ಬೆಳಗಾವಿ: ಇಲ್ಲಿನ ಮಹಾನಗರ ಪಾಲಿಕೆಯ ವಿವಿಧ ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆಗೆ ಆಡಳಿತಾರೂ ಬಿಜೆಪಿ ತೀವ್ರ ಕಸರತ್ತು ನಡೆಸಿದ್ದು, ಹಾಲಿ, ಮಾಜಿ ಶಾಸಕರ ಬೆಂಬಲಿತರಿಗೆ ಆದ್ಯತೆ ಸಿಗಲಿದೆ.
ನಗರದ ಪಾಲಿಕೆ ಸಭಾಂಗಣದಲ್ಲಿ ಆ.12ರಂದು ನಗರ ಯೋಜನೆ ಮತ್ತು ನಗರ ಅಭಿವೃದ್ಧಿ ಸಮಿತಿ, ತೆರಿಗೆ ನಿರ್ಧಾರ, ಹಣಕಾಸು ಮತ್ತು ಅಫೀಲುಗಳ ಸಮಿತಿ, ಸಾರ್ವಜನಿಕ ಆರೋಗ್ಯ, ಶಿಕ್ಷಣ, ಸಾಮಾಜಿಕ ನ್ಯಾಯ ಸಮಿತಿ ಹಾಗೂ ಲೆಕ್ಕಪತ್ರ ಸಮಿತಿಗೆ ತಲಾ ಏಳು ಸದಸ್ಯರ ಆಯ್ಕೆಗೆ ಚುನಾವಣೆ ನಡೆಯಲಿದೆ. ಇದರಲ್ಲಿ ಆಡಳಿತಾರೂಢ ಬಿಜೆಪಿಯು ಸಮಿತಿಗೆ ತಲಾ 5 ಸದಸ್ಯರು ಹಾಗೂ ವಿರೋಧ ಪಕ್ಷ ಕಡೆಯಿಂದ ತಲಾ ಇಬ್ಬರಂತೆ 8 ಜನ ಸದಸ್ಯರನ್ನು ಆಯ್ಕೆ ಮಾಡಲಿದ್ದಾರೆ.
ಮೇಯರ್, ಉಪಮೇಯರ್ ಸ್ಥಾನದಿಂದ ವಂಚಿತರಾಗಿರುವ ಸದಸ್ಯರು ಸಮಿತಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಶಾಸಕರ ಮೇಲೆ ಒತ್ತಡ ಹಾಕಿದ್ದಾರೆ. ಕೆಲ ಸದಸ್ಯೆಯರು ಸಮಿತಿ ಅಧ್ಯಕ್ಷ ಸ್ಥಾನಕ್ಕಾಗಿ ಮುಖಂಡರನ್ನು ಒತ್ತಾಯಿಸಿದ್ದಾರೆ. ಇಲ್ಲಿಯವರೆಗೆ ಯಾವುದೇ ಸ್ಥಾನಮಾನ ಹೊಂದಿರದ ಸದಸ್ಯರನ್ನು ಆಯ್ಕೆ ಮಾಡಲು ಸ್ಥಳೀಯ ಮುಖಂಡರು, ಶಾಸಕರು ಮುಂದಾಗಿದ್ದರಿಂದ ಸ್ಪರ್ಧೆ ತೀವ್ರಗೊಂಡಿದೆ ಎನ್ನಲಾಗಿದೆ.
ಕಳೆದ ಬಾರಿ ಚುನಾವಣೆಯಲ್ಲಿ ಶಾಸಕ ಅಭಯ ಪಾಟೀಲ ಪ್ರತಿನಿಧಿಸುವ ದಕ್ಷಿಣ ವಿಧಾನಸಭಾ ಕ್ಷೇತ್ರದ ಮೂವರಿಗೆ ಅಧ್ಯಕ್ಷ ಸ್ಥಾನ, ಮಾಜಿ ಶಾಸಕ ಅನಿಲ ಬೆನಕೆ ಪ್ರತಿನಿಧಿಸುವ ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ಒಂದು ಅಧ್ಯಕ್ಷ ಸ್ಥಾನ ನೀಡಲಾಗಿದೆ. ಈ ಬಾರಿ ಮೇಯರ್, ಉಪಮೇಯರ್ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ನೀಡಿರುವುದರಿಂದ ನಾಲ್ಕು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಹಾಗೂ ಸದಸ್ಯ ಸ್ಥಾನಗಳಿಗೆ ಉತ್ತರ ವಿಧಾನಸಭಾ ಕ್ಷೇತ್ರದವರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಪ್ರತಿ ವಿಷಯದಲ್ಲಿ ದಕ್ಷಿಣಕ್ಕೆ ಸಿಂಹಪಾಲು ನೀಡಲಾಗುತ್ತಿದೆ.
ಈ ತಾರತಮ್ಯ ಸರಿಪಡಿಸುವಂತೆ ಪಕ್ಷದ ಶಾಸಕರು, ಸಂಸದರು ಹಾಗೂ ಮುಖಂಡರಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಸದಸ್ಯರು ತಿಳಿಸಿದ್ದಾರೆ.