ಜಿಲ್ಲೆ

ಹಾಥರಸ್ ಘಟನೆ ಖಂಡಿಸಿ ಪಂಜಿನ ಮೆರವಣಿಗೆ

Gadag

ಗಜೇಂದ್ರಗಡ: ಉತ್ತರ ಪ್ರದೇಶದ ಹಾಥರಸ್​ನಲ್ಲಿನ ದಲಿತ ಯುವತಿಯ ಅತ್ಯಾಚಾರ, ಕೊಲೆ ಘಟನೆ ವಿರೋಧಿಸಿ ಹಾಗೂ ಉತ್ತರ ಪ್ರದೇಶದ ಪೊಲೀಸರ ದೌರ್ಜನ್ಯ ಕ್ರಮ ಖಂಡಿಸಿ ಡಿ.ಕೆ. ಶಿವಕುಮಾರ ಅಭಿಮಾನಿ ಬಳಗದಿಂದ ಶನಿವಾರ ಪಂಜಿನ ಮೆರವಣಿಗೆ ನಡೆಯಿತು.

ಪಟ್ಟಣದ ದುರ್ಗಾ ವೃತ್ತದಿಂದ ಆರಂಭವಾದ ಪಂಜಿನ ಮೆರವಣಿಗೆ ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತದ ಮೂಲಕ ಸಂಚರಿಸಿ ಕಾಲಕಾಲೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿತು. ಮೆರವಣಿಗೆಯಲ್ಲಿ ಕಾರ್ಯಕರ್ತರು ಯುಪಿ ಸಿಎಂ ಆದಿತ್ಯನಾಥ ವಿರುದ್ಧ ಘೊಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಡಿ.ಕೆ. ಶಿವಕುಮಾರ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಬಸವರಾಜ ಚನ್ನಿ ಮಾತನಾಡಿ, ದಲಿತ ಹೆಣ್ಣು ಮಗಳ ಮೇಲೆ ನಡೆದ ಅಮಾನುಷ ಅತ್ಯಾಚಾರವನ್ನು ಖಂಡಿಸಿ ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡಲು ಹೊರಟ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ಅಮಾನವೀಯವಾಗಿ ನಡೆಸಿಕೊಂಡಿರುವುದನ್ನು ಖಂಡಿಸುತ್ತೇವೆ. ಅವರು ಪೊಲೀಸರಲ್ಲ, ಕೇಂದ್ರ ಸರ್ಕಾರದ ಗುಲಾಮರಾಗಿದ್ದಾರೆ ಎಂದರು.

ಪುರಸಭೆ ಸದಸ್ಯರಾದ ಶಿವರಾಜ ಘೊರ್ಪಡೆ, ಮುರ್ತಜಾ ಡಾಲಾಯತ, ರಾಜು ಸಾಂಗ್ಲಿಕರ, ಎಚ್.ಎಸ್. ಸೋಂಪೂರ, ಅರ್ಜುನ ರಾಠೋಡ, ಅಪ್ಪು ಮತ್ತಿಕಟ್ಟಿ, ಶ್ರೀಧರ ಬಿದರಳ್ಳಿ, ಎಫ್.ಎಸ್. ಕರಿದುರಗನವರ, ಯಲ್ಲಪ್ಪ ಬಂಕದ, ಮೋಹನ ಕನಕೇರಿ, ಅರಿಹಂತ ಬಾಗಮಾರ, ಸದ್ಧಾಂ ಯಲಬುರ್ಗಿ, ಅನಿಲ ಕರ್ಣೆ ಇದ್ದರು.