ಬಳ್ಳಾರಿ : ಇಲ್ಲಿನ ಕೊಟ್ಟೂರು ಸ್ವಾಮಿ ಮಠದಲ್ಲಿ ಹಾನಗಲ್ ಕುಮಾರ ಶಿವಯೋಗಿಗಳ 157 ಜಯಂತ್ಯೋತ್ಸವ ಹಾಗೂ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮೀಜಿ ಅವರ 86ನೇ ಜಯಂತ್ಯೋತ್ಸವ ಅಂಗವಾಗಿ ಹಾನಗಲ್ ಕುಮಾರ ಶಿವಯೋಗಿಗಳ ಜೀವನ ದರ್ಶನದ ಪುರಾಣ ಪ್ರವಚನ ಗುರುವಾರ ಸಂಜೆ ಆರಂಭವಾಯಿತು. ಪ್ರತಿದಿನ ಸಂಜೆ ಪ್ರವಚನ ನಡೆಯಲಿದ್ದು, ಸೆ. 19 ರಿಂದ ಸೆ. 28 ರವರೆಗೆ ನಡೆಯಲಿದೆ.
ಕಾರ್ಯಕ್ರಮಕ್ಕೆ ಮಠದ ಬಸವಲಿಂಗ ಮಹಾಸ್ವಾಮೀಜಿ ಚಾಲನೆ ನೀಡಿ ಮಾತನಾಡಿದರು. ಇಂದಿನ ಯಾಂತ್ರಿಕ ಬದುಕಿನಲ್ಲಿ ಜನತೆ ನೆಮ್ಮದಿ ಕಳೆದುಕೊಳ್ಳುತ್ತಿದ್ದಾರೆ. ಇಂತಹ ಸಮಯದಲ್ಲಿ ಜನತೆ, ಭಕ್ತ ಸಮೂಹ ಪುರಾಣ ಪ್ರವಚನಗಳಲ್ಲಿ ಭಾಗವಹಿಸಿ ಯಾಂತ್ರಿಕ ಬದುಕಿನಿಂದ ದೂರವಾಗಿ ಶಾಂತಿ ನೆಮ್ಮದಿ ಪಡೆಯಲು ಮುಂದಾಗಿ. ಜತೆಗೆ ಬದುಕಿನಲ್ಲಿ ಮತ್ತೊಬ್ಬರಿಗೆ ಸಹಾಯ ಮಾಡುವ ಗುಣ ಬೆಳಸಿಕೊಳ್ಳಬೇಕು. ದುಡಿಮೆಯಲ್ಲಿ ಹಂಚಿಕೊಂಡು ತಿನ್ನುವ ಕೆಲಸ ನಮ್ಮದಾಗಬೇಕು ಎಂದರು.
ಬಳಿಕ ಡೋಣಿಯ ಶಶಿಧರ ಶಾಸ್ತ್ರಿಗಳು ಪ್ರವಚನ ನೀಡಿದರು. ಸಂಗೀತಗಾರರಾಗಿ ಡಿ. ಕಗ್ಗಲ್ ದೊಡ್ಡಬಸವ ಗವಾಯಿ, ತಬಲ ವಾದಕರಾಗಿ ತೋಟೇಂದ್ರ ಕರಡಕಲ್ ಕಾರ್ಯ ನಿರ್ವಹಿಸಿದರು.
ಪುರಾಣಕ್ಕೆ ಆಗಮಿಸುವ ಭಕ್ತರಿಗೆ ಇಲ್ಲಿನ ಬಸವೇಶ್ವರನಗರ, ತಾಲೂಕಿನ ಶ್ರೀಧರಗಡ್ಡೆ ಮತ್ತು ಸೋಮಸಮುದ್ರ ಗ್ರಾಮದಿಂದ ಬಸ್ ವ್ಯವಸ್ಥೆ ಕಲ್ಪಿಸಿದೆ. ಜತೆಗೆ ಪುರಾಣದ ನಂತರ ಹತ್ತು ದಿನಗಳವರೆಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ.