ಚಾಮರಾಜನಗರ: ಜಿಲ್ಲೆಯಲ್ಲಿ ಬುಡಕಟ್ಟು ಸಮುದಾಯದ ಮಕ್ಕಳಿಗಾಗಿ ಇರುವ ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ಆಶ್ರಮ ಶಾಲೆಗಳಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ದಾಖಲಾತಿಯನ್ನು ಹೆಚ್ಚಳ ಮಾಡುವ ಗುರಿಯನ್ನು ಹೊಂದಲಾಗಿದೆ.
ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಚಾಮರಾಜನಗರ ತಾಲೂಕಿನಲ್ಲಿ 6, ಯಳಂದೂರು ತಾಲೂಕಿನಲ್ಲಿ 1, ಗುಂಡ್ಲುಪೇಟೆ ತಾಲೂಕಿನಲ್ಲಿ 3, ಹನೂರು ತಾಲೂಕಿನಲ್ಲಿ 8, ಕೊಳ್ಳೇಗಾಲ ತಾಲೂಕಿನಲ್ಲಿ 2 ಸೇರಿ ಒಟ್ಟು 20 ಆಶ್ರಮ ಶಾಲೆಗಳಿವೆ. ಇಲ್ಲಿ 1ರಿಂದ 6ನೇ ತರಗತಿವರೆಗೆ ವ್ಯಾಸಂಗ ಮಾಡಲು ಅವಕಾಶವಿತ್ತು. ಆದರೆ ಈ ಸಲ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ 7ನೇ ತರಗತಿ ಆರಂಭಕ್ಕೆ ಅವಕಾಶ ಸಿಕ್ಕಿದೆ.
ಆದಿವಾಸಿಗಳ ಮಕ್ಕಳು ವ್ಯಾಸಂಗ ಮಾಡುವ ಈ ಶಾಲೆಗಳು ಬೇರೆ ಶಾಲೆಗಳಿಂತಲೂ ವಿಶೇಷವಾದವು. ಕಾಡಿನಲ್ಲಿ ವಾಸ ಮಾಡುವ ಜನರು ನಾಗರೀಕ ಸಮಾಜದಿಂದ ದೂರ ಉಳಿದಿದ್ದಾರೆ. ಇವರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಆಶ್ರಮ ಶಾಲೆಗಳು ಕಾಡಿನ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡುವಲ್ಲಿ ಮಹತ್ವದ ಪಾತ್ರವಹಿಸಿದೆ. ಈ ಸಲದ ಶೈಕ್ಷಣಿಕ ವರ್ಷದಲ್ಲಿ ಕಳೆದ ವರ್ಷಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸುವ ಗುರಿಯನ್ನು ಇಲಾಖೆ ಹೊಂದಿದೆ.
ಕಳೆದ ವರ್ಷ ದಾಖಲಾತಿ ಎಷ್ಟು?:
2024-25ನೇ ಸಾಲಿನ ವಾಲ್ಮಕೀ ಆಶ್ರಮ ಶಾಲೆಗಳಲ್ಲಿ ಕಳೆದ ವರ್ಷ 1562 ವಿದ್ಯಾರ್ಥಿಗಳು ದಾಖಲಾಗಿದ್ದರು. ಚಾಮರಾಜನಗರ ತಾಲೂಕಿನ ಕೆ.ಗುಡಿ ಆಶ್ರಮ ಶಾಲೆಯಲ್ಲಿ 99, ಮುರಟಿಪಾಳ್ಯ ಶಾಲೆಯಲ್ಲಿ 70, ರಂಗಸಂದ್ರ ಶಾಲೆಯಲ್ಲಿ 60, ಕೋಳಿಪಾಳ್ಯ ಶಾಲೆಯಲ್ಲಿ 94, ಪುಣಜನೂರು ಶಾಲೆಯಲ್ಲಿ 73, ಬೇಡಗುಳಿ ಶಾಲೆಗಳಲ್ಲಿ 51 ಸೇರಿ ಒಟ್ಟು 447 ವಿದ್ಯಾರ್ಥಿಗಳು ದಾಖಲಾಗಿದ್ದರು.
ಯಳಂದೂರು ತಾಲೂಕಿನ ಪುರಾಣಿಪೋಡು ಆಶ್ರಮ ಶಾಲೆಯಲ್ಲಿ 37 ವಿದ್ಯಾರ್ಥಿಗಳು ದಾಖಲಾಗಿದ್ದರು. ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಶಾಲೆಯಲ್ಲಿ 31, ಮದ್ದೂರು ಶಾಲೆಯಲ್ಲಿ 71, ಬರಗಿ ಶಾಲೆಯಲ್ಲಿ 68 ಸೇರಿ ಒಟ್ಟು 170 ವಿದ್ಯಾರ್ಥಿಗಳು, ಹನೂರು ತಾಲೂಕಿನ ಗಾಣಿಗ ಮಂಗಲ ಶಾಲೆಯಲ್ಲಿ 50, ಮಲೆ ಮಹದೇಶ್ವರ ಬೆಟ್ಟ ಶಾಲೆಯಲ್ಲಿ 166, ಪೊನ್ನಾಚಿ ಶಾಲೆಯಲ್ಲಿ 150, ಕೋಣನಕೆರೆ ಶಾಲೆಯಲ್ಲಿ 153, ಹಿರಿಯಾಂಬಲ ಶಾಲೆಯಲ್ಲಿ 58, ಜೀರಿಗೆಗದ್ದೆ ಶಾಲೆಯಲ್ಲಿ 87, ಬೈಲೂರು ಶಾಲೆಯಲ್ಲಿ 50, ನೆಕ್ಕುಂದಿ ಶಾಲೆಯಲ್ಲಿ 126 ಸೇರಿ ಒಟ್ಟು 840 ವಿದ್ಯಾರ್ಥಿಗಳು, ಕೊಳ್ಳೇಗಾಲ ತಾಲೂಕಿನ ಕಂಚಳ್ಳಿ ಶಾಲೆಯಲ್ಲಿ 18, ರಾಜಪ್ಪಾಜಿ ನಗರ ಶಾಲೆಯಲ್ಲಿ 50 ಒಟ್ಟು 68 ವಿದ್ಯಾರ್ಥಿಗಳು ದಾಖಲಾಗಿದ್ದರು. ಜಿಲ್ಲೆಯಲ್ಲಿ ಒಟ್ಟಾರೆಯಾಗಿ 1562 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು.
2024-25ನೇ ಸಾಲಿನಲ್ಲಿ ಪರಿಶಿಷ್ಟ ವರ್ಗದ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಿಗೆ ತರಗತಿವಾರು ದಾಖಲಾಗಿದ್ದ ವಿದ್ಯಾರ್ಥಿಗಳ ವಿವರ ಗಮನಿಸುವುದಾದರೆ, ಚಾಮರಾಜನಗರ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ 53, ಬಾಲಕರ ವಿದ್ಯಾರ್ಥಿ ನಿಲಯದಲ್ಲಿ 120, ಕೊಳ್ಳೇಗಾಲದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ 92, ಗುಂಡ್ಲುಪೇಟೆ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ 9, ಒಟ್ಟು 274 ವಿದ್ಯಾರ್ಥಿಗಳಿದ್ದರು.
ದಾಖಲಾತಿ ಆಂದೋಲನ:
ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಆಶ್ರಮ ಶಾಲೆಗಳ ದಾಖಲಾತಿ ಹೆಚ್ಚಳ ಮಾಡಲು ಆಂದೋಲನ ನಡೆಸಲಾಗುತ್ತಿದೆ. ಚಾಮರಾಜನಗರ, ಹನೂರು, ಕೊಳ್ಳೇಗಾಲ, ಯಳಂದೂರು, ಗುಂಡ್ಲುಪೇಟೆಯ ಹಾಡಿ, ಪೋಡುಗಳಿಗೆ ಭೇಟಿ ನೀಡಿ ಶಾಲಾ ದಾಖಲಾತಿ ಆಂದೋಲನ ಮಾಡಲಾಗುತ್ತಿದೆ. ಪ್ರತಿ ಬೀದಿಗಳಲ್ಲೂ ಸಂಚಾರ, ಬ್ಯಾನರ್ ಪ್ರದರ್ಶನ, ಕರ ಪತ್ರ ವಿತರಣೆ, ಧ್ವನಿ ವರ್ಧಕದ ಮೂಲಕ ಪಾಲಕರಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ.
7ನೇ ತರಗತಿ ಆರಂಭ: 2025-26ನೇ ಸಾಲಿನಿಂದ ಆಶ್ರಮ ಶಾಲೆಗಳಲ್ಲಿ 7ನೇ ತರಗತಿ ಆರಂಭಿಸುವುದಾಗಿ ರಾಜ್ಯ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ೋಷಣೆ ಮಾಡಿದ್ದಾರೆ. ಬುಡಕಟ್ಟು ಜನಾಂಗದ ಶೈಕ್ಷಣಿಕ ಉದ್ದೇಶಕ್ಕಾಗಿ ಸ್ಥಾಪಿಸಲಾಗಿರುವ 78 ಬುಡಕಟ್ಟು ವಸತಿ ಶಾಲೆಗಳಲ್ಲಿ 2025-26ನೇ ಸಾಲಿನಿಂದ 7ನೇ ತರಗತಿಯನ್ನು ಪ್ರಾರಂಭಿಸಲಾಗುವುದು. ಚಾಮರಾಜನಗರ, ಮೈಸೂರು ಮತ್ತು ಕೊಡುಗ ಜಿಲ್ಲೆಗಳಲ್ಲಿನ 5 ವಸತಿ ಶಾಲೆಗಳನ್ನು 12ನೇ ತರಗತಿಯವರೆಗೆ ಮೇಲ್ದರ್ಜೆಗೇರಿಸಲಾಗುವುದು ಎಂದು ಸಿಎಂ ತಿಳಿಸಿದ್ದರು. ಅದರಂತೆ ಈ ಸಾಲಿನಿಂದ ಆಶ್ರಮ ಶಾಲೆಗಳಲ್ಲಿ 7ನೇ ತರಗತಿ ಆರಂಭವಾಗಿದ್ದು, ದಾಖಲಾತಿ ನಡೆಯುತ್ತಿದೆ.
ಈ ಸಲ ಆಶ್ರಮ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಳವಾಗಲಿದೆ. ಕೆರೆದಿಂಬ, ಗೊಂಬೆಗಲ್ಲು, ನೆಲ್ಲಿಕತ್ರಿಗೆ ಸ್ವತಃ ನಾನೇ ಹೋಗಿ ಮಕ್ಕಳನ್ನು ಶಾಲೆಗೆ ಸೇರಿಸಲು ಪಾಲಕರನ್ನು ಕೋರಿದ್ದೇನೆ. ತಾಲೂಕು ಮಟ್ಟದ ಅಧಿಕಾರಿಗಳು ಹಾಡಿ, ಪೋಡುಗಳಲ್ಲಿ ದಾಖಲಾತಿ ಆಂದೋಲನ ನಡೆಸುತ್ತಿದ್ದಾರೆ. ಬಿಂದ್ಯಾ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ, ಚಾಮರಾಜನಗರ