ಗುಂಡ್ಲುಪೇಟೆ: ತಾಲೂಕಿನ ಕಗ್ಗಳದಹುಂಡಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗಿರಿಜನ ಹಾಡಿಗಳಿಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಸಾಂಕ್ರಾಮಿಕ ರೋಗಗಳ ಬಗ್ಗೆ ಅರಿವು ಮೂಡಿಸಿ ಪೌಷ್ಟಿಕಾಂಶವಿರುವ ಟಾನಿಕ್ ವಿತರಣೆ ಮಾಡಿದರು.
ಮದ್ದೂರು ಕಾಲನಿಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚಿದಂಬರ ಹಾಗೂ ತಾಲೂಕು ಆರೋಗ್ಯಾಧಿಕಾರಿ ಡಾ.ಅಲಿಂ ಪಾಷ ಮತ್ತು ಆರೋಗ್ಯ ಸಿಬ್ಬಂದಿ ಹಾಡಿಯ ಎಲ್ಲ ಮನೆ ಮನೆಗಳಿಗೂ ಭೇಟಿ ನೀಡಿ ಸಾಂಕ್ರಾಮಿಕ ರೋಗಗಳು, ರಕ್ತಹೀನತೆಯ ಬಗ್ಗೆ ಮಾಹಿತಿ ನೀಡಿದರು. ಇವರಿಗೆ ಸೂಕ್ತ ಸಮಯದಲ್ಲಿ ಸರಿಯಾದ ಚಿಕಿತ್ಸೆ ನೀಡಲು ಸಿಬ್ಬಂದಿಗೆ ಮಾರ್ಗದರ್ಶನ ನೀಡಿದರು. ಅಪೌಷ್ಟಿಕತೆ ಇರುವ ಮಕ್ಕಳಿಗೆ ಪ್ರೋಟಿನ್ ಪೌಡರ್ ಮತ್ತು ರಕ್ತ ಪುಷ್ಟಿ ಟಾನಿಕ್‌ಗಳನ್ನು ವಿತರಿಸಿದರು. ಕಳೆದ ತಿಂಗಳು ಪ್ರಾಥಮಿಕ ಆರೋಗ್ಯ ಕೇಂದ್ರ ಮಂಗಲ ವ್ಯಾಪ್ತಿಗೆ ಬರುವ ಗುಡ್ಡೆಕೆರೆಗೆ ಭೇಟಿ ನೀಡಿ ಅಲ್ಲಿನ ಗರ್ಭಿಣಿಯರಿಗೆ ಪ್ರೋಟಿನ್ ಪೌಡರ್ ಮತ್ತು ರಕ್ತಪುಷ್ಟಿ ಟಾನಿಕ್‌ಗಳನ್ನು ವಿತರಿಸಲಾಗಿತ್ತು.