ಹೊಳೆನರಸೀಪುರ ಹಂಗರಹಳ್ಳಿ ಮೇಲ್ಸೇತುವೆಯಿಂದ ಸಿಮೆಂಟ್ ಬ್ಲಾಕ್‌ಗಳು ಕಳಚಿ ಬಿದ್ದಿರುವ ಭಾಗದ ದುರಸ್ತಿಗೆ ಮುಂದಾಗಿರುವುದು.  
ಜಿಲ್ಲೆ

ಹಾನಿಗೊಳಗಾದ ಮೇಲ್ಸೇತುವೆ ದುರಸ್ತಿಗೆ ಕ್ರಮ

ಹೊಳೆನರಸೀಪುರ: ತಾಲೂಕಿನ ಹಂಗರಹಳ್ಳಿಯಲ್ಲಿ ಹಾನಿಗೊಂಡಿರುವ ರೈಲ್ವೆ ಮೇಲ್ಸೇತುವೆ ಸ್ಥಳಕ್ಕೆ ಶನಿವಾರ ರೈಲ್ವೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರೈಲ್ವೆ ಇಲಾಖೆಯ ಇಂಜಿನಿಯರ್ ಹಾಗೂ ಸಿಬ್ಬಂದಿ ಶನಿವಾರ ಮೇಲ್ಸೇತುವೆ ತಾತ್ಕಾಲಿಕ ದುರಸ್ತಿಗೆ ಮುಂದಾಗಿದ್ದಾರೆ. ಸಿಮೆಂಟ್ ಬ್ಲಾಕ್‌ಗಳು ಕುಸಿತವಾಗಿರುವ ಜಾಗದಲ್ಲಿ ಮರಳು ಮೂಟೆಗಳನ್ನು ಜೋಡಣೆ ಮಾಡಲು ತಯಾರಿ ನಡೆಸಿದ್ದಾರೆ. ಸೇತುವೆ ಒಳಗೆ ನೀರು ಸಂಗ್ರಹವಾಗಿ ತೇವಾಂಶ ಹೆಚ್ಚಾಗಿ ಮಣ್ಣು ಸಡಿಲಗೊಂಡು ಕುಸಿತವಾಗುತ್ತಿದೆ. ಪ್ರತಿ ಸಲ ಕುಸಿತಗೊಂಡಾಗ ಈ ರೀತಿ ತಾತ್ಕಾಲಿಕವಾಗಿ ದುರಸ್ತಿ ಮಾಡಿ ರೈಲ್ವೆ ಇಲಾಖೆ ಕೈತೊಳೆದುಕೊಳ್ಳುತ್ತಿದೆ. ಸೇತುವೆಯ ಅಕ್ಕಪಕ್ಕದಲ್ಲಿ ಸಂಚರಿಸುವ ಜನರು ಆತಂಕದಲ್ಲೇ ಒಡಾಡು ವಂತಾಗಿದೆ.

ರಾಷ್ಟ್ರೀಯ ಹೆದ್ದಾರಿ 373ರ ಬೇಲೂರು- ಬಿಳಿಕೆರೆ ಮಾರ್ಗವಾಗಿ ಹೆಚ್ಚಿನ ವಾಹನಗಳ ಸಂಚರಿಸುತ್ತವೆ. ಹಂಗರಹಳ್ಳಿ ಸಮೀಪದ ರೈಲ್ವೆ ಮೇಲ್ಸೇತುವೆಯ ಮೇಲೆ ಈ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುತ್ತದೆ. ನಿರಂತರ ಮಳೆಯ ಪರಿಣಾಮ ಈ ಸೇತುವೆಯ ಸಿಮೆಂಟ್ ಬ್ಲಾಕ್‌ಗಳು ಕುಸಿತಗೊಂಡಿತ್ತು. ಈ ಮಾರ್ಗವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದ್ದು, ಬದಲಿ ಮಾರ್ಗವನ್ನು ಪ್ರಯಾಣಿಕರು ಅವಲಂಬಿಸಬೇಕಾಗಿದೆ. ಸುತ್ತಿ ಬಳಸಿ ಗ್ರಾಮೀಣ ಭಾಗದ ರಸ್ತೆಯಲ್ಲಿ ತೆರಳಬೇಕಾಗಿರುವುದರಿಂದ ಹೆಚ್ಚು ಕಿ.ಮೀ. ಕ್ರಮಿಸಬೇಕಿದೆ. ಇದರಿಂದ ಪ್ರಯಾಣಿಕರು ಕಿರಿಕಿರಿ ಅನುಭವಿಸುತ್ತಿದ್ದಾರೆ.