ಹನೂರು: ಸೋಲಿಗರ ಹಾಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದೆ… ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿವೆ… ಸ್ಮಶಾನವಿಲ್ಲದೆ ಅಂತ್ಯಕ್ರಿಯೆ ನಡೆಸಲು ಪರದಾಡುವಂತಾಗಿದೆ… ಮಧ್ಯವರ್ತಿಗಳ ಹಾವಳಿ ತಪ್ಪಿಸಿ….
ಇದು ಪಿ.ಜಿ.ಪಾಳ್ಯ ಗ್ರಾಪಂ ವ್ಯಾಪ್ತಿಯ ಜೀರಿಗೆಗದ್ದೆ ಬುಡಕಟ್ಟು ಆಶ್ರಮ ಶಾಲೆಯ ಆವರಣದಲ್ಲಿ ಸೋಮವಾರ ಕಂದಾಯ ಇಲಾಖೆ ವತಿಯಿಂದ ತಹಸೀಲ್ದಾರ್ ಆನಂದಯ್ಯ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ಧ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಗ್ರಾಮಸ್ಥರಿಂದ ಕೇಳಿಬಂದ ದೂರುಗಳು.
ಜಿಲ್ಲಾ ಬುಡಕಟ್ಟು ಅಭಿವೃದ್ಧಿ ಸಂಘದ ಅಧ್ಯಕ್ಷ ಮಹಾದೇವ ಮಾತನಾಡಿ, ತಾಲೂಕಿನಲ್ಲಿ 80ಕ್ಕೂ ಹೆಚ್ಚು ಗಿರಿಜನರ ಪೋಡುಗಳಿವೆ. ಇದರಲ್ಲಿ ಬಹುತೇಕ ಹಾಡಿಗಳಲ್ಲಿ ಹಲವು ವರ್ಷಗಳಿಂದ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದ್ದು, ಇದೀಗ ವಿಪರೀತವಾಗಿದೆ. ಇದರಿಂದ ಕೂಲಿ ಕಾರ್ಮಿಕರು ಹಣವನ್ನೆಲ್ಲಾ ಕುಡಿತಕ್ಕೆ ವಿನಿಯೋಗಿಸುತ್ತಿದ್ದು, ಕುಟುಂಬಗಳಲ್ಲಿ ಗಲಾಟೆಗೆ ಕಾರಣವಾಗಿದೆ. ಹಾಗಾಗಿ ಹಾಡಿಗಳಲ್ಲಿ ನೆಮ್ಮದಿಯ ವಾತಾವರಣ ಇಲ್ಲದಂತಾಗಿದೆ ಎಂದು ಆರೋಪಿಸಿದರು.
ಗಿರಿಜನರು ಹೆಚ್ಚಿನ ಸಂಖ್ಯೆಯಲ್ಲಿ ಅನಕ್ಷರಸ್ಥರಾಗಿದ್ದಾರೆ. ಇದರಿಂದ ಸಾಮಾಜಿಕ ಭದ್ರತಾ ಯೋಜನೆಯಡಿ ಸವಲತ್ತು ಪಡೆಯಬೇಕಾದರೆ ಫಲಾನುಭವಿಗಳಿಂದ ಮಧ್ಯವರ್ತಿಗಳು ಹಣ ವಸೂಲಿ ಮಾಡುತ್ತಿದ್ದಾರೆ. ಇತ್ತ ಸ್ಮಶಾನವಿಲ್ಲದ ಪರಿಣಾಮ ಶವವನ್ನು ಕಾಡಿನಲ್ಲೇ ಅಂತ್ಯಸಂಸ್ಕಾರ ನೆರವೇರಿಸಬೇಕಾದ ಅನಿವಾರ್ಯತೆ ಇದ್ದು ತೊಂದರೆಯಾಗಿದೆ ಎಂದು ದೂರಿದರು.
ಕೊರಮನಕತ್ತರಿ ಗ್ರಾಮದ ನಾರಾಯಣಶೆಟ್ಟಿ ಮಾತನಾಡಿ, ಈ ಹಿಂದೆ ಸರ್ಕಾರದಿಂದ 10 ಕೆ.ಜಿ. ಪಡಿತರ ಅಕ್ಕಿಯನ್ನು ವಿತರಿಸಲಾಗುತ್ತಿತ್ತು. ಆದರೆ ಇದೀಗ 3 ಕೆ.ಜಿ. ಅಕ್ಕಿ ಕಡಿತಗೊಳಿಸಲಾಗಿದೆ. ಕೆಲವರು ಪಡಿತರ ಅಕ್ಕಿಯನ್ನು ಖರೀದಿಸಿ ಮಾರಾಟ ಮಾಡುತ್ತಿದ್ದಾರೆ. ಆದ್ದರಿಂದ ಈ ಬಗ್ಗೆ ಅಗತ್ಯ ಕ್ರಮವಹಿಸಿ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ತಹಸೀಲ್ದಾರ್ ಆನಂದಯ್ಯ ಮಾತನಾಡಿ, ತಾಲೂಕು ವ್ಯಾಪ್ತಿಯಲ್ಲಿ ಕಳೆದ 8 ತಿಂಗಳಿನಿಂದ 40ಕ್ಕೂ ಹೆಚ್ಚು ಸ್ಮಶಾನ ಮಂಜೂರು ಮಾಡಲಾಗಿದೆ. ಹಾಗಾಗಿ ಗಿರಿಜನರ ಹಾಡಿಗಳಲ್ಲೂ ಸ್ಮಶಾನ ಮಂಜೂರಿಗೆ ಅಗತ್ಯ ಕ್ರಮವಹಿಸಲಾಗುವುದು. ಇನ್ನುಳಿದ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸುವುದಾಗಿ ಭರವಸೆ ನೀಡಿದರು.
ಸದುಪಯೋಗಪಡಿಸಿಕೊಳ್ಳಿ: ಕಾರ್ಯಕ್ರಮವನ್ನು ಉದ್ಘಾಟಿಸಿದ ತಹಸೀಲ್ದಾರ್ ಆನಂದಯ್ಯ ಮಾತನಾಡಿ, ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ಯೋಜನೆ, ಆರ್‌ಟಿಸಿ ತಿದ್ದುಪಡಿ, ಪೌತಿಖಾತೆ ಬದಲಾವಣೆ, ಜಮೀನು ಅಳತೆ ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದರ ಜತೆಗೆ ಪ್ರಕೃತಿ ವಿಕೋಪದಡಿ ಮನೆ, ಬೆಳೆ ಹಾನಿಗೆ ಸಂಬಂಧಿಸಿದಂತೆ ಪರಿಹಾರದಿಂದ ವಂಚಿತರಾದವರು ಅರ್ಜಿ ಸಲ್ಲಿಸಲು, ವಿವಿಧ ಇಲಾಖೆಗಳಲ್ಲಿ ಸಿಗುವ ಸವಲತ್ತುಗಳನು ಪಡೆಯಲು, ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಳ್ಳಲು ಸರ್ಕಾರ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದರು.
ಇದರಿಂದ ಸಾರ್ವಜನಿಕರು ಕಚೇರಿಗೆ ಅಲೆಯುವುದು ತಪ್ಪಿದಂತಾಗಿದೆ. ಹೀಗಾಗಿ ಜಿಲ್ಲೆಯ ಒಂದು ಗ್ರಾಮದಲ್ಲಿ ಜಿಲ್ಲಾಧಿಕಾರಿಗಳು ವಾಸ್ತವ್ಯ ಹೂಡಿದರೆ ತಾಲೂಕಿನಲ್ಲಿ ತಹಸೀಲ್ದಾರ್ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಬಗೆಹರಿಸಬಹುದಾದ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಲಾಗುವುದು. ಕೆಲವೊಂದನ್ನು ನಿಗದಿತ ಅವಧಿಯೊಳಗೆ ಪರಿಹರಿಸಲು ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.