ಜಿಲ್ಲೆ

ಹಾನಗಲ್​ನಲ್ಲಿ 10ರವರೆಗೆ ಬಟ್ಟೆ ಅಂಗಡಿ ಬಂದ್

ಹಾನಗಲ್ಲ: ಕರೊನಾ ಸೋಂಕು ದಿನದಿಂದ ದಿನಕ್ಕೆ ನಾಗಾಲೋಟದಲ್ಲಿ ಓಡುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣದ ಬಟ್ಟೆ ಅಂಗಡಿಗಳ ಹಾಗೂ ದಿನಸಿ ಅಂಗಡಿಗಳ ಮಾಲೀಕರು ತಮ್ಮ ಸಾಮಾಜಿಕ ಜವಾಬ್ದಾರಿ ಮೆರೆಯುವ ನಿಟ್ಟಿನಲ್ಲಿ ಸ್ವಯಂಪ್ರೇರಿತ ಲಾಕ್​ಡೌನ್​ಗೆ ನಿರ್ಧರಿಸಿದ್ದಾರೆ.

ತಾಲೂಕಿನ ಹತ್ತಕ್ಕೂ ಅಧಿಕ ಜನರಿಗೆ ಕರೊನಾ ಸೋಂಕು ಕಂಡುಬಂದಿರುವ ಹಿನ್ನೆಲೆಯಲ್ಲಿ ಲಾಕ್​ಡೌನ್ ಅನಿವಾರ್ಯವಾಗಿದೆ. ವಾಣಿಜ್ಯ ಮಳಿಗೆಗಳು ತೆರೆದಿರುವುದರಿಂದ ತಾಲೂಕು ಕೇಂದ್ರಕ್ಕೆ ಗ್ರಾಮೀಣ ಪ್ರದೇಶದ ಜನತೆ ಹೆಚ್ಚು ಆಗಮಿಸುತ್ತಿದ್ದಾರೆ. ಇದನ್ನು ಹಂತ-ಹಂತವಾಗಿ ತಡೆಗಟ್ಟುವ ಉದ್ದೇಶದಿಂದ ಸ್ವಯಂಪ್ರೇರಿತ ಲಾಕ್​ಡೌನ್ ತೀರ್ಮಾನ ಕೈಗೊಳ್ಳುತ್ತಿದ್ದಾರೆ.

ಪಟ್ಟಣದ ಬಟ್ಟೆ, ಜವಳಿ ವರ್ತಕರ ಸಂಘ ಗುರುವಾರ ಸಭೆ ಸೇರಿ ಜು. 3ರಿಂದ 10ರವರೆಗೆ ಸಂಪೂರ್ಣ ಲಾಕ್​ಡೌನ್ ಮಾಡಲು ನಿರ್ಧರಿಸಿದೆ.

ಸಭೆಯಲ್ಲಿ ಬಿ.ಜಿ. ಸಾಲವಟಗಿ, ಬಿ.ವಿ. ಕಲಾಲ, ಅಮರದೀಪ ಗಾರ್ವೆಂಟ್ಸ್, ಲಕ್ಷ್ಮೀ ಸಾರಿ ಸೆಂಟರ್, ಗಂಗಾಜ್ಯೋತಿ ಗಾರ್ವೆಂಟ್ಸ್, ಮಾಲತೇಶ ಎಂಟರ್​ಪ್ರೈಸಸ್, ಮಹೇಶ ಸಿಲ್ಕ್-ಸಾರಿ ಸೆಂಟರ್, ರಾಜಲಕ್ಷ್ಮೀ ಕ್ಲಾಥ್ ಸ್ಟೋರ್ಸ್, ಸಾಗರ್ ಗಾರ್ವೆಂಟ್ಸ್, ಪಾಪ್ಯುಲರ್ ಗಾರ್ವೆಂಟ್ಸ್, ಕ್ಲಾಸಿಕ್ ಗಾರ್ವೆಂಟ್ಸ್, ದೇವಿಕಾ ಗಾರ್ವೆಂಟ್ಸ್, ಮುಂಬೈ ಸಾರಿ ಸೆಂಟರ್ ಮಾಲೀಕರು ಉಪಸ್ಥಿತರಿದ್ದರು.

ದಿನಸಿ ಅಂಗಡಿ ಅರ್ಧದಿನ ಬಂದ್: ದಿನಸಿ ಅಂಗಡಿಗಳ ಮಾಲೀಕರೂ ಸಭೆ ಸೇರಿ ಪ್ರತಿದಿನ ಬೆಳಗ್ಗೆ 8ರಿಂದ ಮಧ್ಯಾಹ್ನ 2 ಗಂಟೆಗೆ ವ್ಯಾಪಾರದ ಸಮಯ ನಿರ್ಧರಿಸಿದ್ದಾರೆ. ನಂತರ ಕಡ್ಡಾಯವಾಗಿ ಬಾಗಿಲು ಮುಚ್ಚಬೇಕು. ನಿರ್ಣಯ ಪಾಲಿಸದವರಿಗೆ ಮೊದಲ ಬಾರಿ 1 ಸಾವಿರ, 2ನೇ ಬಾರಿಗೆ 2 ಸಾವಿರ ರೂ. ದಂಡ ವಿಧಿಸಲಾಗುವುದು. ಮೂರನೇ ಬಾರಿ ನಿರ್ಣಯ ಉಲ್ಲಂಘಿಸಿದರೆ ಅಂಗಡಿ ಸೀಜ್ ಮಾಡಲು ತಾಲೂಕು ಆಡಳಿತಕ್ಕೆ ಮನವಿ ಮಾಡಲಾಗುವುದು ಎಂದು ದಿನಸಿ ಅಂಗಡಿಗಳ ಮಾಲೀಕರ ಸಂಘ ಪ್ರಕಟಿಸಿದೆ.

ನಿಲ್ಲದ ಸಾರ್ವಜನಿಕ ಓಡಾಟ: ತಾಲೂಕಿನಲ್ಲಿ ಕರೊನಾ ಸೋಂಕು ತೀವ್ರಗತಿಯಲ್ಲಿ ಏರುತ್ತಿದ್ದರೂ ಸಾರ್ವಜನಿಕರಲ್ಲಿ ಯಾವುದೇ ಭಯವಿಲ್ಲದಂತಾಗಿದೆ. ಅನಗತ್ಯ ಕಾರಣಗಳಿಗಾಗಿ ವಾಹನಗಳಲ್ಲಿ ಕಾನೂನು ಪಾಲಿಸದೇ, ಮಾಸ್ಕ್ ಧರಿಸದೇ ಓಡಾಡುತ್ತಿದ್ದಾರೆ. ಪೊಲೀಸ್, ಪುರಸಭೆ, ಕಂದಾಯ ಇಲಾಖೆ ಅಧಿಕಾರಿಗಳು ಬಡಿಗೆ ಹಿಡಿದರೂ ಜಗ್ಗುತ್ತಿಲ್ಲ. ಪುರಸಭೆ ದಂಡ ವಿಧಿಸಿದರೂ ಬಗ್ಗುತ್ತಿಲ್ಲ. ಹೀಗಾದರೆ ಸಾರ್ವಜನಿಕರನ್ನು ಹೇಗೆ ನಿಭಾಯಿಸುವುದು ಎಂಬ ಪ್ರಶ್ನೆ ಅಧಿಕಾರಿಗಳಿಗೆ ಕಾಡುತ್ತಿದೆ.