ಮೈಸೂರು: ಹಾಡಿ ಜನರು ನಮ್ಮ ಸಂಸ್ಕೃತಿಯ ಬಹು ಮುಖ್ಯ ಭಾಗವಾಗಿದ್ದು, ಅವರಿಗೆ ಎಲ್ಲ ರೀತಿಯ ಮೂಲಸೌಕರ್ಯ ಸಿಗುವಂತೆ ನೋಡಿಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಎಸ್.ಸಂಗ್ರೇಶಿ ಹೇಳಿದರು.
ಜಿಲ್ಲಾ ವಕೀಲರ ಸಂಘ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಮೈಸೂರು ವಿವಿ ಸಮಾಜಸೇವಾ ಕಾರ್ಯ ಅಧ್ಯಯನ ವಿಭಾಗದ ಸಹಯೋಗದಲ್ಲಿ ಇತ್ತೀಚೆಗೆ ಎಚ್.ಡಿ.ಕೋಟೆ ತಾಲೂಕಿನ ಮೇಟಿಕುಪ್ಪೆ ಹಾಡಿಯ ಸರ್ಕಾರಿ ಬುಡಕಟ್ಟು ಆಶ್ರಮ ಶಾಲೆಯಲ್ಲಿ ಆಯೋಜಿಸಿದ್ದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮದಲ್ಲಿ ಮಾತನಾಡಿದರು. ಬುಡಕಟ್ಟು ಜನರ ಹಕ್ಕುಗಳ ರಕ್ಷಣೆಗೆ ಕಾನೂನು ಸದಾ ಸಿದ್ಧವಾಗಿರುತ್ತದೆ. ಹಾಡಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಮಕ್ಕಳ ರಕ್ಷಣಾ ಕಾಯ್ದೆ ಕುರಿತು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶೈನಾ ಖಮ್ರೋಜ್ ಉಪನ್ಯಾಸ ನೀಡಿದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ.ಮಹದೇವಸ್ವಾಮಿ ಇದ್ದರು.