ಗದಗ: ಹಾಲು ಕೊಡುವ ಎಮ್ಮೆ, ಹಾಲು ಕೊಡದೇ ಇರುವ ಎಮ್ಮೆಯನ್ನು ಒಂದೇ ಸಾಲಿನಲ್ಲಿ ಕಟ್ಟಿ ಹಾಕಬಾರದು ಅಂತ ಮಾಜಿ ಸಚಿವ ಬಿ. ಶ್ರೀರಾಮುಲು ಹೈಕಮಾಂಡ್ ವಿರುದ್ಧ ಅಸಮಧಾನ ಹೊರಹಾಕಿದ್ರು.
ನಗರದಲ್ಲಿ ಮಾತನಾಡಿದ ಅವರು ಬಿ.ವೈ ವಿಜಯೇಂದ್ರ ಹಾಗೂ ಕೇಂದ್ರ ಹೈಕಮಾಂಡ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹಾಲು ಕೊಡುವ ಎಮ್ಮೆ, ಹಾಲು ಕೊಡದೇ ಇರುವ ಎಮ್ಮೆಯನ್ನು ಒಂದೇ ಸಾಲಿನಲ್ಲಿ ಕಟ್ಟಿ ಹಾಕುವುದು ಸರಿಯಲ್ಲ. ಅದನ್ನು ಯಾರೂ ಒಪ್ಪುವುದೂ ಇಲ್ಲ. ಕೆಲಸ ಮಾಡುವರನ್ನು, ಹಾಗೂ ಕೆಲಸ ಮಾಡದಿರುವವರನ್ನು ಒಂದೇ ಸಾಲಿನಲ್ಲಿ ಕಟ್ಟಿ ಹಾಕುವ ಕೆಲಸವಾಗುತ್ತಿದೆ, ಅದು ಆಗಬಾರದು. ಪಕ್ಷದಲ್ಲಿ ಯಾರು ಎಷ್ಟೇ ದೊಡ್ಡವರಾಗಿದ್ದರೂ, ಹೈಕಮಾಂಡ್ ತಿದ್ದಿ ಬುದ್ದಿ ಹೇಳಬೇಕು. ಯಾರು ತಪ್ಪು ಮಾಡಿದ್ದಾರೆ ಅವರನ್ನು ಕಾರ್ಯಕರ್ತ ಎಂದು ಪರಿಗಣಿಸಿ ಮಾತನಾಡಬೇಕು. ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಗಟ್ಟಿಯಾದ ನಿರ್ಧಾರ, ಸೂಚನೆ, ಖಡಕ್ ಆದೇಶ ನೀಡುವಂತಹ ಕೆಲಸ ರಾಷ್ಟ್ರೀಯ ನಾಯಕರು ಮಾಡಬೇಕು ಎಂದು ಆಗ್ರಹಿಸಿದರು. ಯಾರು ಶ್ರಮ ಪಟ್ಟು ಪಕ್ಷಕ್ಕಾಗಿ ದುಡಿಯುತ್ತಾರೆ, ರಾಜ್ಯದಲ್ಲಿ ಯಾರು ಸಂಘಟನೆ ಮಾಡುತ್ತಾರೆ, ಶೇ. 7ರಿಂದ 8ರಷ್ಟು ಮತಗಳನ್ನು ವ್ಯತ್ಯಾಸ ಮಾಡುವಂತಹ ನಾಯಕರಿಗೆ ಗೌರವ ಕೊಡಬೇಕು ಎಂದು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಕುರಿತು ರಾಜ್ಯದ ಬಿಜೆಪಿ ನಾಯಕರು ತಮ್ಮ ತಮ್ಮ ಅಭಿಪ್ರಾಯ ತಿಳಿಸಲು ದೆಹಲಿಗೆ ತೆರಳಿದ್ದಾರೆ. ಬಹುಶಃ ಯಾವುದೇ ವಿಚಾರಗಳು, ಸಮಸ್ಯೆಗಳು ಪರಿಹಾರವಾಗಬೇಕೆಂದರೆ ಅದು ಹೈಕಮಾಂಡ್ ನಲ್ಲಿ ಮಾತ್ರ. ಯಾವುದೇ ಸಮಸ್ಯೆಗಳಿಗೆ ಮಾಧ್ಯಮದಲ್ಲಿ ಕಾಣಿಸಿಕೊಳ್ಳುವುದಕ್ಕಿಂತ ಹೈಕಮಾಂಡ್ ಜೊತೆ ಕುಳಿತುಕೊಂಡು ಏನು ಮಾಡಬೇಕು ಎಂಬುದನ್ನು ಯೋಚನೆ ಮಾಡಬೇಕಾಗುತ್ತದೆ. ಎಲ್ಲರೂ ಸೇರಿ ಹೈಕಮಾಂಡ್ ಜೊತೆಗೆ ಮಾತನಾಡಿಕೊಳ್ಳಲಿ. ಅದನ್ನು ಕಾರ್ಯರೂಪಕ್ಕೂ ತರಲಿ. ಶ್ರೀರಾಮುಲುಗೂ ಹೈಕಮಾಂಡ್ ಭೇಟಿಯಾಗುವ ಬುಲಾವ್ ಬಂದರೂ ಹೋಗದೆ ಇದ್ದು. ಹೈಕಮಾಂಡ್ ನಾಯಕರೊಂದಿಗೆ ಮುಂಚೆಯಿಂದಲೂ ನಾನು ಸಂಪರ್ಕ ಇಟ್ಟುಕೊಂಡಿದ್ದೇನೆ. ಆಗಾಗ ಹೈಕಮಾಂಡ್ ಗೆ ಭೇಟಿ ನೀಡಿ ಎಲ್ಲ ವಿಚಾರಗಳನ್ನು ಹೇಳಿಕೊಂಡು ಬಂದಿದ್ದೇನೆ. ಸಧ್ಯ ವೈಯಕ್ತಿಕವಾಗಿ ಕೆಲಸ ಇದ್ದ ಕಾರಣ ಹೋಗಲು ಸಾಧ್ಯವಾಗಿಲ್ಲ. ಸಮಯ ಕೊಟ್ಟು ಹೋಗಬೇಕೆಂದಿಲ್ಲ, ಸಮಯ ಕೂಡಿ ಬಂದಿಲ್ಲ, ಆದ್ದರಿಂದ ಹೋಗಲು ಸಾಧ್ಯವಾಗಿಲ್ಲ ಎಂದು ಹೈಕಮಾಂಡ್ ಭೇಟಿ ಮಾಡದಿರುವ ಕುರಿತು ಸ್ಪಷ್ಟನೆ ನೀಡಿದರು.
ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಕೆಲ ನಾಯಕರು ಅಸಮಾಧಾನ ಹೊರಹಾಕುತ್ತಿರುವ ವಿಷಯವಾಗಿ ಪ್ರತಿಕ್ರಿಯಿಸಿದ ಅವರು, ಪ್ರತಿಯೊಬ್ಬರು ತಮ್ಮ ಮನಸ್ಸಿನ ಭಾವನೆಗಳನ್ನು ಹೇಳುವುದರಲ್ಲಿ ತಪ್ಪೇನಿಲ್ಲ. ಸಂಸದರಾದ ಸುಧಾಕರ, ರಮೇಶ ಜಾರಕಿಹೊಳಿ ಹಾಗೂ ಬಸನಗೌಡ ಪಾಟೀಲ ಯತ್ನಾಳ ಅವರು ತಮ್ಮಲ್ಲಿರುವ ನೋವುಗಳನ್ನು, ತಮ್ಮ ಅನಿಸಿಕೆಗಳನ್ನು ಹೇಳಿಕೊಂಡಿದ್ದಾರೆ. ಪಕ್ಷದ ಹಿತದೃಷ್ಟಿಯಿಂದ ಏನು ಮಾತನಾಡಬೇಕು ಎಂಬುದನ್ನು ಮಾತನಾಡುತ್ತಿದ್ದಾರೆ. ಇದರಲ್ಲಿ ಯಾವುದೇ ಸ್ವಾರ್ಥವಿಲ್ಲ ಎಂದರು. ಯಾರು ಏನೇನು ಆಗಬೇಕು ಎಂಬುದಾಗಿ ಚರ್ಚೆಗಳು ನಡೆಯುತ್ತಿವೆ. ಬೆಂಗಳೂರು ಭಾಗದ ಅಶ್ವಥ್ ನಾರಾಯಣ ಅವರು ತಾವೂ ಕೂಡ ರಾಜ್ಯಾಧ್ಯಕ್ಷರಾಗಬೇಕು ಎಂಬುದು ಅವರ ಮನಸ್ಸಿನಲ್ಲಿರಬಹುದು, ಬಾಗಲಕೋಟೆ, ವಿಜಯಪುರ, ಕಲಬುರಗಿ ಭಾಗದ ಬಸವರಾಜ ಪಾಟೀಲ ಯತ್ನಾಳ, ಬೆಳಗಾವಿ ಭಾಗದ ಕಿತ್ತೂರು ಕರ್ನಾಟಕ ಭಾಗದಿಂದ ರಮೇಶ ಜಾರಕಿಹೊಳಿ, ಕಾರವಾರ ಭಾಗದಲ್ಲಿ ಅನಂತಕುಮಾರ ಹೆಗಡೆ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಶ್ರೀರಾಮುಲು ಕೂಡ ರಾಜ್ಯಾಧ್ಯಕ್ಷರಾಗಬೇಕು ಎಂಬ ಆಸೆಗಳಿರಬಹುದು. ಇವೆಲ್ಲದಕ್ಕೂ ಸೂತ್ರ, ಮೂಗುದಾನ ಎಂದರೆ ಅದು ಹೈಕಮಾಂಡ್ ಎಂದು ಹೇಳಿದರು. ಮತ್ತೊಮ್ಮೆ ನಾನೆ ರಾಜ್ಯಾಧ್ಯಕ್ಷನಾಗುತ್ತೆನೆ ಎಂಬ ಹೇಳಿಕೆ ನೀಡಿದ್ದ ವಿಜಯೇಂದ್ರಗೆ ಟಾಂಗ್ ನೀಡಿದ್ದಾರೆ. ಅವರಿಗೆ
ಹೈಕಮಾಂಡ್ ಸೂಚನೆ ಇದ್ದರೆ ಮತ್ತೊಮ್ಮೆ ಅವರೇ ರಾಜ್ಯಾಧ್ಯಕ್ಷ ಆಗಲಿ. ಇನ್ನೂ ನಾಲ್ಕೈದು ಬಾರಿ ಅವರೇ ಆಗಲಿ, ಯಾರು ಬೇಡ ಅಂತಾರೆ. ಹೈಕಮಾಂಡ್ ಹೇಳಿದರೆ ಮಾತನಾಡುವವರು ಯಾರು ಇದ್ದಾರೆ. ಹೈಕಮಾಂಡ್ ಹೇಳಿದರೆ ಎಲ್ಲರೂ ಕೇಳುವ ಸಂದರ್ಭದಲ್ಲಿ ನಾವೆಲ್ಲ ಮಾತನಾಡಿದರೆ ಏನಾಗುತ್ತದೆ. ರಾಷ್ಟ್ರೀಯ ನಾಯಕರ ಬಳಿ ಮೂಗುದಾನ ಇರುತ್ತದೆ. ಮೂಗುದಾನ ಯಾರಿಗೆ ಹಾಕಬೇಕು ಅವರಿಗೆ ಮೂಗುದಾನ ಹಾಕಿ ಗಟ್ಟಿಯಾದ ಕೆಲಸ ಮಾಡುತ್ತಾರೆ ಎಂದು ವ್ಯಂಗ್ಯವಾಡಿದರು.
ನಾನು ಪಕ್ಷ ಬಿಡುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ, ಪಕ್ಷ ಬಿಡುವ ಸಂದರ್ಭ ಬಂದಲ್ಲಿ ಪ್ರೆಸ್ ಮೀಟ್ ಮಾಡಿ ಎಲ್ಲರಿಗೂ ಹೇಳಿ ಹೋಗುತ್ತೇನೆ, ಮುಚ್ಚುಮರೆ ಮಾಡುವವನು ನಾನಲ್ಲ. ನಾನು ಪಕ್ಷ ಬಿಡಬೇಕು ಎಂದರೆ ಯಾರಿಗೆ ಏನು ಹೇಳಬೇಕಾಗಿಲ್ಲ. ನಾನು ಯಾರ ಮುಲಾಜಿಗೂ ಕೆಲಸ ಮಾಡುವುದಿಲ್ಲ. ಬಡವ, ಶ್ರಮಿಕ, ರೈತ, ಪಕ್ಷ ಕಟ್ಟಿ ಬೆಳೆಸಿದ ಕಾರ್ಯಕರ್ತನಿಗೆ ಗೌರವ ಕೊಡುತ್ತೇನೆ. ಪಕ್ಷ ಬಿಡುವ ಸಂದರ್ಭ ಬಂದಲ್ಲಿ ನನನ್ನು ಯಾರು ತಡೆಯುತ್ತಾರೆ. ಯಾರಿಂದ ತಡೆಯಲು ಸಾಧ್ಯವಿಲ್ಲ. ಇದು ಸರಿಯೋಗುತ್ತದೆ ಅಂದರೆ ಸರಿಹೋಗುತ್ತದೆ, ಸರಿಹೋಗುವುದಿಲ್ಲ ಎಂದರೆ ಸರಿಹೋಗುವುದಿಲ್ಲ ಎಂದು ನೇರವಾಗಿ ಹೇಳುತ್ತೇನೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ, ಶಿವನಗೌಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.