ಜಿಲ್ಲೆ

ಹಾಥರಸ್ ದುರ್ಘಟನೆಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಆಕ್ರೋಶ ; ಅತ್ಯಚಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

Chikkaballapur

ಚಿಕ್ಕಬಳ್ಳಾಪುರ: ಉತ್ತರ ಪ್ರದೇಶದ ಹಾಥರಸ್‌ನ ಯುವತಿ ಮೇಲೆ ಅತ್ಯಾಚಾರವೆಸಗಿ, ಕೊಲೆಗೈದ ದುಷ್ಕರ್ಮಿಗಳು ಮತ್ತು ಮೃತಳ ಪಾಲಕರ ಮೇಲೆ ಒತ್ತಡ ಹೇರಿ ಪ್ರಕರಣದ ದಿಕ್ಕು ತಪ್ಪಿಸಲು ಯತ್ನಿಸುತ್ತಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಒತ್ತಾಯಿಸಿ ದಲಿತ ಸಂಘಟನೆಗಳ ಒಕ್ಕೂಟ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿತು.

ನಗರದ ಶಿಡ್ಲಘಟ್ಟ ವೃತ್ತದಲ್ಲಿ ರಸ್ತೆ ಸಂಚಾರ ತಡೆ ನಡೆಸಿದ ಕಾರ್ಯಕರ್ತರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮೃತಳ ಕುಟುಂಬದ ನೋವಿಗೆ ಸ್ಪಂದಿಸಬೇಕಾದ, ನ್ಯಾಯ ಕೊಡಿಸಬೇಕಾದ ಆಡಳಿತ ಯಂತ್ರಾಂಗವು ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದೆ. ಸ್ವತಃ ಜಿಲ್ಲಾಧಿಕಾರಿಯೇ ಹೇಳಿಕೆಯನ್ನು ಬದಲಾಯಿಸಿ ಒತ್ತಡ ಹೇರಿದರೆ, ಪೊಲೀಸರು ಮೃತದೇಹವನ್ನು ಆಕೆಯ ಪಾಲಕರಿಗೆ ಒಪ್ಪಿಸದೇ ರಾತ್ರೋರಾತ್ರಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಜತೆಗೆ ಅತ್ಯಾಚಾರವೇ ನಡೆದಿಲ್ಲ ಎನ್ನುವ ಮೂಲಕ ಪ್ರಭಾವಿಗಳ ರಕ್ಷಣೆಗೆ ನಿಂತಿದ್ದಾರೆ ಎಂದು ಆರೋಪಿಸಿದರು.

ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸುವ ಜತೆಗೆ ಅತ್ಯಾಚಾರ, ಶೋಷಿತರ ಮೇಲಿನ ದೌರ್ಜನ್ಯ ತಡೆಯುವಲ್ಲಿ ವಿಫಲವಾಗಿರುವ ಉತ್ತರ ಪ್ರದೇಶ ಸರ್ಕಾರವನ್ನು ವಜಾಗೊಳಿಸಿ, ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು. ಒಕ್ಕೂಟದ ಪದಾಧಿಕಾರಿಗಳಾದ ಸು.ಧಾ.ವೆಂಕಟೇಶ್, ಎನ್.ಶ್ರೀನಿವಾಸ್, ಬಿ.ವಿ.ಆನಂದ್, ವಿ.ಮಂಜುನಾಥ್, ವರದಹಳ್ಳಿ ವೆಂಕಟೇಶ್, ಗೌತಮ್ ಗಂಗಾಧರ್, ಎನ್.ಸುಬ್ಬರಾಯಪ್ಪ, ಕೆ.ವಿ.ಗವಿರಾಯಪ್ಪ, ಬಿ.ಎಚ್.ನರಸಿಂಹಪ್ಪ, ಎಂ.ಲಕ್ಷ್ಮೀನಾರಾಯಣ, ಕಾಳಪ್ಪ ಇತರರಿದ್ದರು.

ವಕೀಲರ ಸಂಘದ ಆಕ್ರೋಶ: ಉತ್ತರ ಪ್ರದೇಶ ಸರ್ಕಾರವನ್ನು ವಜಾಗೊಳಿಸುವಂತೆ ವಕೀಲರ ಸಂಘ ಉಪ ವಿಭಾಗಾಧಿಕಾರಿ ಎ.ಎನ್.ರಘುನಂದನ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿತು.  ಹಾಥರಸ್ ಯುವತಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಒಂದು ನಿದರ್ಶನ ಎಂದು ಸಂಘದ ಜಿಲ್ಲಾಧ್ಯಕ್ಷ ಕೆ.ಎಚ್.ತಮ್ಮೇಗೌಡ ಆಕ್ರೋಶ ವ್ಯಕ್ತಪಡಿಸಿದರು. ಪದಾಧಿಕಾರಿಗಳಾದ ಕೆ.ವಿ.ಬಾಲಾಜಿ, ಬಿ.ವಿನೋದ್ ಕುಮಾರ್, ಎಸ್.ಎನ್.ನಾಗರಾಜ್, ಆರ್.ಮಟಮಪ್ಪ, ಎನ್.ಮಂಜುನಾಥ್ ಮತ್ತಿತರರು ಇದ್ದರು.