ಮೈಸೂರು: ಮೈಂಡ್ ಟ್ರೀ ಫೌಂಡೇಷನ್ ಮತ್ತು ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನಿಂದ ಸರಗೂರು ತಾಲೂಕು ಬಿ.ಮಟ್ಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡಗಿ ಹಾಡಿ ಮತ್ತು ಆಲನಹಳ್ಳಿ ಹಾಡಿಯಲ್ಲಿ ಇತ್ತೀಚೆಗೆ ಸೌರಶಕ್ತಿ ದೀಪ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಮಾತನಾಡಿ, ದೀಪಾವಳಿ ಸಮಯದಲ್ಲಿ ಹಾಡಿಯ ಪ್ರತಿಯೊಂದು ಮನೆಯಲ್ಲಿಯೂ ಬೆಳಕನ್ನು ಮೂಡಿಸಲಾಗುತ್ತಿದೆ. ಕತ್ತಲಿನಿಂದ ಬೆಳಕಿನತ್ತ ಕೊಂಡೊಯ್ಯುವ ದೀಪಾವಳಿ ಹಬ್ಬದ ಪ್ರಯುಕ್ತ ಕೂಡಗಿ ಹಾಡಿ ಮತ್ತು ಆಲನಹಳ್ಳಿ ಹಾಡಿಯ ಪ್ರತಿಯೊಂದು ಮನೆಗಳಲ್ಲೂ ಬೆಳಕು ಮೂಡಿಸಿ, ಗಿರಿಜನರ ಅಭಿವೃದ್ಧಿಯತ್ತ ಎಸ್‌ವಿಯುಎಂ ಸಂಸ್ಥೆ ಜತೆ ಮೈಂಡ್ ಟ್ರೀ ಫೌಂಡೇಷನ್ ಸಹಕಾರ ನೀಡಿರುವುದು ನಿಜಕ್ಕೂ ಸಂತಸದ ವಿಚಾರ ಎಂದರು.
ಎಚ್.ಡಿ. ಕೋಟೆ ತಾಲೂಕಿನಲ್ಲಿಯೇ ಮಾದರಿ ಗ್ರಾಮ ಪಂಚಾಯಿತಿ ಮಾಡುವ ನಿಟ್ಟಿನಲ್ಲಿ ಬಿ.ಮಟ್ಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕೂಡಗಿ ಹಾಡಿ ಮತ್ತು ಆಲನಹಳ್ಳಿ ಹಾಡಿಗೆ ಸೋಲಾರ್ ದೀಪ ಮತ್ತು ಬಾಯ್ಲರ್‌ಗಳನ್ನು ನೀಡಲಾಗುತ್ತಿದೆ. ಹಾಡಿಯ ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೋರಿದರು.
ಗಿರಿಜನರು ಯಾರನ್ನೂ ಆವಲಂಬಿಸುವುದಿಲ್ಲ. ಕಾಡಿನಲ್ಲಿ ಸಿಗುವ ಸಂಪನ್ಮೂಲಗಳ ಮೇಲೆ ಹೆಚ್ಚು ಅವಲಂಬಿತರಾಗಿರುತ್ತಾರೆ. ಗಿರಿಜನರು ಒಗ್ಗಟ್ಟಿನಿಂದ ಬದುಕಿ ಅಭಿವೃದ್ಧಿ ಮತ್ತು ಸ್ವಾವಲಂಬನೆಯತ್ತ ಹೆಜ್ಜೆ ಇಡುವುದೇ ನಮ್ಮ ಸಂಸ್ಥೆಯ ಮುಖ್ಯ ಗುರಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇನ್ನು ಮುಂದೆ ಹಾಡಿಯ ಪ್ರತಿಯೊಂದು ಮನೆಗಳಲ್ಲೂ ವಿದ್ಯುತ್ ವ್ಯವಸ್ಥೆ ಕಲ್ಪಿಸಲಾಗುವುದು. ಇದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ತಮ್ಮ ಮಕ್ಕಳನ್ನು ವಿದ್ಯಾವಂತರಾಗಿ ಮಾಡಿ, ಅವರ ಬದುಕನ್ನು ಹಸನುಗೊಳಿಸುವುದು ಪಾಲಕರ ಆದ್ಯ ಕರ್ತವ್ಯವಾಗಿದೆ ಎಂದರು.
ಮೈಂಡ್ ಟ್ರೀ ಫೌಂಡೇಷನ್ ಕಾರ್ಯಾಧ್ಯಕ್ಷರು ಎಚ್.ಪಿ. ಸುರೇಶ್ ಮಾತನಾಡಿ, ಮೈಂಡ್ ಟ್ರೀ ಫೌಂಡೇಷನ್ ಶಿಕ್ಷಣ, ಆರೋಗ್ಯ, ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣಕ್ಕಾಗಿ ಶ್ರಮಿಸುತ್ತಿದೆ. ಆದ್ದರಿಂದ ಸಂಸ್ಥೆಯ ತಮ್ಮ ಕೊಡುಗೆಯನ್ನು ಉಪಯಕ್ತವಾಗಿ ಬಳಸಬೇಕು ಎಂದು ಕೋರಿದರು.
ಮೈಂಡ್ ಟ್ರೀ ಫೌಂಡೇಷನ್ ಮುಖ್ಯಸ್ಥ ಫಣೀಶ್‌ರಾವ್ ಅವರನ್ನು ಸನ್ಮಾನಿಸಲಾಯಿತು. ಕೂಡಗಿ ಹಾಡಿ ಮತ್ತು ಆಲನಹಳ್ಳಿ ಹಾಡಿಯ ಫಲಾನುಭವಿಗಳಿಗೆ 77 ಸೋಲಾರ್ ಲೈಟ್, 75 ಬಾಯ್ಲರ್ ಯಂತ್ರ ಹಾಗೂ 6 ಬೀದಿ ದೀಪಗಳನ್ನು ವಿತರಿಸಲಾಯಿತು.
ಮೈಂಡ್ ಟ್ರೀ ಫೌಂಡೇಷನ್‌ನ ಸಿಎಸ್‌ಆರ್ ಮುಖ್ಯಸ್ಥರಾದ ದೀಪಕ್ ಪ್ರಭು ಮಟ್ಟಿ, ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣ ಇಲಾಖೆಯ ನಿರ್ದೇಶಕ ಡಾ. ಡೆನ್ನಿಸ್ ಚೌಹಾಣ್, ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣ ಇಲಾಖೆಯ ಯೋಜನೆಯ ವ್ಯವಸ್ಥಾಪಕಿ ನಾಗರತ್ನಾ, ಮೊಳೆಯೂರು ಜಿಲ್ಲಾ ಅರಣ್ಯಾಧಿಕಾರಿ ಸಿ.ಪುಟ್ಟರಾಜು, ಬಿ.ಮಟ್ಕೆರೆ ಗ್ರಾಪಂ ಅಧ್ಯಕ್ಷೆ ರೂಪಾಬಾಯಿ ಮಲ್ಲೇಶ್ ನಾಯಕ್, ಉಪಾಧ್ಯಕ್ಷ ದೇವದಾಸ್, ಪಿಡಿಒ ಭಾಗ್ಯಾ, ಸದಸ್ಯರಾದ ಬೆಟ್ಟಸ್ವಾಮಿ, ನಾಗೇಂದ್ರ ಇತರರು ಇದ್ದರು.