ಚಿಕ್ಕಬಳ್ಳಾಪುರ : ಹಾಲು ಉತ್ಪಾದಕರು ಕಿಸಾನ್ ಕ್ರೆಡಿಟ್ ಯೋಜನೆಗೆ ಹೆಸರು ನೋಂದಾಯಿಸಿಕೊಂಡು, ಸವಲತ್ತು ಸದ್ವಿನಿಯೋಗ ಮಾಡಿಕೊಳ್ಳುವಂತೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ನಿರ್ದೇಶಕ ಎನ್.ಸಿ.ವೆಂಕಟೇಶ್ ಸಲಹೆ ನೀಡಿದರು.
ತಾಲೂಕಿನ ನಂದಿ ಕ್ರಾಸ್ ಬಳಿಯ ಮೆಗಾ ಡೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಪ್ರತಿಯೊಬ್ಬರಿಗೂ ಸರ್ಕಾರದ ಯೋಜನೆಗಳ ಬಗ್ಗೆ ಸಮರ್ಪಕ ಮಾಹಿತಿ ತಲುಪಬೇಕು. ಆಗ ಮಾತ್ರ ಅರ್ಹರು ಸವಲತ್ತುಗಳನ್ನು ಪಡೆದು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಉದ್ದೇಶಿತ ಗುರಿಯಲ್ಲೂ ಉತ್ತಮ ಸಾಧನೆಯಾಗುತ್ತದೆ ಎಂದರು.
ಲಾಕ್‌ಡೌನ್‌ನಿಂದಾಗಿ ಬಹುತೇಕ ವಲಯಗಳು ನಷ್ಟದಲ್ಲಿವೆ. ಇದರಲ್ಲಿ ರೈತರು ಹೊರತಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಿದ್ದು, ಕಿಸಾನ್ ಕ್ರೆಡಿಟ್ ಯೋಜನೆಯ ಸೌಲಭ್ಯವನ್ನು ಹಾಲು ಉತ್ಪಾದಕರಿಗೂ ಒದಗಿಸುತ್ತಿದೆ ಎಂದರು.ಸೌಲಭ್ಯಕ್ಕಾಗಿ ಲಾನುಭವಿಗಳು ಸೂಕ್ತ ದಾಖಲೆಗಳನ್ನು ಒದಗಿಸಬೇಕು. ತಾಂತ್ರಿಕ ಸಮಸ್ಯೆ ಕಂಡು ಬಂದಲ್ಲಿ ತಕ್ಷಣ ಬಗೆಹರಿಸಿಕೊಳ್ಳಬೇಕು. ಪಡೆದ ಸಾಲವನ್ನು ಸಕಾಲಕ್ಕೆ ಮರು ಪಾವತಿಸಬೇಕು ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ಬಸವರಾಜ್ ತಿಳಿಸಿದರು.ಕೋಚಿಮುಲ್ ಶಿಬಿರ ಕಚೇರಿ ವ್ಯವಸ್ಥಾಪಕ ಎನ್.ಪಾಪೇಗೌಡ, ವಿಶ್ವೇಶ್ವರಯ್ಯ ಎಂಪಿಸಿಎಸ್ ನೌಕರರ ಸಂಘದ ಅಧ್ಯಕ್ಷ ಎಂ.ರಾಮಕೃಷ್ಣರೆಡ್ಡಿ, ಕಾರ್ಯನಿರ್ವಹಣಾಧಿಕಾರಿ ಎನ್.ಪಾಪಣ್ಣ ಇತರರಿದ್ದರು.
ಬಡ್ಡಿ ನೆರವಿನೊಂದಿಗೆ ಸಾಲ : ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರಿಗೆ ಕಿಸಾನ್ ಕ್ರೆಡಿಟ್ ಯೋಜನೆಯ ಮೂಲಕ ಸಾಲ ನೀಡಲಾಗುತ್ತದೆ. ಈಗಾಗಲೇ ಕಾರ್ಡ್ ಹೊಂದಿರುವವರಿಗೆ 3 ಲಕ್ಷ ರೂ. ಸಾಲ ನೀಡಲಾಗುತ್ತದೆ. ಮರುಪಾವತಿ ಅವಧಿ ಒಂದು ವರ್ಷ. ಇದರ ಬಡ್ಡಿಗೆ ಕೇಂದ್ರ ಸರ್ಕಾರವು ಶೇ.2 ಸಹಾಯಧನ ನೀಡುತ್ತದೆ. ಸಕಾಲದಲ್ಲಿ ಸಾಲ ಮರು ಪಾವತಿಸಿದಲ್ಲಿ ಹೆಚ್ಚುವರಿಯಾಗಿ ಶೇ.3 ರ ಪ್ರೋತ್ಸಾಹಧನ ಸಿಗುತ್ತದೆ. ಹಾಲು ಉತ್ಪಾದಕರು ಆಯಾ ಶಿಬಿರ ಕಚೇರಿಯ ಮೂಲಕ ಅರ್ಜಿ ಸಲ್ಲಿಸಿ, ಕಾರ್ಡ್ ಪಡೆಯಬಹುದು ಎಂದು ಕೋಚಿಮುಲ್ ತಿಳಿಸಿದೆ.