಟಿ ರೂಪಾಯಿ ಲಾಭದ ಹಣ ಇದೆ. ಆ ಹಣ ಮುಗಿಯುವವರೆಗೆ ದರ ಹೆಚ್ಚಳವನ್ನು ಮುಂದುವರಿಸುತ್ತೇವೆ. ಆದರೆ ನಷ್ಟ ಶುರುವಾದರೆ ದರ ಕಡಿಮೆ ಮಾಡಬೇಕಾಗುತ್ತದೆ. ನಷ್ಟವಾದರೆ ಯಾರು ಜವಾಬ್ದಾರಿ ಹೊರುತ್ತಾರೆ. ಕೆಎಂಎಫ್ ಅಥವಾ ಸರ್ಕಾರ ನಷ್ಟವನ್ನು ಭರಿಸುತ್ತವೆಯೇ? ಎಂದು ಅವರು ಪ್ರಶ್ನಿಸಿದರು.

ಕೆಲವರು ಮುಖ್ಯಮಂತ್ರಿಗಳ ಹೇಳಿಕೆಯನ್ನು ಉಲ್ಲೇಖಿಸಿ 4 ರೂಪಾಯಿ ದರ ಹೆಚ್ಚಿಸಲು ಒತ್ತಡ ಹೇರಿದ್ದಾರೆ ಎಂದು ಆರೋಪಿಸಿದ ರೇವಣ್ಣ, ತಿಂಗಳಿಗೆ 9 ಕೋಟಿ ರೂಪಾಯಿ ನಷ್ಟದಲ್ಲಿ ಹಾಲು ಮಾರಾಟ ಮಾಡುವುದು ಸಾಧ್ಯವೇ? ಈ ವಸ್ತುಸ್ಥಿತಿಯನ್ನು ಸರ್ಕಾರದ ಗಮನಕ್ಕೆ ತರುತ್ತೇನೆ ಎಂದು ಹೇಳಿದರು.