ನಿಪ್ಪಾಣಿ: ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯು ಸೌತ್ ಇಂಡಿಯಾ ಶುಗರ್‌ಕೇನ್ ಆ್ಯಂಡ್ ಶುಗರ್ ಟೆಕ್ನೊಲೊಜಿಸ್ಟ್ ಅಸೋಸಿಯೇಷನ್ (ಸಿಸ್ಟಾ)ದಿಂದ `ಅತ್ಯುತ್ತಮ ಡಿಸ್ಟಿಲರಿ' ೨೦೨೪-೨೫ ಪ್ರಶಸ್ತಿ `ಗೋಲ್ಡ್ಅವಾರ್ಡ್' ಪಡೆದಿದೆ ಎಂದು ಕಾರ್ಖಾನೆ ಮಾರ್ಗದರ್ಶಕ, ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾಹಿತಿ ನೀಡಿದರು.
ಸ್ಥಳೀಯ ಕಾರ್ಖಾನೆಯ ಸಭಾಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೈತರು, ಸದಸ್ಯರು ಮತ್ತು ಕಾರ್ಮಿಕರಿಗಾಗಿ ವಿವಿಧ ಕಲ್ಯಾಣ ಯೋಜನೆ ಪ್ರಾರಂಭಿಸಲಾಗಿದೆ. ರೈತರಿಗೆ ವಿವಿಧ ರಿಯಾಯಿತಿ ನೀಡಿದೆ. ಕಾರ್ಖಾನೆಯ ಕಾರ್ಯಾಚರಣೆಗಳು ಕಬ್ಬು ನುರಿಸುವಿಕೆ ಮತ್ತು ಸಕ್ಕರೆ ಉತ್ಪಾದನೆಗೆ ಮಾತ್ರ ಸೀಮಿತವಾಗಿಲ್ಲ. ಉಪ-ಉತ್ಪನ್ನ ಕೂಡ ಉತ್ಪಾದಿಸಲಾಗುತ್ತಿದೆ. ಕಾರ್ಖಾನೆಯ ಎಥೆನಾಲ್ ಉತ್ಪಾದನೆ ಆರ್ಥಿಕತೆಗೆ ಪರಿಣಾಮಕಾರಿಯಾಗಿ ಉತ್ತೇಜನ ನೀಡುತ್ತಿದೆ. ಹತ್ತು ತಿಂಗಳಲ್ಲಿ ೩.೭೯ ಕೋಟಿ ರೂ.ಲೀಟರ್ ಎಥೆನಾಲ್ ಉತ್ಪಾದಿಸಲಾಗಿದೆ. ೩.೨೦ ಕೋಟಿ ಲೀಟರ್ ಮಾರಾಟ ಮಾಡಲಾಗಿದೆ. ಮುಂದಿನ ದಿನಗಳಲ್ಲಿ, ಎಥೆನಾಲ್ ಸಾಮರ್ಥ್ಯವನ್ನು ೧೫೦ ಕೆಎಲ್‌ಪಿಡಿಯಿಂದ ೨೦೦ ಕೆಎಲ್‌ಪಿಡಿಗೆ ಹೆಚ್ಚಿಸಲು ಪ್ರಯತ್ನಿಸುತ್ತಿದ್ದೇವೆ. ಮೆಕ್ಕೆಜೋಳ ಮತ್ತು ಅಕ್ಕಿಯಂತಹ ಧಾನ್ಯಗಳಿಂದ ಎಥೆನಾಲ್ ಉತ್ಪಾದಿಸಲಾಗುವುದು. ಇದಕ್ಕಾಗಿ ಸುಮಾರು ೬೦ ಕೋಟಿ ರೂ. ನಿಧಿ ಕಾಯ್ದಿರಿಸಲಾಗಿದೆ ಎಂದರು.
ಕಾರ್ಖಾನೆಯ ಎಲ್ಲ ಹಂತಗಳಲ್ಲಿನ ಕೆಲಸವನ್ನು ಗಮನಿಸಿದ ಸಿಸ್ಟಾ ಈ ಪ್ರಶಸ್ತಿ ಘೋಷಿಸಿದ್ದು, ಸೆ.೧೯ರಂದು ತಿರುಪತಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಣಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಕಾರ್ಖಾನೆಯ ನಿರ್ದೇಶಕರು ಮತ್ತು ಪದಾಧಿಕಾರಿಗಳು ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಭವಿಷ್ಯದಲ್ಲಿ ಕಾರ್ಖಾನೆಯಲ್ಲಿ ಇನ್ನಷ್ಟು ಉಪಉತ್ಪನ್ನ ಉತ್ಪಾದಿಸುವ ಮಹತ್ವಾಕಾಂಕ್ಷಿ ಯೋಜನೆ ರೂಪಿಸಿದೆ. ಅವುಗಳನ್ನು ಒಂದೊಂದರಂತೆ ಜಾರಿಗೆ ತರಲಾಗುವುದು ಎಂದರು.
ಕಾರ್ಖಾನೆಯ ಅಧ್ಯಕ್ಷ ಮಲಗೊಂಡಾ ಪಾಟೀಲ, ಉಪಾಧ್ಯಕ್ಷ ಪವನಕುಮಾರ ಪಾಟೀಲ, ನಿರ್ದೇಶಕ ವಿಶ್ವನಾಥ ಕಮತೆ, ಅಪ್ಪಾಸಾಹೇಬ ಜೊಲ್ಲೆ, ಸಮಿತ ಸಾಸನೆ, ಜಯವಂತ ಭಾಟಲೆ, ರಾಜು ಗುಂದೇಶಾ, ಸುನಿಲ ಪಾಟೀಲ, ವ್ಯವಸ್ಥಾಪಕ ನಿರ್ದೇಶಕ ಅಪ್ಪಾಸಾಹೇಬ ಶಿರಗಾವೆ, ಗಜಾನನ ರಾಮನಕಟ್ಟಿ ಇತರರು ಇದ್ದರು.