ಹಾಸನ: ಸೋಮನಹಳ್ಳಿ ಗ್ರಾಮದಲ್ಲಿ ಕೆಲವರು ರಾಜಕೀಯ ದುರುದ್ದೇಶದಿಂದ ಡೈರಿಯಲ್ಲಿ ಹಾಲು ತೆಗೆದುಕೊಳ್ಳುತ್ತಿಲ್ಲ ಎಂದು ಸುಳ್ಳು ಹೇಳಿಕೊಂಡು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿರುವುದು ಸತ್ಯಕ್ಕೆ ದೂರವಾದುದ್ದು ಎಂದು ಜಿಲ್ಲಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಸೋಮನಹಳ್ಳಿ ನಾಗರಾಜ್ ಹೇಳಿದರು.
ಲೋಕಸಭಾ ಚುನಾವಣೆ ಫಲಿತಾಂಶವಾದ ನಂತರ ಶ್ರೇಯಸ್ ಪಟೇಲ್ ಅವರು ಗೆಲುವು ಸಾಧಿಸಿದ ಮೇಲೆ ಸೋಮನಹಳ್ಳಿ ಗ್ರಾಮದಲ್ಲಿ ಕೆಲವರು ಹಾಲು ಉತ್ಪಾದಕರ ಸಹಕಾರ ಸಂಘದ ಮುಂಭಾಗ ಪಟಾಕಿ ಸಿಡಿಸಿದ್ದಾರೆ. ಈ ಸಂದರ್ಭದಲ್ಲಿ ಇಲ್ಲಿ ಸಾಕಷ್ಟು ಅನಾಹುತವಾಗುತ್ತದೆ ಮುಂದೆ ಹೋಗಿ ಎಂದು ಹೇಳಿದ್ದನ್ನೇ ನೆಪ ಮಾಡಿಕೊಂಡು ಡೈರಿಯಲ್ಲಿ ಹಾಲು ತೆಗೆದುಕೊಳ್ಳುತ್ತಿಲ್ಲ ಎಂದು ಸುಳ್ಳು ಹೇಳಿ ಜಿಲ್ಲಾಧಿಕಾರಿಗಳ ಕಚೇರಿ ಎಂದರು ಪ್ರತಿಭಟನೆ ನಡೆಸಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ನಾನು ಕಳೆದ 30 ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿದ್ದೇನೆ. ಗ್ರಾಮ ಪಂಚಾಯಿತಿ ಸದಸ್ಯನಿಂದ ಹಿಡಿದು ಈಗ ಜಿಲ್ಲಾ ಸಹಕಾರ ಬ್ಯಾಂಕಿನ ಅಧ್ಯಕ್ಷನಾಗಿ ಗ್ರಾಮದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಜಾತಿ, ಧರ್ಮಗಳನ್ನು ಲೆಕ್ಕಿಸದೆ ಎಲ್ಲಾ ವರ್ಗದವರಿಗೂ ಕೂಡ ಸಮಾನವಾಗಿ ಸಾಲ ಸೌಲಭ್ಯಗಳನ್ನು ದೊರಕಿಸಿಕೊಟ್ಟಿದ್ದೇನೆ. ಈಗ ವಿನಾಃಕಾರಣ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.
ಕೇವಲ ರಾಜಕೀಯ ದುರುದ್ದೇಶದಿಂದ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಪ್ರತಿಭಟನೆ ನಡೆಸಿದ ಕೆಲವರು ಈ ಹಿಂದೆ ಸೋಮನಹಳ್ಳಿ ಗ್ರಾಮದ ಡೈರಿಯಲ್ಲಿ ಅಧ್ಯಕ್ಷರಾಗಿ ಡೈರಿಯನ್ನು ಮುಳುಗಿಸಿದ್ದರು. ಅಲ್ಲದೆ ಖಾಸಗಿ ಡೈರಿಯನ್ನು ನಡೆಸಿ ಅಲ್ಲಿಯೂ ಕೂಡ ರೈತರಿಗೆ ತೊಂದರೆ ನೀಡಿದ್ದರು. ಈಗ ಡೈರಿ ಉತ್ತಮವಾಗಿ ನಡೆಯುತ್ತಿದೆ. ಇದನ್ನು ಸಹಿಸದೆ ಈ ರೀತಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸೋಮನಹಳ್ಳಿ ಗ್ರಾಮದ ಮುಖಂಡರಾದ ಪುಟ್ಟಸ್ವಾಮಿಗೌಡ, ರಂಗಸ್ವಾಮಿ, ಸಿದ್ದೇಗೌಡ, ನಿಂಗರಾಜ್ ಹಾಜರಿದ್ದರು.