ಹಾಸನ: ರೈತರು ಮತ್ತು ಗ್ರಾಹಕರನ್ನ ಹಿತದೃಷ್ಟಿಯಲ್ಲಿಟ್ಟುಕೊಂಡು ಹಾಲಿನ ದರವನ್ನು ಹೆಚ್ಚಳ ಮಾಡುವದರ ಪ್ರಸ್ತಾವನೆ ಮಾಡಲಾಗಿದ್ದು,ಇದು ಸರ್ಕಾರದ ನಿರ್ಧಾರವಲ್ಲ, ನನ್ನ ಅಭಿಪ್ರಾಯವಾಗಿದೆ ಎಂದು ಸಹಕಾರ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ ಎನ್ ರಾಜಣ್ಣ ಸ್ಪಷ್ಟಪಡಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಲಿನ ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ರೈತರ ಉತ್ಪಾದನಾ ವೆಚ್ಚವು ಕೂಡ ಹೆಚ್ಚಾಗಿದೆ. ಆದ್ದರಿಂದ ಐದು ರೂಪಾಯಿ ಏರಿಕೆ ಮಾಡುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಇದರಿಂದ ಗ್ರಾಹಕರಿಗೆ ಯಾವುದೇ ಹೊರೆಯಾಗುವುದಿಲ್ಲ ಎಂದರು.
ಕೇವಲ ಗ್ರಾಹಕರನ್ನ ದೃಷ್ಟಿಕೋನದಲ್ಲಿಟ್ಟುಕೊಂಡು ಮಾತನಾಡುವುದು ಸರಿಯಲ್ಲ. ರೈತರು ಉತ್ಪಾದಿಸಿದರೆ ಗ್ರಾಹಕರು ಕೊಂಡುಕೊಳ್ಳುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಹೈನುಗಾರಿಕೆಯನ್ನ ಮಾಡಲಾಗದೆ ಹಲವರು ಬಿಟ್ಟು ಹೋಗುತ್ತಿದ್ದಾರೆ. ಆದ್ದರಿಂದ ರೈತರನ್ನ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಐದು ರೂಪಾಯಿ ಹಾಲಿನ ದರ ಹೆಚ್ಚಳ ಮಾಡುವ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಹೇಳಿದರು.
ಕೇವಲ ಗ್ರಾಹಕರ ಬಗ್ಗೆ ಮಾತನಾಡುತ್ತಾರೆ. ರೈತರ ಬಗ್ಗೆ ಯಾರೂ ಕೂಡ ಮಾತನಾಡುವುದಿಲ್ಲ, ರೈತರಿಗೆ ಹೆಚ್ಚಿನ ದರ ನೀಡಿದರೆ ಆರ್ಥಿಕವಾಗಿ ಸಬಲರಾಗುತ್ತಾರೆ ಇದರಿಂದ ಯಾರಿಗೂ ಕೂಡ ಹೊರೆಯಾಗುವುದಿಲ್ಲ. ಇಬ್ಬರನ್ನ ದೃಷ್ಟಿಕೋನದಲ್ಲಿಟ್ಟುಕೊಂಡು ಹಾಲಿನ ದರ ಹೆಚ್ಚಳ ಮಾಡುವ ಬಗ್ಗೆ ಪ್ರಸ್ತಾಪಿಸಲಾಗಿದೆ ಎಂದು ಎಂದರು.
ನಗರದಲ್ಲಿ ಕಳೆದ ಎರಡು ದಿನಗಳ ಹಿಂದೆ ಸುರಿದ ಬಾರಿ ಮಳೆಗೆ ಹಲವು ಮನೆಗಳಿಗೆ ನೀರು ನುಗ್ಗುತ್ತಿರುವ ಹಿನ್ನೆಲೆಯಲ್ಲಿ ರಾಜಕಾಲುವೆಯನ್ನ ಒತ್ತುವರಿ ಮಾಡಿಕೊಂಡಿದ್ದರಿಂದ ಈಗ ಮಳೆಯಿಂದ ಹಾನಿ ಆಗುತ್ತಿದೆ. ಶೀಘ್ರದಲ್ಲಿ ಒತ್ತುವರಿ ತೆರವುಮಾಡಲುಕ್ರಮ ಕೈಗೊಳ್ಳಬೇಕು ಎಂದು ಧಿಕಾರಿಗಳಿಗೆ ಟಾಕೀತು ಮಾಡಿದರು.
ಕೇವಲ ಮಳೆ ಬಂದ ಸಂದರ್ಭದಲ್ಲಿ ಪರಿಹಾರ ನೀಡುವುದು ಆನಂತರ ಸುಮ್ಮನಾಗುವುದು ಸರಿಯಲ್ಲ, ಇದಕ್ಕೆ ಶಾಶ್ವತ ಪರಿಹಾರವನ್ನು ಮಾಡಬೇಕು ಎಂದು ಹೇಳಿದರು. ಕೆಲವು ಪ್ರಕರಣಗಳು ನ್ಯಾಯಾಲಯದಲ್ಲಿ ಇರುವ ಜಾಗ ಬಿಟ್ಟು ಉಳಿದವು ಕಡೆ ಶೀಘ್ರದಲ್ಲೇ ತೆರವು ಕಾರ್ಯಾಚರಣೆ ಮಾಡಬೇಕು ಎಂದು ಹೇಳಿದರು.
ಕೇಂದ್ರ ಸರ್ಕಾರ ಅಕ್ಕಿ ವಿತರಣೆಯಲ್ಲಿ ರಾಜಕೀಯ ಷಡ್ಯಂತ್ರ ಮಾಡಲು ಯತ್ನಿಸುತ್ತಿದೆ ಇದು ಸರಿಯಾದ ಕ್ರಮವಲ್ಲ.ಇದಕ್ಕೆ ನಮ್ಮ ಸರ್ಕಾರ ಬಗ್ಗುವುದಿಲ್ಲ ಬೇರೆ ರಾಜ್ಯಗಳಿಂದ ಅಕ್ಕಿಯನ್ನು ತರಿಸಿಕೊಂಡು ಜನರಿಗೆ ಅಕ್ಕಿ ನೀಡುತ್ತೇವೆ ಎಂದು ಹೇಳಿದರು.
ಈ ಸಂಬಂಧ ಈಗಾಗಲೇ ಕೇಂದ್ರದ ಸಚಿವರೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ಆದರೆ ಈ ಹಿಂದೆ ಅಧಿಕಾರಿಗಳು ಅಕ್ಕಿಯನ್ನು ನೀಡುತ್ತೇವೆ ಎಂದು ಪತ್ರದಲ್ಲಿ ತಿಳಿಸಿದ್ದರು.ಅವರೇನು ಪುಕ್ಸಟ್ಟೆ ಅಕ್ಕಿ ಕೊಡಲ್ಲ. ನಾವು ಹಣ ಕೊಡುತ್ತೇವೆ ಎಂದರೂ ಹೀಗೆ ಸತಾಯಿಸುತ್ತಿರುವುದು ಖಂಡನಾರ್ಹ ಎಂದರು.
ಛತ್ತಿಸ್‌ಗಢ, ಪಂಜಾಬ್‌ನಿಂದ ಅಕ್ಕಿ ಖರೀದಿ ಮಾಡುತ್ತೇವೆ. ಈ ಸಂಬಂಧ ಅವರ ಜೊತೆಗೆ ಮಾತುಕತೆ ನಡೆದಿದೆ. ಅಕ್ಕಿಯನ್ನು ಕೊಟ್ಟೇ ತೀರುತ್ತೇವೆ ಎಂದು ಸಚಿವರು ಭರವಸೆ ನೀಡಿದರು. 10 ಕೆಜಿಯಲ್ಲಿ ಅಕ್ಕಿ ಜೊತೆಗೆ ಜೋಳ, ರಾಗಿ ಇರಲಿದೆ ಎಂದರು.
ಪೋಟೋ ಶೀರ್ಷಿಕೆ
23ಹೆಚ್‌ಎಸ್‌ಎನ್04
ಸಹಕಾರ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ ಎನ್ ರಾಜಣ್ಣ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು ಈ ಸಂದರ್ಭದಲ್ಲಿ ಶಾಸಕರಾದ ಕೆ.ಎಂ. ಶಿವಲಿಂಗೇಗೌಡ, ಎ ಮಂಜು , ಸ್ವರೂಪ್ ಸೇರಿದಂತೆ ಇತರರು ಇದ್ದರು.