ಜಿಲ್ಲೆ

ಹಾಲು ಉತ್ಪಾದಕ ಸದಸ್ಯರಿಗೆ ಲಾಭಾಂಶ ಹಂಚಿಕೆ ಗುರಿ

ಮಳವಳ್ಳಿ: ಹಾಲು ಉತ್ಪಾದಕರ ಸಹಕಾರ ಸಂಘದ ವಹಿವಾಟಿನಲ್ಲಿ ಬರುವ ಆದಾಯದಿಂದಲೇ ವಿವಿಧ ಉದ್ಯಮ ಪ್ರಾರಂಭಿಸುವ ಮೂಲಕ ಉತ್ಪಾದಕ ಸದಸ್ಯರಿಗೆ ಲಾಭಾಂಶ ಹಂಚಿಕೆ ಮಾಡುವ ಗುರಿ ಹೊಂದಲಾಗಿದೆ ಎಂದು ತಳಗವಾದಿ ಡೇರಿ ಅಧ್ಯಕ್ಷ ಹನುಮಂತು ತಿಳಿಸಿದರು.

ತಾಲೂಕಿನ ತಳಗವಾದಿ ಗ್ರಾಮದ ಡೇರಿ ಆಡಳಿತ ಮಂಡಳಿಗೆ ಭಾನುವಾರ ಹಮ್ಮಿಕೊಂಡಿದ್ದ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಪ್ರಕ್ರಿಯೆಯಲ್ಲಿ ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ನಂತರ ಮಾತನಾಡಿದ ಅವರು, ಸಂಘದ ಎಲ್ಲ ಹಾಲು ಉತ್ಪಾದಕ ಸದಸ್ಯರು ಹಾಗೂ ಚುನಾಯಿತ ನಿರ್ದೇಶಕರ ಸಹಕಾರದಿಂದ ಅಧ್ಯಕ್ಷನಾಗಿ ನಾನು, ಉಪಾಧ್ಯಕ್ಷರಾಗಿ ರಾಜಣ್ಣ ಅವಿರೋಧ ಆಯ್ಕೆಯಾಗಿದ್ದೇವೆ ಎಂದರು.

ನಮ್ಮ ಮೇಲೆ ವಿಶ್ವಾಸವಿಟ್ಟು ಕೊಟ್ಟಿರುವ ಅಧಿಕಾರವನ್ನು ಸದ್ಬಳಕೆ ಮಾಡಿಕೊಂಡು ಸಂಘದ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು. ಕೆಲವು ವರ್ಷಗಳ ಹಿಂದೆ ಕೇವಲ 2500 ರೂ. ಆದಾಯದಲ್ಲಿದ್ದ ಸಂಘದ ವಹಿವಾಟನ್ನು ಉತ್ಪಾದಕರು ಉತ್ತಮ ಹಾಲು ಪೂರೈಕೆಯ ಸಹಕಾರದಿಂದ ಷೇರುದಾರರಿಗೆ ಲಾಭಾಂಶ ಹಂಚಿಕೆ ಮಾಡುವುದರ ಜತೆಗೆ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಸಂಘದ ನೂತನ ಕಟ್ಟಡ ನಿರ್ಮಾಣ ಮಾಡಲಾಗಿದೆ. ಪ್ರಸ್ತುತ 1.40 ಕೋಟಿ ರೂ.ಲಾಭದಲ್ಲಿದ್ದು, ಈ ಹಣದಲ್ಲಿ ನಿವೇಶನ ಖರೀದಿಸಿ ವಾಣಿಜ್ಯ ಮಳಿಗೆ ನಿರ್ಮಾಣ ಮತ್ತು ಪಶು ಆಹಾರ ಉತ್ಪಾದನ ಕಾರ್ಖಾನೆ ಹಾಗೂ ಶುದ್ಧಿಕರಿಸಿದ ನೀರಿನ ಬಾಟಲ್ ಪ್ಯಾಕಿಂಗ್ ಕೇಂದ್ರ ಪ್ರಾರಂಭಿಸುವ ಗುರಿಯನ್ನು ಹೊಂದಲಾಗಿದೆ. ಈ ಮೂಲಕ ಎಲ್ಲ ಉದ್ಯಮಗಳಿಂದ ಬರುವ ಹಣದಲ್ಲಿ ಶೇ.40ರಷ್ಟು ಲಾಭಾಂಶವನ್ನು ಹಾಲು ಉತ್ಪಾದಕರಿಗೆ ಹಂಚಿಕೆ ಮಾಡಲಾಗುವುದೆಂದು ಭರವಸೆ ನೀಡಿದರು.

ಈಗಾಗಲೇ ಗ್ರಾಮದಲ್ಲಿ ಮನ್‌ಮುಲ್ ವತಿಯಿಂದ ತೆರೆಯಲಾಗಿದ್ದ ನಂದಿನ ಹಾಲಿನ ಉತ್ಪನ್ನಗಳ ಮಾರಾಟ ಕೇಂದ್ರವನ್ನು ಅನಿವಾರ್ಯ ಕಾರಣಗಳಿಂದ ಮುಚ್ಚಲಾಗಿದ್ದು, ಶೀಘ್ರವಾಗಿ ಪುನರಾರಂಭಿಸಲು ಕ್ರಮ ವಹಿಸಲಾಗುವುದೆಂದು ತಿಳಿಸಿದರು.

ಅವಿರೋಧವಾಗಿ ಆಯ್ಕೆಯಾದ ಅಧ್ಯಕ್ಷ ಹನುಮಂತು, ಉಪಾಧ್ಯಕ್ಷ ರಾಜಣ್ಣ ಅವರನ್ನು ಸಂಘದ ವತಿಯಿಂದ ಅಭಿನಂದಿಸಲಾಯಿತು. ನಿರ್ದೇಶಕರಾದ ಟಿ.ಎಸ್.ಚಂದ್ರು, ಟಿ.ಸಿ.ಸುರೇಶ, ಲಿಂಗಯ್ಯ, ಹನುಮಂತು, ಬಸವಯ್ಯ, ಸುಕನ್ಯಾ, ಜಯಮ್ಮ, ಸಿ.ಎಸ್.ಶ್ವೇತಾ, ಸಂಘದ ಕಾರ್ಯದರ್ಶಿ ಲಿಂಗರಾಜು, ಮುಖಂಡರಾದ ರೈತ ಸಂಘದ ಚೌಡಯ್ಯ, ಪಾಪಣ್ಣ, ಟಿ.ಎಲ್.ಮಹೇಶ್, ಟಿ.ಬಿ.ಮಹೇಶ್, ಪಂಚಲಿಂಗಯ್ಯ ಮತ್ತಿತರರು ಇದ್ದರು.