ಮೈಸೂರು: ರೈತರ ಶ್ರಮದ ಬೆವರಿನಿಂದ ನಡೆಯುತ್ತಿರುವ ಹಾಪ್‌ಕಾಮ್ಸ್ ಮತ್ತು ನಂದಿನಿ ಆರೋಗ್ಯದ ಎರಡು ಕಣ್ಣುಗಳಂತಿದ್ದು, ರಾಜ್ಯದ ಜನರು ಇವುಗಳನ್ನು ಪೋಷಿಸುವ ಮೂಲಕ ರೈತರಿಗೆ ನೆರವಾಗಬೇಕು ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಕೋರಿದರು.
ನಗರದ ಕೆಆರ್‌ಎಸ್ ರಸ್ತೆಯಲ್ಲಿರುವ ಜಯದೇವ ಆಸ್ಪತ್ರೆ ಆವರಣದಲ್ಲಿ ನಿರ್ಮಿಸಿರುವ ಹಾಪ್‌ಕಾಮ್ಸ್ ನೂತನ ಮಳಿಗೆಯನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದ ದೊಡ್ಡ ಆಸ್ಪತ್ರೆ ಮತ್ತು ಕಾಲೇಜು ಆವರಣಗಳಲ್ಲಿ ಹಾಪ್‌ಕಾಮ್ಸ್ ಮತ್ತು ನಂದಿನಿ ಮಳಿಗೆಗಳನ್ನು ತೆರೆಯುವ ಮೂಲಕ ಪ್ರೋತ್ಸಾಹ ನೀಡಬೇಕು. ಈ ಮೂಲಕ ರೈತರಿಗೂ ನೆರವಾದಂತೆ ಅಗುತ್ತದೆ ಎಂದು ಹೇಳಿದರು.
ನಾವು ಹಣ್ಣು ತರಕಾರಿ ಧಾನ್ಯಗಳನ್ನು ಬೆಳೆಯಲು ಭೂಮಿಗೆ ಕೀಟನಾಶಕ, ರಾಸಾಯನಿಕ ಗೊಬ್ಬರ ಬಳಸುವುದರಿಂದ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಮ್ಮ ದೇಶದ ಕೆಲವು ಭಾಗದಲ್ಲಿ ಮಾಂಸದ ಮೇಲಿರುವ ಹೆಚ್ಚು ಪ್ರೀತಿ, ಹಣ್ಣು ತರಕಾರಿಗಳ ಮೇಲೆ ಇಲ್ಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅಧ್ಯಯನದ ಪ್ರಕಾರ ನಮ್ಮ ದೇಶದಲ್ಲಿ ಶೇ. 12ರಷ್ಟು ಜನರು ಮಾತ್ರ ತರಕಾರಿ, ಹಣ್ಣುಗಳನ್ನು ಸೇವಿಸುತ್ತಿದ್ದಾರೆ. ಇದರಿಂದ ಶೇ. 70 ಜನರಲ್ಲಿ ವಿಟಮಿನ್ ಕೊರತೆ ಎದುರಿಸುತ್ತಿದ್ದಾರೆ. ಗ್ರಾಮೀಣ ಭಾಗದ ಶೇ. 50ರಷ್ಟು ಜನರಲ್ಲಿ ರಕ್ತಹೀನತೆ ಇದೆ. ಕಡಿಮೆ ಪಾಲೀಶ್ ಮಾಡಿರುವ ಅಕ್ಕಿಯನ್ನು ತಿಂದರೆ ಅದರಲ್ಲಿ ಎಲ್ಲ್ಲ ವಿಟಿಮಿನ್ ಇರುತ್ತದೆ. ಆದ್ದರಿಂದ ಪ್ರತಿಯೊಬ್ಬರು ಹಣ್ಣು ಮತ್ತು ತರಕಾರಿಗಳನ್ನು ತಿನ್ನಬೇಕು. ಪ್ರತಿವರ್ಷಕೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಆರೋಗ್ಯವಾಗಿರಬೇಕೆಂದು ಸಲಹೆ ನೀಡಿದರು.
ಆದಿಚುಂಚನಗಿರಿ ಮೈಸೂರು ಶಾಖಾಮಠದ ಕಾರ್ಯದರ್ಶಿ ಶ್ರೀಸೋಮನಾಥ ಸ್ವಾಮಿಜಿ ಮಾತನಾಡಿ, ಮೈಸೂರಿಗೆ ಸಾಂಸ್ಕೃತಿಕವಾಗಿ ಅರಮನೆ ಎಷ್ಟು ಪ್ರಾಮುಖ್ಯವೋ ಜಯದೇವ ಆಸ್ಪತ್ರೆ ಕೂಡ ಜನರ ಆರೋಗ್ಯಕ್ಕೆ ಮುಖ್ಯವಾಗಿದೆ. ಮಂಜುನಾಥ್ ಅವರು ಆಸ್ಪತ್ರೆಯನ್ನು ಅದ್ಭುತವಾಗಿ ನಿರ್ಮಾಣ ಮಾಡಿ ಜನರಿಗೆ ಅನುಕೂಲಮಾಡಿ ಕೊಟ್ಟಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಯದೇವ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ, ಡಾ. ಕೆ.ಎಸ್. ಸದಾನಂದ, ವೈದ್ಯರಾದ ಡಾ. ಶಂಕರ್‌ಶಿರಾ, ಹಾಪ್‌ಕಾಮ್ಸ್‌ನ ಜಿಲ್ಲಾ ಅಧ್ಯಕ್ಷ ಮಿರ್ಲೆ ಅಣ್ಣೇಗೌಡ, ಉಪಾಧ್ಯಕ್ಷರಾದ ಸರ್ವೇಶ್, ಸೂರ್ಯಕುಮಾರ್, ನಿರ್ದೇಶಕರಾದಬೋರೇಗೌಡ, ಹೊಸಹುಂಡಿ ರಘು, ಮಹಾದೇವ, ಶ್ರೀನಿವಾಸ, ಚಂದ್ರೇಗೌಡ, ರಾಮೇಗೌಡ, ಪದ್ಮನಾಭ, ಸುಜಾತ, ನಳಿನಿ, ವ್ಯವಸ್ಥಾಪಕ ನಿರ್ದೇಶಕ ಚೇತನ್, ಪ್ರಧಾನ ವ್ಯವಸ್ಥಾಪಕ ಸುರೇಂದ್ರಕುಮಾರ್, ಜಯದೇವ ನರ್ಸಿಂಗ್ ಅಧೀಕ್ಷಕ ಹರೀಶ್‌ಕುಮಾರ್ ಇತರರು ಇದ್ದರು.