ಕುಶಾಲನಗರ; ಹಾರಂಗಿ ಅಣೆಕಟ್ಟೆ ಹಿನ್ನೀರಿನಲ್ಲಿ ತುಂಬಿರುವ ಹೂಳೆತ್ತುವ 130 ಕೋಟಿ ರೂ.ವೆಚ್ಚದ ಕಾಮಗಾರಿಗೆ ಡಿಸೆಂಬರ್ ತಿಂಗಳಿನಲ್ಲಿ ಚಾಲನೆ ನೀಡಲಾಗುವುದು ಎಂದು ಹಾರಂಗಿ ಜಲಾಶಯದ ಮುಖ್ಯ ಇಂಜಿನಿಯರ್ ಕೆ.ಕೆ.ರಘುಪತಿ ತಿಳಿಸಿದರು.
ಹಾರಂಗಿ ಜಲಾಶಯಕ್ಕೆ ಇತ್ತೀಚೆಗೆ ಭೇಟಿ ನೀಡಿ ಪರಿಶೀಲನೆ ಮಾಡಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 2018ರಲ್ಲಿ ಸಂಭವಿಸಿದ ಭೂಕುಸಿತದ ಪರಿಣಾಮ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಭಾರೀ ಪ್ರಮಾಣದ ಹೂಳು ಸಂಗ್ರಹವಾಗಿದ್ದು, ಇದರಿಂದ ಜಲಾಶಯದಲ್ಲಿ ಸಂಗ್ರಹವಾಗುವ ನೀರಿನ ಪ್ರಮಾಣ ಕುಸಿತವಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ 130 ಕೋಟಿ ರೂ. ವೆಚ್ಚದಲ್ಲಿ ಹೂಳೆತ್ತುವ ಯೋಜನೆ ರೂಪಿಸಲಾಗಿದೆ. ಈ ಸಂಬಂಧ ಸ್ಥಳ ಪರಿಶೀಲಿಸಿ ಕಾಮಗಾರಿಗಳ ನೀಲನಕ್ಷೆ ತಯಾರಿಸಿದ ನೀರಾವರಿ ಇಲಾಖೆಗೆ ವರದಿ ಸಲ್ಲಿಸಿ ಹಂತ ಹಂತವಾಗಿ ಕಾಮಗಾರಿ ಕೈಗೊಳ್ಳಲಾಗುವುದು ಎಂದರು.
ರಾಜ್ಯ ಮಟ್ಟದಲ್ಲಿ 130 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಮಹಾರಾಷ್ಟ್ರದ ಶಿವ ಕನ್‌ಸ್ಟ್ರಕ್ಷನ್ ಪ್ರೈ.ಲಿ. ಕಂಪನಿಯವರು ಟೆಂಡರ್ ಪಡೆದಿದ್ದು, ಮುಂದಿನ ತಿಂಗಳು ನೀರಿನ ಮಟ್ಟ ಕಡಿಮೆಯಾದ ನಂತರ ಹೂಳೆತ್ತುವಿಕೆ, ತಡೆಗೋಡೆ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ಕೇಂದ್ರ ತಂಡ ಪರಿಶೀಲನೆ: ಜಲಾಶಯದ ಹೂಳೆತ್ತುವುದರ ಜೊತೆಗೆ ತಡೆಗೋಡೆ, ಕಿರು ಸೇತುವೆಗಳು ನಿರ್ಮಾಣವಾಗಬೇಕಿದ್ದು ಈ ಹಿನ್ನೆಲೆಯಲ್ಲಿ ಬೆಳಗಾವಿಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೈಡ್ರಾಲಜಿ ವಿಜ್ಞಾನಿಗಳಾದ ಡಾ.ವೆಂಕಟೇಶ್, ಡಾ.ಅಭಿಲಾಶ್, ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪುಟ್ಟಸ್ವಾಮಿ, ಸಹಾಯಕ ಇಂಜಿನಿಯರ್ ಸಿದ್ದರಾಜು ಮತ್ತು ತಂಡ ಮಕ್ಕಂದೂರು, ಹಟ್ಟಿಹೊಳೆ ಸೇರಿದಂತೆ ವಿವಿಧ ಜಲಾನಯನ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದೆ.