ಜಿಲ್ಲೆ

ಹಾಲು ಉತ್ಪಾದಕರು ಗುಂಪು ವಿಮೆಗೆ ಸೇರ್ಪಡೆಯಾಗಿ

ಪಾಂಡವಪುರ: ಪ್ರತಿಯೊಬ್ಬ ಹಾಲು ಉತ್ಪಾದಕರು ಕಡ್ಡಾಯವಾಗಿ ಗುಂಪು ವಿಮಾ ಯೋಜನೆಯ ವ್ಯಾಪ್ತಿಗೆ ಒಳಪಡಬೇಕು ಎಂದು ಮನ್‌ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ಸಲಹೆ ನೀಡಿದರು.


ಪಟ್ಟಣದ ಮನ್‌ಮುಲ್ ಉಪಕಚೇರಿಯಲ್ಲಿ ರೈತ ಕಲ್ಯಾಣ ಟ್ರಸ್ಟ್, ಗುಂಪು ವಿಮಾ ಯೋಜನೆಯ ಫಲಾನುಭವಿಗಳು ಹಾಗೂ ಮರಣ ಹೊಂದಿದ ರಾಸುಗಳ ಮಾಲೀಕರಿಗೆ 7.65 ಲಕ್ಷ ರೂ. ವಿಮೆ ಹಣದ ಚೆಕ್‌ಗಳನ್ನು ಸೋಮವಾರ ವಿತರಿಸಿ ಮಾತನಾಡಿದರು.


ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ವಿಮೆ ಚೆಕ್ ವಿತರಣಾ ಕಾರ್ಯಕ್ರಮ ತಡವಾಯಿತು. ರಾಸುಗಳ ವಿಮೆ ಹಣದ ಶೇ.75ರಷ್ಟನ್ನು ಒಕ್ಕೂಟ ಭರಿಸುತ್ತದೆ. ಉತ್ಪಾದಕರು ಶೇ.25ರಷ್ಟು ಭರಸಿದರೆ ರಾಸುಗಳು ಆಕಸ್ಮಿಕವಾಗಿ ಮರಣ ಹೊಂದಿದ ಸಮಯದಲ್ಲಿ ಸಹಾಯವಾಗುತ್ತದೆ. ಅದೇ ರೀತಿ ಉತ್ಪಾದಕರು ಮರಣ ಹೊಂದಿದರೆ ಗುಂಪು ವಿಮಾ ಯೋಜನೆಯಡಿ 50 ಸಾವಿರ ರೂ. ಹಣ ಸಿಗುತ್ತದೆ. ಇದು ಕಷ್ಟ ಕಾಲದಲ್ಲಿ ನೆರವಿಗೆ ಬರುತ್ತದೆ. ಹೀಗಾಗಿ ಪ್ರತಿಯೊಬ್ಬರು ವಿಮೆ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.


ಜಿಲ್ಲೆಯಲ್ಲಿ ಹಾಲಿನ ಉತ್ಪಾದನೆ ಹೆಚ್ಚಾಗಿರುವುದು ಸಂತಸದ ವಿಷಯ. ಒಕ್ಕೂಟ ಸಬ್ಸಿಡಿ ದರದಲ್ಲಿ ಅನೇಕ ಸವಲತ್ತುಗಳನ್ನು ನೀಡುತ್ತಿದ್ದು, ಇದರ ಉಪಯೋಗ ಪಡೆದುಕೊಂಡು ಉತ್ಪಾದಕರು ಗುಣಮಟ್ಟದ ಹಾಲು ಪೂರೈಸಬೇಕು. ಒಕ್ಕೂಟ ಮತ್ತು ಸಂಘ ಅಭಿವೃದ್ಧಿಯಾದರೆ ಯಾರಿಗೂ ನಷ್ಟವಿಲ್ಲ. ಸಂಘಗಳು ಜೀವಂತವಾಗಿ ನಡೆಯಲು ಗುಣಮಟ್ಟದ ಹಾಲು ಪೂರೈಕೆಯೇ ಮಾನದಂಡವಾಗಿದೆ. ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿದ ರೈತರಿಗೂ ಸಮಯಕ್ಕೆ ಸರಿಯಾಗಿ ಬಟವಾಡೆ ಸಿಗುವುದಿಲ್ಲ. ಆದರೆ, ಹಾಲು ಪೂರೈಸಿದ ಉತ್ಪಾದಕರಿಗೆ ವಾರಕ್ಕೊಮ್ಮೆ ಯಾವುದೇ ತೊಂದರೆಯಿಲ್ಲದೆ ಪೇಮೆಂಟ್ ಸಿಗುತ್ತದೆ ಎಂದರು.
ರೈತರು ರಾಸುಗಳ ಆರೋಗ್ಯ ಮತ್ತು ಮೇವಿನ ವಿಚಾರದಲ್ಲಿ ಬೇಜವಾಬ್ದಾರಿ ತೋರಬಾರದು. ಒಕ್ಕೂಟ ಮಾರಾಟ ಮಾಡುವ ಅಜ್ಮಲ್, ಮಿನರಲ್, ಗೋಧಾಶಕ್ತಿಯನ್ನು ನಿಯಮಿತವಾಗಿ ರಾಸುಗಳಿಗೆ ನೀಡುವುದರಿಂದ ಗುಣಮಟ್ಟದ ಹಾಲು ಸಿಗುತ್ತದೆ. ಗುಣಮಟ್ಟದ ಹಾಲು ಪೂರೈಕೆಯಾದರೆ ಸರ್ಕಾರ ನೀಡುವ ಸಬ್ಸಿಡಿ ಹಣ ವಾಪಸಾಗದೆ ಉತ್ಪಾಕರಿಗೆ ತಲುಪುತ್ತದೆ ಎಂದು ಹೇಳಿದರು.


ಮನ್‌ಮುಲ್ ಉಪನಿರ್ದೇಶಕ ಆರ್.ಪ್ರಸಾದ್ ಮಾತನಾಡಿ, ತಾಲೂಕಿನಲ್ಲಿ 15.5 ಸಾವಿರ ರಾಸುಗಳಿದ್ದು, ಈ ಪೈಕಿ ಕೇವಲ 8 ಸಾವಿರ ರಾಸುಗಳಿಗೆ ಮಾತ್ರ ವಿಮೆ ವ್ಯಾಪ್ತಿಗೆ ಒಳಪಟ್ಟಿದೆ. ಒಕ್ಕೂಟ ಅನೇಕ ಸವಲತ್ತುಗಳನ್ನು ನೀಡುತ್ತಿದೆ. ಆದರೆ, ಈ ಸವಲತುಗಳು ಫಲಾನುಭವಿಗಳಿಗೆ ಸಿಗುತ್ತಿಲ್ಲ. ಪ್ರಚಾರ ಮತ್ತು ಮಾಹಿತಿ ಕೊರತೆಯೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಡೇರಿ ಕಾರ್ಯದರ್ಶಿಗಳು ದೊರೆಯುವ ಸವಲತ್ತುಗಳ ಬಗ್ಗೆ ಸಂಘದ ನೊಟೀಸ್ ಬೋರ್ಡ್‌ನಲ್ಲಿ ಪ್ರಚಾರ ಮಾಡಬೇಕು ಎಂದು ತಿಳಿಸಿದರು.


ಈ ವೇಳೆ ಮನ್‌ಮುಲ್ ಮಾರ್ಗ ವಿಸ್ತರಣಾಧಿಕಾರಿಗಳಾದ ಉಷಾ, ಜಗದೀಶ್, ಮಂಜುನಾಥ್ ಇತರರು ಇದ್ದರು.