ಎಚ್.ಡಿ.ಕೋಟೆ ತಾಲೂಕಿನ ಪ್ರಭಾನಗರ ಹಾಡಿಯಲ್ಲಿ ಆದಿವಾಸಿ ವಿದ್ಯಾರ್ಥಿಗಳಿಗೆ ಎಎಪಿ ರಾಜ್ಯ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ನೋಟ್ ಬುಕ್ ವಿತರಣೆ ಮಾಡಿದರು. ಬಿ.ಎನ್.ನಟರಾಜು,ಬಿ.ಟಿ. ನಾಗಣ್ಣ, ನಂಜಪ್ಪ ಕಾಳೇಗೌಡ, ಸೋಸಲೆ ಸಿದ್ದರಾಜು, ಕಾಳಪ್ಪ, ಗೀತಾ ತುಂಬಸೋಗೆ ಇದ್ದರು.  
ಜಿಲ್ಲೆ

ಹಾಡಿಗಳಿಗೆ ಮೂಲಸೌಕರ್ಯ ಒದಗಿಸಲು ಹೋರಾಟ

ಎಚ್.ಡಿ.ಕೋಟೆ : ತಾಲೂಕಿನ 126 ಹಾಡಿಗಳಲ್ಲಿ ಮೂಲಸೌಕರ್ಯಗಳ ಕೊರತೆ ಇದ್ದು, ಮುಂದಿನ ದಿನಗಳಲ್ಲಿ ಆಮ್ ಆದ್ಮಿ ಪಕ್ಷದ ವತಿಯಿಂದ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಜನಾಂದೋಲನ ನಡೆಸಿ ಜಾಗೃತಿ ಮೂಡಿಸಿ ಸರ್ಕಾರದ ಗಮನಕ್ಕೆ ತರಲು ಪ್ರಯತ್ನ ಮಾಡಲಾಗುತ್ತದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದರು.

ತಾಲೂಕಿನ ಪ್ರಭಾನಗರ ಹಾಡಿಯಲ್ಲಿ ಆಮ್‌ಆದ್ಮಿ ಪಕ್ಷದಿಂದ ಬುಧವಾರ ಆಯೋಜಿಸಿದ್ದ ಆದಿವಾಸಿಗಳ ಕುಂದುಕೊರತೆ ಸಭೆ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕು ವ್ಯಾಪ್ತಿಯ ಹಾಡಿಗಳ ಮೂಲಸೌಕರ್ಯಗಳ ಸಮಸ್ಯೆಗಳ ಬಗ್ಗೆ ಸ್ಥಳೀಯ ಆದಿವಾಸಿ ಮುಖಂಡರು ನನ್ನ ಗಮನಕ್ಕೆ ತಂದಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ಪಕ್ಷದ ಮುಖಂಡರಿಂದ ವರದಿ ಪಡೆದು ಮತ್ತೊಮ್ಮೆ ಸಭೆ ಸೇರಿ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಜನಾಂದೋಲನ ನಡೆಸಿ ಜನ ಜಾಗೃತಿ ಮೂಡಿಸಲಾಗುವುದು ಎಂದರು.

ಆಮ್ ಆದ್ಮಿ ಪಕ್ಷವು ಬಡವರ ಪರ ಪಕ್ಷವಾಗಿದ್ದು, ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಯು ಸಮೀಪಿಸುತ್ತಿದ್ದು, ಸೂಕ್ತ ಅಭ್ಯರ್ಥಿಯನ್ನು ಸೂಚಿಸಿದರೆ ಅಂತಹ ವ್ಯಕ್ತಿಗಳಿಗೆ ಪಕ್ಷದಿಂದ ಟಿಕೆಟ್ ನೀಡುತ್ತೇವೆ. ಅವರನ್ನು ಗೆಲ್ಲಿಸಿ ಅಧಿಕಾರ ಹಿಡಿಯುವುದು ನಿಮ್ಮೆಲ್ಲರ ಹೊಣೆ ಎಂದರು.

ಮುಖಂಡ ಬಿ.ಎನ್.ನಟರಾಜು ಮಾತನಾಡಿ, ಪ್ರಭಾನಗರ ಹಾಡಿ ಸೇರಿದಂತೆ ಸುತ್ತಮುತ್ತ ಗ್ರಾಮಗಳಿಗೆ ವಿದ್ಯುತ್, ಕುಡಿಯುವ ನೀರಿನ ಸೌಲಭ್ಯವಿಲ್ಲ. ಅದನ್ನು ಬಗೆಹರಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ. 2006ರ ಅರಣ್ಯ ಹಕ್ಕು ಕಾಯ್ದೆ ಹಾಗೂ 2014ರ ಡಾ. ಮುಜಾಫರ್ ಅಸ್ಸಾದಿ ಅವರ ವರದಿ ಜಾರಿಯಾದರೆ ಮಾತ್ರ ಆದಿವಾಸಿಗಳ ಸಮಸ್ಯೆ ಪರಿಹರಿಸಿದಂತಾಗುತ್ತದೆ ಎಂದರು.

ಸಭೆಯಲ್ಲಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಟಿ. ನಾಗಣ್ಣ, ರಾಜ್ಯ ಉಪಾಧ್ಯಕ್ಷ ನಂಜಪ್ಪ ಕಾಳೇಗೌಡ, ಸೋಸಲೆ ಸಿದ್ದರಾಜು, ಮುಖಂಡರಾದ ಬಿ.ಎನ್. ನಟರಾಜು, ನಾಗರಾಜು ಕಟ್ಟೇಮನುಗನಹಳ್ಳಿ, ಮಣಿಕಂಠ, ಪುಟ್ಟಣ್ಣ, ದೇವಲಾಪುರ, ಕೃಷ್ಣ ಸರಗೂರು, ಕಾಳಪ್ಪ, ಗೀತಾ ತುಂಬಸೋಗೆ, ಮಹದೇವಸ್ವಾಮಿ ಹೈರಿಗೆ, ಶಿವಕುಮಾರ್ ಹಾಗೂ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.