ಹಾನಗಲ್ಲ: ಕರೊನಾ ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ ಮುಂಜಾಗ್ರತೆ ಕ್ರಮವಾಗಿ ಪಟ್ಟಣದಲ್ಲಿ ಸಂಜೆ 7ರಿಂದ ಬೆಳಗ್ಗೆ 7 ರವರೆಗೆ ಎಲ್ಲ ವ್ಯಾಪಾರ- ವಹಿವಾಟು ನಿಷೇಧಿಸಲಾಗಿದೆ ಎಂದು ತಹಸೀಲ್ದಾರ್ ಪಿ.ಎಸ್. ಎರ್ರಿಸ್ವಾಮಿ ತಿಳಿಸಿದರು.
ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವ್ಯಾಪಾರಸ್ಥರು, ಸಾರ್ವಜನಿಕರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ ಮೂರು ಗ್ರಾಮಗಳಲ್ಲಿ ಸೋಂಕಿತರು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಜಾಗ್ರತೆ ಕೈಗೊಳ್ಳಬೇಕಾಗಿದೆ. ಸೋಂಕು ಇನ್ನಷ್ಟು ಹರಡದಂತೆ ಮುಂಜಾಗ್ರತೆ ವಹಿಸಲು ಜನಸಂದಣಿ ಹೆಚ್ಚಾಗದಂತೆ ಕ್ರಮ ಕೈಗೊಳ್ಳಬೇಕಿದೆ. ತರಕಾರಿ, ದಿನಸಿ, ಹೋಟೆಲ್, ಬಾರ್, ರೆಸ್ಟೋರೆಂಟ್ ಹಾಗೂ ಸಲೂನ್ ಸೇರಿ ಎಲ್ಲ ಅಂಗಡಿಗಳನ್ನು ಸಂಜೆ 7ರೊಳಗಾಗಿ ಬಾಗಿಲು ಮುಚ್ಚಬೇಕು ಎಂದು ಸೂಚಿಸಿದರು.
ಕೋವಿಡ್ ನಿಯಂತ್ರಣಕ್ಕಾಗಿ, ಗ್ರಾಮ ಪಂಚಾಯಿತಿಗಳಿಗೆ ನೇಮಕಗೊಂಡಿರುವ ಆಡಳಿತಾಧಿಕಾರಿಗಳು ಪ್ರತಿದಿನ ಗ್ರಾಪಂ ಕಚೇರಿಗೆ ಭೇಟಿ ನೀಡಿ ಕೋವಿಡ್-19 ಕುರಿತು ಜಾಗೃತಿ ಮೂಡಿಸಬೇಕು. ಸಮುದಾಯ ಭವನಗಳನ್ನು ಸಭೆ-ಸಮಾರಂಭಗಳಿಗೆ ನೀಡಬಾರದು. ಸಭೆಗಳನ್ನು ನಡೆಸಲೂ ಅನುಮತಿಸಬಾರದು. ಎಲ್ಲರೂ ಮಾಸ್ಕ್ಗಳನ್ನು ಕಡ್ಡಾಯವಾಗಿ ಹಾಕಿಕೊಳ್ಳಬೇಕು. ಮಾಸ್ಕ್ ಧರಿಸದವರಿಗೆ 100 ರೂ. ದಂಡ ವಿಧಿಸಬೇಕು. ತಂಬಾಕು ಮಾರಾಟ ನಿಷೇಧಿಸಿದ್ದು, ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಆದೇಶಿಸಿದರು.
ಸಭೆಯಲ್ಲಿ ಪಿಎಸ್ಐ ಎಸ್.ಪಿ. ಪಟ್ಟಣಶೆಟ್ಟಿ, ಸಿಡಿಪಿಒ ಸಂತೋಷಕುಮಾರ, ಬಿಸಿಎಂ ವಿಸ್ತರಣಾಧಿಕಾರಿ ಎಸ್.ಆನಂದ್, ಸಮಾಜಕಲ್ಯಾಣ ಸಹಾಯಕ ನಿರ್ದೇಶಕಿ ಜಿ.ಬಿ. ಹಿರೇಮಠ, ಪುರಸಭೆ ಮುಖ್ಯಾಧಿಕಾರಿ ಎಚ್.ಎನ್. ಭಜಕ್ಕನವರ, ಶಿಕ್ಷಣ ಸಂಯೋಜಕ ಮೋಹನ್ಕುಮಾರ್, ಜಿಪಂ ಎಇಇ ರಮೇಶಕುಮಾರ ಇತರರು ಇದ್ದರು.
ತಾಲೂಕಿನ ಚಿಕ್ಕೇರಿಹೊಸಳ್ಳಿ ಗ್ರಾಮದ ಪುರುಷನಲ್ಲಿ ಸೋಂಕು ಪತ್ತೆಯಾಗಿದೆ. ಗ್ರಾಮದಿಂದ ಹಾನಗಲ್ಲ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಕ್ಕೆ 26 ವಿದ್ಯಾರ್ಥಿಗಳು ತೆರಳುತ್ತಿ್ತ್ದು, ಅವರಿಗೆ ಪ್ರತ್ಯೇಕ ಬಸ್ ವ್ಯವಸ್ಥೆ ಕೈಗೊಳ್ಳುವಂತೆ ಸಾರಿಗೆ ಸಂಸ್ಥೆಗೆ ಸೂಚಿಸಲಾಗಿದೆ ಎಂದು ತಹಸೀಲ್ದಾರ್ ಎರ್ರಿಸ್ವಾಮಿ ತಿಳಿಸಿದರು.