ಜಿಲ್ಲೆ

ಹಾಲಿನ ಪುಡಿ ಅಕ್ರಮ ದಸ್ತಾನು, ಒಬ್ಬನ ಬಂಧನ

ಕೊಳ್ಳೇಗಾಲ: ಶಾಲಾ ಮಕ್ಕಳಿಗೆ ಉಚಿತವಾಗಿ ಸರ್ಕಾರ ನೀಡುತ್ತಿರುವ ಹಾಲಿನ ಪುಡಿಯನ್ನು ಚಿಲ್ಲರೆ ಅಂಗಡಿಯಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ವ್ಯಕ್ತಿಯನ್ನು ಶುಕ್ರವಾರ ಡಿಎಸ್‌ಪಿ ಅಪರಾಧ ಪತ್ತೆ ದಳ ಪೊಲೀಸರು ಬಂಧಿಸಿದ್ದಾರೆ.

ಪಟ್ಟಣದ ಈದ್ಗಾ ಮೊಹಲ್ಲಾ ನಿವಾಸಿ ನಯಾಜ್ ಪಾಷ ಅಲಿಯಾಸ್ ಪಿಂಟು (25) ಬಂಧಿತನಾಗಿದ್ದಾನೆ. ಈತನಿಂದ 91 ಕೆಜಿ ಹಾಲಿನ ಪುಡಿಯನ್ನು ಜಪ್ತಿ ಮಾಡಲಾಗಿದೆ.

ಪಟ್ಟಣದ ಗೀತಾ ಪ್ರೈಮರಿ ಶಾಲೆಯ ಪಕ್ಕದ ಈದ್ಗಾ ಮೊಹಲ್ಲಾ ಬೀದಿಯಲ್ಲಿ ಅಕ್ರಮವಾಗಿ ಚಿಲ್ಲರೆ ಅಂಗಡಿಯಲ್ಲಿ ಅಕ್ರಮವಾಗಿ ಹಾಲಿನ ಪೌಡರ್ ದಾಸ್ತಾನು ಮಾಡಲಾಗಿದೆ ಎಂಬ ಖಚಿತ ಮಾಹಿತಿ ಮೇರೆಗೆ ಡಿಎಸ್‌ಪಿ ಅಪರಾಧ ಪತ್ತೆ ದಳದ ಎಎಸ್‌ಐ ತಖಿವುಲ್ಲಾ, ಕಾನ್ಸ್‌ಟೇಬಲ್‌ಗಳಾದ ಬಿಳಿಗೌಡ, ಶಿವಕುಮಾರ್, ರವಿಕುಮಾರ್, ರಾಜೇಂದ್ರ, ವೀರೇಂದ್ರ ಅವರು ಉಪಹಾರ ಯೋಜನೆ ಪ್ರಥಮ ದರ್ಜೆ ಸಹಾಯಕ ನಂದೀಶ್ವರ್ ದಾಳಿ ನಡೆಸಿದ್ದಾರೆ. ಈ ವೇಳೆ ಚಿಲ್ಲರೆ ಅಂಗಡಿಯೊಳಗೆ ನಯಾಜ್ ಪಾಷ ಚೀಲಕ್ಕೆ ಏನೋ ತುಂಬುವುದು ಕಂಡಿದ್ದು, ಪೊಲೀಸರನ್ನು ನೋಡಿ ಓಡಲು ಪ್ರಯತ್ನಿಸಿದಾಗ ಆತನನ್ನು ವಶಕ್ಕೆ ಪಡೆದಿದ್ದಾರೆ.

ಅಂಗಡಿಯಲ್ಲಿ 2 ಚೀಲದಲ್ಲಿ 91 ಕೆಜಿ ಹಾಲಿನ ಪುಡಿ ದೊರೆತಿದೆ. ವಿಚಾರಣೆ ವೇಳೆ ಹನೂರು ಭಾಗದ ಕೆಲವರು ಹಾಲಿನ ಪುಡಿಯನ್ನು 100 ರಿಂದ 150 ರೂ.ವರೆಗೆ ನೀಡುತ್ತಿದ್ದರು. ನಾನು ಹೋಟೆಲ್ ಹಾಗೂ ಬೇಕರಿಗಳಿಗೆ ಹೆಚ್ಚಿನ ಬೆಲೆಗೆ ಸುಮಾರು 250 ರೂ.ಗಳಿಗೆ ಮಾರಾಟ ಮಾಡುತ್ತಿದೆ ಎಂದು ತಿಳಿಸಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮುಂದಿನ ಕ್ರಮ ಕೈಗೊಂಡಿದ್ದಾರೆ.