ಚಾಮರಾಜನಗರ: ಚಾ.ನಗರ ಹಾಲು ಒಕ್ಕೂಟ (ಚಾಮುಲ್) ರೈತರಿಂದ ಖರೀದಿಸುವ ಹಾಲಿನ ದರವನ್ನು 1 ರೂ. ಕಡಿತಗೊಳಿಸಿರುವ ಕ್ರಮವನ್ನು ಖಂಡಿಸಿ ರಾಜ್ಯ ರೈತಸಂಘ ಮತ್ತು ಹಸಿರು ಸೇನೆ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ತಾಲೂಕಿನ ಕುದೇರು ಗ್ರಾಮದಲ್ಲಿರುವ ಚಾಮುಲ್ ಘಟಕದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಕೆಲಕಾಲ ಪ್ರತಿಭಟನೆ ನಡೆಸಿದರು. ಚಾಮುಲ್ ಆಡಳಿತ ಮಂಡಳಿ ವಿರುದ್ಧ ೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರಾಜ್ಯ ರೈತಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಬಸವಣ್ಣ ಮಾತನಾಡಿ, ಜಿಲ್ಲೆಯ ರೈತರು ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ತತ್ತರಿಸಿರುವ ಸಂದರ್ಭದಲ್ಲಿ ರೈತರಿಂದ ಖರೀದಿಸುವ ಹಾಲಿನ ದರವನ್ನು ಇಳಿಕೆ ಮಾಡುವ ಕ್ರಮ ಸರಿಯಲ್ಲ. ಆದರೇ ಚಾಮುಲ್ ಅಧಿಕಾರಿಗಳು ಹಾಲಿನ ದರವನ್ನು ಕಡಿತಗೊಳಿಸುವ ಮೂಲಕ ರೈತರ ಹೊಟ್ಟೆಯ ಮೇಲೆ ಹೊಡೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚಾಮುಲ್ ಘಟಕ ಹಾಲು ಉತ್ಪಾದಕರ ಜತೆ ಹಾಗೂ ರೈತರ ತೆ ಚರ್ಚೆ ಮಾಡದೇ ದರ ಕಡಿತಗೊಳಿಸಿದ್ದಾರೆ. ಬೇರೆ ಯಾವ ಘಟಕದಲ್ಲೂ ಈ ರೀತಿ ಮಾಡಿಲ್ಲ, ಚಾಮುಲ್ ಘಟಕದವರು ಮಾಡಿರುವುದು ಸರಿಯಲ್ಲ ಎಂದು ದೂರಿದರು. ಈ ಸಂದರ್ಭದಲ್ಲಿ ಚಾಮುಲ್ ಅಧ್ಯಕ್ಷ ನಾಗೇಂದ್ರ ಅವರು ಪ್ರತಿಭಟನಾ ಸ್ಥಳಕ್ಕೆ ತೆರಳಿ ಮಾತನಾಡಿ, ನ.16 ರಂದು ಈ ಸಂಬಂಧ ಸಭೆ ಕರೆದು ಚರ್ಚಿಸಿ, ಈ ನಿರ್ಧಾರನ್ನು ಹಿಂಪಡೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಕೈಬಿಡಲಾಯಿತು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಡಾ.ಗುರುಪ್ರಸಾದ್, ಹೆಗ್ಗೋಠಾರ ವಿಜಯ್‌ಕುಮಾರ್, ಮೇಲಾಜಿಪುರ ಕುಮಾರ್, ಹೊನ್ನೂರು ಮಹದೇವಸ್ವಾಮಿ, ಮಾಡ್ರಳ್ಳಿ ಮಹದೇವಪ್ಪ, ಹಾಲಹಳ್ಳಿ ಮಹೇಶ್, ಹೆಗ್ಗೋಡಿಪುರ ಮಹದೇವಸ್ವಾಮಿ, ಹಳ್ಳಿಕೆರೆಹುಂಡಿ ಶಿವಸ್ವಾಮಿ ಹಾಗೂ ಇತರರು ಭಾಗವಹಿಸಿದ್ದರು.