ಸರಗೂರು: ಹಾಲು ಉತ್ಪಾದಕರ ಸಂಘವು ಗ್ರಾಮದ ಸಾರ್ವಜನಿಕ ಆಸ್ತಿಯಾಗಿದೆ ಎಂದು ಹಾದನೂರು ಗ್ರಾಪಂ ಸದಸ್ಯ ಯಶವಂತಪುರ ಶಿವಲಿಂಗಯ್ಯ ತಿಳಿಸಿದರು.
ತಾಲೂಕಿನ ಹಾದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಶವಂತಪುರ ಗ್ರಾಮದಲ್ಲಿ ನೂತನ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘವನ್ನು ಶುಕ್ರವಾರ ಸಂಘದ ಸದಸ್ಯರು ಹಾಗೂ ಮುಖಂಡರು ಷೇರುದಾರರಿಂದ ಹಾಲು ಖರೀದಿ ಮಾಡಿ ಸಂಗ್ರಹಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಮಳೆಯನ್ನೇ ನಂಬಿಕೊಂಡು ವ್ಯವಸಾಯ ಮಾಡುವವರ ಪರಿಸ್ಥಿತಿ ಕಷ್ಟಕರವಾಗಿದೆ. ಈ ಸಂದರ್ಭದಲ್ಲಿ ಹೈನುವಾರಿಕೆ ನೆರವಾಗಲಿದೆ. ಹೈನುಗಾರಿಕೆಯು ಬಹಳ ದೊಡ್ಡ ಉದ್ಯಮವಾಗಿ ಬೆಳೆದು ಲಕ್ಷಾಂತರ ಜನರಿಗೆ ಉದ್ಯೋಗವನ್ನು ಕಲ್ಪಿಸಿದೆ. ಹೈನುಗಾರಿಕೆಯಿಂದ ಆದಾಯ ಕಾಣಬಹುದಾಗಿದೆ. ಈ ಅವಕಾಶ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಹಾಲು ಉತ್ಪಾದಕರ ಸಂಘದ ಮೂಲಕ ಆರ್ಥಿಕವಾಗಿ ಸಬಲರಾಗಲು ಸಾಕಷ್ಟು ಅವಕಾಶಗಳಿವೆ. ಇದರ ಬಲವರ್ಧನೆ ಗ್ರಾಮದ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಎಲ್ಲ ಷೇರುದಾರರನ್ನು ವಿಶ್ವಾಸಕ್ಕೆ ಪಡೆದು ಡೈರಿ ಲಾಭದಾಯಕವಾಗಲು ಶ್ರಮಿಸಬೇಕು. ಹಾಲಿನ ಉತ್ಪಾದನೆಯನ್ನು ಹೆಚ್ಚಿಸಬೇಕು. ಇದರಿಂದ ಇಲ್ಲಿನ ಸವಲತ್ತುಗಳನ್ನು ಎಲ್ಲ ಫಲಾನುಭವಿಗಳು ಪಡೆದುಕೊಳ್ಳುವಂತಾಗಬೇಕು ಎಂದರು.
ಹಸುಗಳ ಆರೋಗ್ಯವನ್ನು ಉತ್ತಮಪಡಿಸಿಕೊಂಡು ತಾವೆಲ್ಲರೂ ಗುಣಮಟ್ಟ ಹಾಲನ್ನು ಡೇರಿಗೆ ಮಾರಾಟ ಮಾಡಬೇಕು. ಆ ಮೂಲಕ ಉತ್ತಮ ಲಾಭ ಗಳಿಸಿ ಆರ್ಥಿಕವಾಗಿ ಸಬಲರಾಗುವಂತೆ ಸಲಹೆ ನೀಡಿದರು.
ಹಾಲು ಉತ್ಪಾದಕರ ಮಹಿಳಾ ಸಂಘದ ಅಧ್ಯಕ್ಷೆ ಲಕ್ಷಮ್ಮ ಮಾತನಾಡಿ, ಸಂಘದ ಸದಸ್ಯರಿಗೆ ಬರುವ ಸೌಲಭ್ಯವನ್ನು ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಾನೆ. ಸರ್ಕಾರವು ಹಾಲು ಉತ್ಪಾದಕರಿಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅದನ್ನು ರೈತರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಕಾರ್ಯದರ್ಶಿ ಪ್ರೀತಿ, ಉಪಾಧ್ಯಕ್ಷ ಗಂಗಮ್ಮ, ಬಡಗಲಪುರ ಬಿ.ಎಂ.ಸಿ ಹಾಲು ಪರೀಕ್ಷಕ ಅಂಕಮೂರ್ತಿ, ಕೃತಕ ಗರ್ಭಧಾರಣಾ ಕಾರ್ಯಕರ್ತರಾದ ಚಂದ್ರಪ್ಪ, ನಿರ್ದೇಶಕರಾದ, ಶಾಂತಮ್ಮ, ಚಿಕ್ಕತಾಯಮ್ಮ, ನಾಗಮಣಿ, ಲಕ್ಷ್ಮಮ್ಮ, ಕೆಂಪಮ್ಮ, ಲಕ್ಷ್ಮಮ್ಮ, ನಾಗಮಣಿ, ನಾಗೇಶಪ್ಪ, ಕೂಸಣ್ಣ, ಪ್ರಭಾಕರ್, ವೈ.ಎಂ.ಮಲ್ಲೇಶ್, ಸಿದ್ದಯ್ಯ, ತಗಡೂರಯ್ಯ, ಗಣೇಶ್, ನಾಗರಾಜು, ರಾಜೇಶ್, ಪ್ರಸಾದ್, ಮಂಜುನಾಥ್, ನಿಂಗಯ್ಯ, ಅಭಿ. ಜೀವನ್ ಇತರರು ಹಾಜರಿದ್ದರು.