ಹಾಸನ: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಾಲು ಉತ್ಪಾದಕರಿಗೆ 7ರೂ ಸಬ್ಸಿಡಿ ನೀಡುತ್ತಿದ್ದೇವೆ ಎಂದು ಸುಳ್ಳು ಹೇಳಿ ಜನರಿಗೆ ವಂಚಿಸುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಗೆ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬರುವ ಮೊದಲು ಜನರಿಗೆ ಸುಳ್ಳು ಭರವಸೆಗಳನ್ನು ನೀಡಿದ್ದರು.ಅವರು ಅಧಿಕಾರಕ್ಕೆ ಬಂದ ದಿನದಿಂದ ಹೈನುಗಾರಿಕೆಗೆ 7ರೂ ಸಬ್ಸಿಡಿಯನ್ನ ನೀಡದೆ ಕೆವಲ ಸುಳ್ಳು ಹೇಳಿಕೊಂಡು ರಾಜ್ಯದ ಜನರ ಕಿವಿಯ ಮೇಲೆ ಬಣ್ಣ ಬಣ್ಣದ ಹೂಗಳನ್ನು ಇಟ್ಟು ನಂಬಿಸುತ್ತಿದ್ದಾರೆ. ಸರ್ಕಾರದಿಂದ ಇನ್ನೂ 716 ಕೋಟಿ ಸಬ್ಸಿಡಿ ಹಣ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಎಂ.ಸಿದ್ದರಾಮಯ್ಯ ಅವರು ನುಡಿದಂತೆ ನಡೆದಿದ್ದೇವೆ ಎಂದು ಸರ್ಕಾರದ ಸುಳ್ಳು ಭರವಸೆಗಳ ಮೂಲಕ ಜಾಹೀರಾತುಗಳನ್ನು ನೀಡಿ ಜನರಿಗೆ ಮೋಸ ಮಾಡುತ್ತಿದ್ದಾರೆ. ಹಾಲು ಉತ್ಪಾದಕರಿಗೆ ಸಬ್ಸಿಡಿ ದರ ಹೆಚ್ಚಳ ಮಾಡಿದ್ದೇವೆ. ಎಮ್ಮೆ ಹಸು ಖರೀದಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಿದ್ದೇವೆ ಎಂದು ಜನರನ್ನ ವಂಚಿಸುತ್ತಿದ್ದಾರೆ. ಇವರಿಗೆ ಜನತೆ ಮತ್ತು ಜನವಾರುಗಳ ಶಾಪ ಖಂಡಿತವಾಗಿಯೂ ತಟ್ಟುತ್ತದೆ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಬರಗಾಲದಿಂದ ರೈತರು ಸಂಕಷ್ಟದಲ್ಲಿದ್ದಾರೆ. ಸಿದ್ದರಾಮಯ್ಯ ಅವರು ತಾವು ನುಡಿದಂತೆ ಸಬ್ಸಿಡಿ ಹಣವನ್ನು ಶೀಘ್ರದಲ್ಲಿ ಬಿಡುಗಡೆ ಮಾಡಬೇಕು ಮತ್ತು ಹೈನುಗಾರಿಕೆಯನ್ನು ನಂಬಿಕೊಂಡು ಜೀವನ ಮಾಡುತ್ತಿರುವ ಜನರ ಸಂಕಷ್ಟವನ್ನು ನಿವಾರಿಸಬೇಕು ಎಂದು ಒತ್ತಾಯಿಸಿದರು.
ಈ ಹಿಂದೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಹಾಲಿಗೆ ಪ್ರೋತ್ಸಾಹ ಧನವನ್ನು ನೀಡಿದ್ದರ ಪರಿಣಾಮ ನಿತ್ಯ80ರಿಂದ85ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿತ್ತು. ಆದರೆ ಈ ಸರ್ಕಾರ ರೈತರಿಗೆ ನೀಡಬೇಕಾಗಿರುವ ಪ್ರೋತ್ಸಾಹಧನವನ್ನ ನೀಡದೆ ಇರುವುದರಿಂದ ರಾಜ್ಯದಲ್ಲಿ ಸುಮಾರು 10 ಲಕ್ಷ ಲೀಟರ್ ಹಾಲು ಸಂಗ್ರಹಣೆ ಕಡಿಮೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ಬಡವರ ಪರ ಸರ್ಕಾರ ಎಂದು ಹೇಳುವ ಸಿಎಂ ಸಿದ್ದರಾಮಯ್ಯ ಅವರು ನಿಜವಾಗಿಯೂ ಹಾಲು ಉತ್ಪಾದಕರು ಮತ್ತು ರೈತರ ಬಗ್ಗೆ ಕಾಳಜಿ ಇದ್ದರೆ ತಕ್ಷಣವೇ ಪ್ರೋತ್ಸಾಹ ಧನವನ್ನ ಬಿಡುಗಡೆ ಮಾಡಬೇಕು. ತಾವು ಅಧಿಕಾರಕ್ಕೆ ಬಂದ ದಿನದಿಂದಲೂ ಕೂಡ ಯಾವುದೇ ರೀತಿಯ ಪ್ರೋತ್ಸಾಹ ಧನವನ್ನು ನೀಡಿಲ್ಲ ಬಾಕಿ ಉಳಿಸಿಕೊಂಡಿರುವ ಹಣವನ್ನು ಶೀಘ್ರದಲ್ಲೇ ಬಿಡುಗಡೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು
ತಿಭಟನೆಯಲ್ಲಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ವೇಣುಗೋಪಾಲ್,ನಗರಸಭೆ ಮಾಜಿ ಅಧ್ಯಕ್ಷ ಆರ್. ಮೋಹನ್, ಬಿಜೆಪಿ ಮುಖಂಡರಾದ ನಾರಾಯಣಗೌಡ , ಕಿರಣ್, ಶಂಕರ್, ರಾಕೇಶ್, ಶ್ರೀಕಾಂತ್, ದಿನೇಶ್ ಇತರರು ಇದ್ದರು.