ಹಾವೇರಿ: ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿಯವರು ಹಾನಗಲ್ಲ ವಿಧಾನಸಭಾ ಕ್ಷೇತ್ರಕ್ಕೆ ಮಲತಾಯಿ ಧೋರಣೆ ತೋರುತ್ತಿದ್ದಾರೆ ಎಂದು ಶಾಸಕ ಶ್ರೀನಿವಾಸ ಮಾನೆ ಆರೋಪಿಸಿದರು.
ಹಾನಗಲ್ಲ ಕ್ಷೇತ್ರದ ಶಾಸಕರಾಗಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ವರ್ಷದಲ್ಲಿ ಸಿಎಂ ಹಾನಗಲ್ಲ ತಾಲೂಕಿಗೆ ಕೇವಲ 25 ಕೋಟಿ ರೂ. ಅನುದಾನ ಕೊಟ್ಟಿದ್ದಾರೆ. ಜಿಲ್ಲೆಯ ಬೇರೆ ತಾಲೂಕುಗಳಿಗೆ 40 ಕೋಟಿಗೂ ಅಧಿಕ ಅನುದಾನ ಕೊಟ್ಟಿದ್ದಾರೆ ಎಂದರು.
ಕಳೆದ ವರ್ಷ ಇದೇ ದಿನಾಂಕದಂದು ಚುನಾವಣೆಯಲ್ಲಿ ಜಿದ್ದಾಜಿದ್ದಿಗೆ ಕಾರಣವಾಗಿ, ಗೆಲುವು ಸಾಧಿಸಲಾಯಿತು.
ಈ ಸಮಯದಲ್ಲಿ ಮಾಧ್ಯಮಗಳು ನೈಜ ಸ್ಥಿತಿಗತಿಗಳು ಜನರಿಗೆ ತಲುಪಿಸಿದ ಪರಿಣಾಮ ನಾನು ಗೆಲುವು ಸಾಧಿಸಲು ಸಹಕಾರಿಯಾಗಿದೆ. ಒಂದು ವರ್ಷದಲ್ಲಿ 5 ತಿಂಗಳು ಮಳೆಯಲ್ಲಿ ಕಳೆದು ಹೋಗಿದೆ. ಅಲ್ಪ ಅವಧಿಯಲ್ಲೇ ಪಾರದರ್ಶಕ ಆಡಳಿತಕ್ಕೆ ಒತ್ತು ಕೊಟ್ಟಿದ್ದೇನೆ.
ಒಂದು ವರ್ಷದಲ್ಲಿ ಬಹಳಷ್ಟು ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಮತದಾರರಿಗೆ ನಾನು ಮೊದಲೇ ಹೇಳಿದಂತೆ ಆಡಳಿತದಲ್ಲಿ ಚುಕುರು ತರುವ, ಆಡಳಿತದಲ್ಲಿ ಸುಧಾರಣೆ ತರುವ ಭರವಸೆ ನೀಡಿದ್ದೆ. ಜನರು ಮುಖ್ಯವಾಗಿ ಎರಡು ಇಲಾಖೆಯ ಮೇಲೆ ಅವಲಂಬಿಸಿರುತ್ತಾರೆ. ಕಂದಾಯ ಇಲಾಖೆ, ಗ್ರಾಮ ಪಂಚಾಯಿತಿ ಇಲಾಖೆಯಲ್ಲಿ. ಗ್ರಾಮ ಪಂಚಾಯಿತಿಗಳಲ್ಲಿ ಪಿಡಿಒ ಬೆಳಗ್ಗೆ 10 ರಿಂದ 12 ಗಂಟೆವರೆಗೆ ಕಚೇರಿಯಲ್ಲಿದ್ದು, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಬದಲಾವಣೆ ತರಲಾಗಿದೆ. ಆರೋಗ್ಯ ಇಲಾಖೆಯಲ್ಲಿ ಹಲವು ಸಮಸ್ಯೆಗಳು ಇದ್ದವು. ಈ ಬಗ್ಗೆ ಸರ್ಕಾರ ಹಾಗೂ ಅಧಿವೇಶನದಲ್ಲಿ ಗಮನ ಸೆಳೆದ ಪರಿಣಾಮ ತಾಲೂಕಿನಲ್ಲಿ ಆರೋಗ್ಯ ಇಲಾಖೆ ಸುಧಾರಣೆ ಬಂದಿದೆ. ಸರ್ಕಾರ ಇನ್ನಷ್ಟು ಸಹಕಾರ ಕೊಡಬೇಕೆಂದರು.
ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರ ಕೊರತೆಯಿದೆ. ಅತಿಥಿ ಉಪನ್ಯಾಸಕರಿಗೆ ಸರಿಯಾದ ನ್ಯಾಯ ಸಿಗುತಿಲ್ಲ. ಭವಿಷ್ಯ ರೂಪಿಸುವ ಶಿಕ್ಷಣಕ್ಕೆ ಅನುದಾನ ಕೊರೆತೆಯಾಗದಂತೆ ನೋಡಿಕೊಳ್ಳಬೇಕು. ಕ್ಷೇತ್ರದಲ್ಲಿ 200 ಕೊಠಡಿ ನೀಡಿ ಎಂದರೆ, 20 ಕೊಠಡಿಗಳ ಅನುದಾನ ನೀಡಿದ್ದಾರೆ. ಬೇರೆ ತಾಲೂಕಿಗೆ ಹೋಲಿಕೆ ಮಾಡಿದರೆ, ಇದು ಮಲತಾಯಿ ಧೋರಣೆಯಾಗಿದೆ. ಸರ್ಕಾರ ಈ ವರ್ಷ 30-40 ಕೊಠಡಿಗಳನ್ನಾದರೂ ನೀಡಬೇಕು ಎಂದರು.
ಜಾನುವಾರುಗಳಿಗೆ ವಿಮಾ ಮಾಡಿಸುವ ಕೆಲಸ ಇಲಾಖೆ ಜಾಗೃತಿ ಮೂಡಿಸಿಲ್ಲ. ರಾಷ್ಟ್ರೀಯ ಜಾನುವಾರುಗಳ ವಿಮೆ ಮಿಷನ್ ಅಡಿಯಲ್ಲಿ ಹೈನು ಜಾನುವಾರುಗಳಿಗೆ ರೈತರ ವಂತಿಗೆ ತುಂಬಿಸುವ ಕೆಲಸವನ್ನು ನಾನು ಸ್ವತಃ ಮಾಡುತ್ತಿದ್ದೇನೆ. 2000 ಜಾನುವಾರುಗಳಿಗೆ ತಲಾ 150 ರೂ. ವಿಮೆ ತುಂಬುತ್ತೇನೆ ಎಂದರು.
ಪಶುಸಂಗೋಪನೆ ಇಲಾಖೆಯನ್ನು ತೆಗೆದುಹಾಕಿ, ಕೆ ಎಂ ಎಫ್ ಗೆ ಜವಾಬ್ದಾರಿ ನೀಡಿದರೆ, ಸರಿಯಾಗಿ ನಿಭಾಯಿಸಿಕೊಂಡು ಹೋಗುತ್ತಾರೆ. ಅದಕ್ಕೆ ನ್ಯಾಯ ಒದಗಿಸಿದಂತೆ ಆಗುತ್ತದೆ. ಕೊಳಗೇರಿ ಮಂಡಳಿಯಿಂದ ಜನರಿಗೆ ನ್ಯಾಯ ಒದಗಿಸಬೇಕಾಗಿದೆ. ಮಳೆಯ ಹಾನಿಯನ್ನು ಹೇಗೆ ನಿಭಾಯಿಸಬೇಕು ಎಂಬ ಅರಿವು ಸರ್ಕಾರದ ಮುಂದಿಲ್ಲ. ಕಾಲುವೆಗಳು ಒತ್ತುವರಿ, ಕಂಠಿ ಬೆಳೆದು ಮುಚ್ಚಿಹೋಗಿವೆ. ಕಾಲುವೆಗಳು ಹೂಳು ತುಂಬಿವೆ. ಇದರ ಬಗ್ಗೆ ಸರ್ಕಾರ ಎಚ್ಚರ ವಹಿಸದಿದ್ದರೇ ಕಷ್ಟವಾಗುತ್ತದೆ.
ಹಾನಗಲ್ಲ ಮತದಾರರ ಒತ್ತಡದಲ್ಲಿ ನನಗೆ ಅವಕಾಶ ನೀಡಿದ್ದರು. ಅವರ ಅಭಿಮಾನಕ್ಕೆ ನಾನು ತಕ್ಕ ಮಟ್ಟಿಗೆ ನ್ಯಾಯ ಒದಗಿಸಿದ್ದೇನೆ. ನಮ್ಮವರು ಸಿಎಂ ಆಗಿದ್ದಾರೆ. ಅವರು ಆರು ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಮಾಡಬೇಕೆಂದು ಒತ್ತಾಯಿಸುವೆ ಎಂದರು.